ADVERTISEMENT

ಹಾವೇರಿ | ತೋಟಗಾರಿಕೆ ಪ್ರದೇಶ ಹೆಚ್ಚಳ; ರೈತರಿಗೆ ₹76.22 ಕೋಟಿ ವಿಮೆ ಹಣ

ತರಕಾರಿ, ಸಾಂಬಾರು ಬೆಳೆಗೆ ಒತ್ತು: ಕೈ ಹಿಡಿದ ವಿಮೆ

ಸಂತೋಷ ಜಿಗಳಿಕೊಪ್ಪ
Published 17 ಜುಲೈ 2024, 6:45 IST
Last Updated 17 ಜುಲೈ 2024, 6:45 IST
ಹಾವೇರಿ ತಾಲ್ಲೂಕಿನ ಗಣಜೂರು ಬಳಿ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ
ಹಾವೇರಿ ತಾಲ್ಲೂಕಿನ ಗಣಜೂರು ಬಳಿ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ   

ಹಾವೇರಿ: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಹಲವು ರೈತು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ನಾನಾ ಕಾರಣಗಳಿಂದ ಬೆಳೆಗಳಲ್ಲಿ ನಷ್ಟ ಉಂಟಾಗುತ್ತಿದ್ದು, ಕಾಲ ಕಾಲಕ್ಕೆ ಬರುತ್ತಿರುವ ವಿಮೆಯ ಕ್ಲೇಮ್ ರೈತರ ಕೈ ಹಿಡಿಯುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚು ಜನರು ಬೆಳೆಯುವ ಅಡಿಕೆ, ಮೆಣಸಿನಕಾಯಿ, ಶುಂಠಿ, ಮಾವು ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಸೇರಿಸಲಾಗಿದೆ. ಇದೇ ಬೆಳೆಗಳಿಗೆ 2021–22 ಹಾಗೂ 2022–23ನೇ ಸಾಲಿನಲ್ಲಿ 29,495 ರೈತರು ವಿಮೆ ಪಾವತಿ ಮಾಡಿದ್ದರು. ಈ ಪೈಕಿ 27,998 ರೈತರು ಎರಡು ವರ್ಷಗಳಲ್ಲಿ ₹ 76.22 ಕೋಟಿ ಕ್ಲೇಮ್ ಪಡೆದುಕೊಂಡಿದ್ದಾರೆ. ತಾಂತ್ರಿಕ ಹಾಗೂ ಇತರೆ ಕಾರಣಗಳಿಂದ 1,497 ರೈತರು ವಿಮೆಯಿಂದ ವಂಚಿತರಾಗಿದ್ದಾರೆ.

2023–24ರಲ್ಲಿ 23,732 ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಈ ಪೈಕಿ ಬಹುತೇಕರಿಗೆ ಕೆಲ ದಿನಗಳಲ್ಲಿ ವಿಮೆ ಪಾವತಿಯಾಗುವ ಸಾಧ್ಯತೆ ಇದೆ. ಜೊತೆಗೆ, 2024–25ನೇ ಸಾಲಿನ ವಿಮೆ ಪಾವತಿ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ 1,177 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ADVERTISEMENT

‘ತೋಟಗಾರಿಕೆ ಬೆಳೆಗಳ ಮೇಲೆ ವಿಮೆ ಪಾವತಿಸುವ ಬಹುತೇಕ ರೈತರು ಪ್ರತಿವರ್ಷವೂ ಕ್ಲೇಮ್ ಪಡೆಯುತ್ತಿದ್ದಾರೆ. ಈ ವರ್ಷದ ಬೆಳೆ ವಿಮೆ ಪಾವತಿಸಲು ಜುಲೈ 31 ಕೊನೆ ದಿನವಾಗಿದ್ದು, ರೈತರು ವಿಮೆ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ 68,092 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಇದರಿಂದ 8,17,036 ಟನ್‌ ವಾರ್ಷಿಕ ಉತ್ಪನ್ನ ಬರುತ್ತಿದ್ದು, ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದೆ’ ಎಂದು ಹೇಳಿದರು.

‘ಟೊಮೆಟೊ, ಮೆಣಸಿನಕಾಯಿ, ಸೌತೆ ಕಾಯಿ, ಹಿರೇಕಾಯಿ ಸೇರಿದಂತೆ ತರಕಾರಿ ಬೆಳೆಗಳನ್ನು ರೈತರು ಹೆಚ್ಚು ಬೆಳೆಯುತ್ತಿದ್ದಾರೆ. ಜೊತೆಗೆ, ಹಲವು ರೈತರು ಸಾಂಬಾರ ಬೆಳೆಯತ್ತ ಆಸಕ್ತಿ ತೋರಿದ್ದಾರೆ. ಅಡಿಕೆ ಬೆಳೆಯುವ ರೈತರ ಸಂಖ್ಯೆಯೂ ದುಪ್ಪಟ್ಟಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ’ ಎಂದು ತಿಳಿಸಿದರು.

ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಹಾವೇರಿ ಜಿಲ್ಲೆಗೆ ಪ್ರತಿ ವರ್ಷವೂ ಉತ್ತಮ ಕ್ಲೇಮ್ ಬರುತ್ತಿದೆ. ರೈತರು ವಿಮೆ ಪಾವತಿ ಮಾಡಿ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು
-ಪ್ರದೀಪ್, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.