ತಿಳವಳ್ಳಿ: ಮಳೆ ಕೊರತೆ, ಬರಗಾಲದಿಂದ ಬೆಳೆದ ಬೆಳೆ ಕೈಸೇರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಈ ಗ್ರಾಮದ ರೈತರು ಸೊಪ್ಪು–ತರಕಾರಿ ಬೆಳೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಹಾನಗಲ್ ತಾಲ್ಲೂಕಿನ ಬ್ಯಾತನಾಳ ಗ್ರಾಮ ಸೊಪ್ಪು, ತರಕಾರಿ ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿ ಸುಮಾರು 300 ಮನೆಗಳಿದ್ದು, ಶೇ 90ರಷ್ಟು ರೈತರು ಪ್ರಧಾನ ಬೆಳೆಯೊಂದಿಗೆ, ತರಕಾರಿಯನ್ನೂ ಬೆಳೆಯುತ್ತಾರೆ. ಇದರಿಂದ ಪ್ರಮುಖ ಬೆಳೆ ನಷ್ಟವಾದರೂ, ಸೊಪ್ಪು–ತರಕಾರಿ ಈ ರೈತರ ಕೈಹಿಡಿಯುತ್ತಿವೆ.
‘ಕನಿಷ್ಠ ಅರ್ಧ ಎಕರೆಯಲ್ಲಿ ತರಕಾರಿ ಬೆಳೆಯಬೇಕಾದರೂ ₹30,000 ಸಾವಿರದವರೆಗೆ ಖರ್ಚು ಬರುತ್ತದೆ. ತರಕಾರಿ ಬಿತ್ತನೆ ಬೀಜಕ್ಕೆ ಹೆಚ್ಚು ಹಣ ಬೇಕು. ಇದಕ್ಕೇ ₹20,000 ವೆಚ್ಚವಾಗುತ್ತದೆ. ಮಡಿ ಮಾಡಿ, ಬೀಜ ಬಿತ್ತಿ, ತರಕಾರಿ ಕೈಸೇರಿ, ಮಾರುಕಟ್ಟೆಗೆ ಸಾಗಿಸಲು 45ರಿಂದ 50 ದಿನಗಳು ಬೇಕು. ಒಂದು ಬಾರಿಗೆ ಕನಿಷ್ಠ ₹15 ಸಾವಿರ ಲಾಭ ಸಿಗಲಿದೆ’ ಎಂದು ವಸಂತ ಸವಣೂರು ತಿಳಿಸಿದರು.
‘ಸೊಪ್ಪು–ತರಕಾರಿ ಬೆಳೆಯುವುದರಿಂದ ನಷ್ಟ ಕಡಿಮೆ. ಹಾಕಿದ ಹಣಕ್ಕೆ ಮೋಸವಿಲ್ಲ. ಈಚೆಗೆ ಬಿಳಿರೋಗ ಮತ್ತು ಕೀಟ ಕಾಟ ಹೆಚ್ಚುತ್ತಿದೆ. ಕ್ರಿಮಿನಾಶಕಗಳ ಸಿಂಪಡಣೆ ಅನಿವಾರ್ಯವಾಗಿದೆ. ಮಾರುಕಟ್ಟೆಯಲ್ಲಿ ದರ ತೀರಾ ಏರುಪೇರು ಆದಾಗ ಮಾತ್ರ ನಷ್ಟ ಅನುಭವಿಸಬೇಕಾಗುತ್ತದೆ’ ಎಂದರು.
ಬಿತ್ತನೆಯಿಂದ ಹಿಡಿದು, ಕೊಯ್ಲು ಮಾಡಿ, ಮಾರುಕಟ್ಟೆಗೆ ಸಾಗಿಸುವವರೆ ಮನೆ ಮಂದಿಯೆಲ್ಲ ನೆರವಾಗುತ್ತಾರೆ. ಇಲ್ಲಿ ಬೆಳೆಯುವ ಸೊಪ್ಪು–ತರಕಾರಿ, ಕಾರವಾರ, ಶಿರಸಿ, ಅನವಟ್ಟಿ, ಹಾವೇರಿ ಸುತ್ತಲಿನ ಸಂತೆಗಳಿಗೆ ರವಾನೆಯಾಗುತ್ತದೆ.
50 ಎಕರೆಯಲ್ಲಿ ಬೆಳೆ ‘ಇಲ್ಲಿನ ಜಮೀನುಗಳಲ್ಲಿ ಎಕರೆಗೆ ಕನಿಷ್ಠ ಕಾಲು ಭಾಗವನ್ನು ಸೊಪ್ಪು–ತರಕಾರಿ ಬೆಳೆಯಲು ಮೀಸಲಿಡುತ್ತಾರೆ. ಸೊಪ್ಪು–ತರಕಾರಿ ಬೆಳೆ ಹೆಚ್ಚು ನೀರು ಬೇಡುವುದಿಲ್ಲ. ಕೂಲಿಕಾರರ ಅವಶ್ಯಕತೆಯೂ ಇಲ್ಲ. ಮನೆಯ ಸದಸ್ಯರೇ ಕೆಲಸ ನಿರ್ವಹಿಸುತ್ತಾರೆ. ಈ ಗ್ರಾಮದಲ್ಲಿ ಸುಮಾರು 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸೊಪ್ಪು–ತರಕಾರಿ ಬೆಳೆಯುತ್ತಾರೆ ಎಂಬುದೇ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.