ADVERTISEMENT

ಹಾವೇರಿ: ಚಿತ್ರ, ವಿಡಿಯೊ ಬಳಸಿ ಭ್ರೂಣ ಲಿಂಗ ಪತ್ತೆ

ಅಲ್ಟ್ರಾಸೌಂಡ್‌ ಕೊಠಡಿಯಲ್ಲಿ ಸಂಬಂಧಿಕರಿಗೆ ನಿರ್ಬಂಧ

ಸಂತೋಷ ಜಿಗಳಿಕೊಪ್ಪ
Published 22 ನವೆಂಬರ್ 2024, 23:10 IST
Last Updated 22 ನವೆಂಬರ್ 2024, 23:10 IST
   

ಹಾವೇರಿ: ‘ಗರ್ಭಿಣಿಯರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಂದರ್ಭದಲ್ಲಿ ಮಾನಿಟರ್‌ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿರುವ ಸಂಬಂಧಿಕರು, ಅವುಗಳನ್ನು ಬಳಸಿಕೊಂಡು ಭ್ರೂಣ ಲಿಂಗ ಪತ್ತೆ ಮಾಡಿಸುತ್ತಿದ್ದಾರೆ’ ಎಂದು ರಾಜ್ಯದ ಕೆಲ ರೇಡಿಯಾಲಜಿಸ್ಟ್‌ಗಳು ಹಾಗೂ ವೈದ್ಯರು, ರಾಜ್ಯ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಭ್ರೂಣ ಲಿಂಗ ಪತ್ತೆ ತಡೆಗೆ ಕಠಿಣ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಸ್ಕ್ಯಾನಿಂಗ್‌ ಕೇಂದ್ರದಲ್ಲಿರುವ ಅಲ್ಟ್ರಾಸೌಂಡ್‌ ಕೊಠಡಿಯೊಳಗೆ ಗರ್ಭಿಣಿಯರ ಸಂಬಂಧಿಕರ ಪ್ರವೇಶವನ್ನು ನಿರ್ಬಂಧಿಸಿದೆ.

ರಾಜ್ಯದ ಎಲ್ಲ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಸುತ್ತೋಲೆ ರವಾನಿಸಿರುವ ರಾಜ್ಯ ಸರ್ಕಾರ, ‘ಗರ್ಭಿಣಿ ಹೊರತುಪಡಿಸಿ, ಅವರ ತಾಯಿ–ತಂದೆ ಸೇರಿದಂತೆ ಯಾರೊಬ್ಬರನ್ನೂ ಒಳಗೆ ಕಳುಹಿಸಬಾರದು. ಆಕಸ್ಮಾತ್, ಕಳುಹಿಸಿದ್ದು ಕಂಡುಬಂದರೆ ಕೇಂದ್ರದವರನ್ನು ಹೊಣೆಯನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಾಕೀತು ಮಾಡಿದೆ.

ADVERTISEMENT

ಗರ್ಭಿಣಿಯರ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಸ್ಥಿತಿ ತಿಳಿಯಲು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಬಹುತೇಕ ಗರ್ಭಿಣಿಯರು, ಭಯಪಡುತ್ತಾರೆ. ಹೀಗಾಗಿ, ತಾಯಿ ಅಥವಾ ಸಂಬಂಧಿಕರೊಬ್ಬರನ್ನು ಕೊಠಡಿಯೊಳಗೆ ಕಳುಹಿಸಲಾಗುತ್ತಿತ್ತು.

ಕೊಠಡಿಯೊಳಗೆ ಹೋಗುತ್ತಿದ್ದವರ ಪೈಕಿ ಕೆಲ ಸಂಬಂಧಿಕರು, ಅಲ್ಟ್ರಾಸೌಂಡ್‌ ಮಾನಿಟರ್‌ನಲ್ಲಿ ಬರುವ ಚಿತ್ರಗಳ ಫೋಟೊವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ವಿಡಿಯೊ ಚಿತ್ರೀಕರಣವನ್ನೂ ಮಾಡುತ್ತಿದ್ದರು. ಅದೇ ಫೋಟೊ–ವಿಡಿಯೊವನ್ನು ಪರಿಚಯಸ್ಥ ಸ್ತ್ರೀರೋಗ ತಜ್ಞರು ಹಾಗೂ ರೇಡಿಯಾಲಜಿಸ್ಟ್‌ಗಳಿಗೆ ತೋರಿಸಿ ಲಿಂಗ ತಿಳಿದುಕೊಳ್ಳುತ್ತಿದ್ದರು. ಇಂಥ ಪ್ರಕರಣಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಪಿ.ಸಿ ಮತ್ತು ಪಿ.ಎನ್‌.ಡಿ.ಸಿ. (ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ) ಕಾಯ್ದೆಯ ರಾಜ್ಯ ಸಕ್ಷಮ ಪ್ರಾಧಿಕಾರ ಹಾಗೂ ಆರೋಗ್ಯ ಇಲಾಖೆಯ ಯೋಜನಾ ನಿರ್ದೇಶಕರು, ಅಲ್ಟ್ರಾಸೌಂಡ್ ಕೊಠಡಿಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ಉಲ್ಲೇಖಿಸಿ ಸುತ್ತೋಲೆ ಹೊರಡಿಸಿದ್ದಾರೆ.

‘ಗರ್ಭಿಣಿಯರ ಜೊತೆ ಬರುವ ಸಂಬಂಧಿಕರು, ಅಲ್ಟ್ರಾಸೌಂಡ್ ಕಾರ್ಯವಿಧಾನಗಳ ಫೋಟೊ ಹಾಗೂ ವಿಡಿಯೊ ಬಳಸಿಕೊಂಡು ಲಿಂಗ ತಿಳಿದುಕೊಳ್ಳುತ್ತಿದ್ದಾರೆ. ಕೆಲವರು, ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ’ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

‘ಗರ್ಭಿಣಿಯ ಗಂಡ, ತಾಯಿ ಸೇರಿದಂತೆ ಯಾರೊಬ್ಬರನ್ನೂ ಅಲ್ಟ್ರಾಸೌಂಡ್ ಕೊಠಡಿಯೊಳಗೆ ಕಳುಹಿಸಬಾರದು. ‘ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬುದಾಗಿ ಕೊಠಡಿಯ ಹೊರಗೆ ಫಲಕ ಹಾಕಬೇಕು. ಕೊಠಡಿಯೊಳಗೆ ಹೆಚ್ಚುವರಿ ಮಾನಿಟರ್‌ಗಳನ್ನು ಅಳವಡಿಸಬಾರದು’ ಎಂದು ಸೂಚಿಸಲಾಗಿದೆ.

‘ರಾಜ್ಯದ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು, ಇಮೇಜಿಂಗ್ ಕೇಂದ್ರಗಳು, ಲ್ಯಾಬ್‌ನವರು ಈ ಸುತ್ತೋಲೆ ಪಾಲಿಸಬೇಕು’ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.