ಹಾವೇರಿ: ಸಜ್ಜನರೇ... ಪರಿಮಳ ಸೂಸುವ ಕೈತೋಟವನ್ನು ನಿರ್ಮಿಸಿದ್ದೇವೆ ದಯವಿಟ್ಟು ಇಲ್ಲಿ ಕಸವನ್ನು ಹಾಕಬೇಡಿ.
ಹೌದು! ಇದು ಮಂಜುನಾಥನಗರದ ಎ’ಬ್ಲಾಕ್‌ನಲ್ಲಿರುವ ರವೀಂದ್ರ ಅಂಗಡಿ ಅವರು ತಮ್ಮ ಮನೆಯ ಪಕ್ಕದಲ್ಲಿ ಅಳವಡಿಸಿದ ಸೂಚನಾ ಫಲಕ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಈ ಮೂಲಕ ಅವರು ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠವನ್ನು ಹೇಳುತ್ತಿದ್ದಾರೆ.
ನಾನು 2004ರಲ್ಲಿ ಇಲ್ಲಿ ಮನೆ ಕಟ್ಟಿಸಿದಾಗ ಸುತ್ತಲೂ ತೆಂಗಿನ ಗರಿ, ಪ್ಲಾಸ್ಟಿಕ್, ಮುಸುರೆ ನೀರುಗಳನ್ನು ಚೆಲ್ಲುತ್ತಿದ್ದರು. ಹಂದಿಗಳ ಕಾಟವೂ ವಿಪರೀತವಾಗಿತ್ತು. ಅದೆಲ್ಲವನ್ನೂತೆರವು ಮಾಡಿ ಆ ಜಾಗದಲ್ಲಿ ಸೂಚನಾ ಫಲಕವನ್ನು ಅಳವಡಿಸಿದೆ. ಅಂದಿನಿಂದಲೇ ಕಸ ಚೆಲ್ಲುವುದು ಕಡಿಮೆಯಾಯಿತು. ಇದರಿಂದ ಸ್ವಚ್ಛತೆಯ ಬಗ್ಗೆ ಪಾಠವು ಸಾರ್ವಜನಿಕರಿಗೆ ಸಿಕ್ಕಿತು ಎಂದು ರವೀಂದ್ರ ಅಂಗಡಿ ಹೇಳುತ್ತಾರೆ.
ಸಂಜೆ ಹಾಗೂ ಬೆಳಿಗ್ಗೆ ಹೊತ್ತು ವಾಕಿಂಗ್ ಹೋಗುವಾಗ ಸ್ಥಳೀಯರು ಹೂವಿನ ಅಂದ ಹಾಗೂ ಪರಿಮಳವನ್ನು ಸವಿಯುತ್ತಾರೆ. ಪೂಜೆಗೆ ಬೇಕಾದರೆ ಹೂವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಯಾರೂ ಅದನ್ನು ತೆಗೆದುಕೊಂಡು ಹೋಗದಿದ್ದರೆ ಉದುರುತ್ತವೆ. ಅಲ್ಲದೆ, ವರ್ಷಕ್ಕೆ ಮೂರು ಬಾರಿ ಫಲ ಕೊಡುವ ಕಸಿ ಮಾಡಿದ ಮಾವಿನ ಹಣ್ಣಿನ ಗಿಡ ಹಾಗೂ ಕಿತ್ತಳೆ ಹಣ್ಣಿನ ಗಿಡವೂ ರವೀಂದ್ರ ಅವರ ಮನೆಯ ಅಂಗಳದಲ್ಲಿ ಇದೆ. .
ಮನೆಯ ಆವರಣದಲ್ಲಿ ಬೇರೆ ಬೇರೆ ಜಾತಿಯ ಹೂವು, ಔಷಧಿ ಹಾಗೂ ಅಲಂಕಾರಿಕ ಸಸ್ಯಗಳನ್ನು ಬೆಳೆದಿದ್ದೇವೆ. ‘ರಾತ್‌ಕಾ ರಾಣಿ’, ‘ದಿನ್‌ಕಾ ರಾಜಾ’(ರಾತ್ರಿ ಮತ್ತು ಬೆಳಿಗ್ಗೆ ಪರಿಮಳ ಬೀರುವ ಹೂವು), ಪಾರಿಜಾತ, 5 ಬಗೆಯ ದಾಸವಾಳ, ಪನ್ನೀರಎಲೆ, ಅಶ್ವಗಂಧ, ಮೂರು ಬಗೆಯ ಸಂಪಿಗೆ ಹೂವಿನ ಗಿಡ, ಕಾಮಕಸ್ತೂರಿ, ದವನದ ಹೂವು, ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ ಹಾಗೂ ಜಾಜಿ ಮಲ್ಲಿಗೆ ಹೂವಿನ ಗಿಡಗಳಿವೆ ಎಂದುರವೀಂದ್ರ ಅವರ ಮಡದಿ ಲತಾ ಹೇಳುತ್ತಾರೆ.
ಕುವೆಂಪು ಅವರೇ ಪ್ರೇರಣೆ:
ಪರಿಸರದ ಹಾಗೂ ಪ್ರಕೃತಿಯ ಬಗ್ಗೆ ಶಿಕ್ಷಕರು ರಾಷ್ಟ್ರಕವಿಕುವೆಂಪು ಅವರನ್ನು ಉದಾಹರಣೆಯಾಗಿಸಿಪ್ರಾಥಮಿಕ ಶಾಲೆಯಲ್ಲಿ ಪಾಠ ಹೇಳುತ್ತಿದ್ದರು. ಅಂದಿನಿಂದ ಹೂವಿನ ಗಿಡಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು. ಬಾಡಿಗೆ ಮನೆಯಲ್ಲಿ ಇರುವಾಗಲೂ ಕುಂಡಗಳಲ್ಲಿ ಬೆಳೆಸುತ್ತಿದ್ದೇ. ಇಷ್ಟೆಲ್ಲ ಮಾಡುವುದಕ್ಕೆ ಕುವೆಂಪು ಅವರೇ ನನಗೆ ಪ್ರೇರಣೆ. ಪ್ರತಿಯೊಬ್ಬರೂ ಮನೆಯಲ್ಲಿ ಈ ಬಗೆಯ ಕೈತೋಟವನ್ನು ನಿರ್ಮಿಸಿಕೊಂಡರೆ ಸ್ವಚ್ಛತೆಯನ್ನು ಕಾಪಾಡಿದಂತಾಗುತ್ತದೆ ಎಂದು ರವೀಂದ್ರ ತಿಳಿಸಿದರು.
ಮಳೇ ನೀರೇ ಗಿಡಗಳಿಗೆ ಆಧಾರ:
ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು 3 ಸಾವಿರ ಲೀ. ಟ್ಯಾಂಕ್‌ನಲ್ಲಿ ಸಂಗ್ರಹಿಸುತ್ತೇವೆ. ಮಳೆಗಾಲ ಮುಗಿದ ಬಳಿಕ ಆ ನೀರನ್ನು ಎಲ್ಲ ಗಿಡಗಳಿಗೆ ನಿತ್ಯ ಒಂದು ಲೋಟ ಹಾಕುತ್ತೇವೆ. ಈ ನೀರು ಗಿಡಗಳಿಗೆ ಪ್ರಾಣ ಶಕ್ತಿಯಾಗಿದೆ. ಅದರೊಟ್ಟಿಗೆ ಕುರಿ ಗೊಬ್ಬರವನ್ನು ತಂದು ಹಾಕುತ್ತೇನೆ ಎನ್ನುತ್ತಾರೆ ಮನೆ ಮಾಲಿಕ ರವೀಂದ್ರ ಅಂಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.