ಹಾವೇರಿ: ಮಳೆ ಬಂದರೆ ಸೋರುವ ಕಟ್ಟಡ, ಆವರಣದಲ್ಲಿ ಹೆಚ್ಚಾಗಿರುವ ಕಸ–ಕಂಟಿ, ತುರ್ತು ಪರಿಸ್ಥಿತಿಯಲ್ಲಿ ಲಭ್ಯವಾಗದ ಚಿಕಿತ್ಸೆ, ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕವಿಲ್ಲದೇ ದಿನದೂಡುತ್ತಿರುವ ಸಿಬ್ಬಂದಿ, ಅರ್ಧಕ್ಕೆ ನಿಂತ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ...
ಜಿಲ್ಲೆಯ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿರುವ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರದ ದುಸ್ಥಿತಿ ಇದು. ಮೂಲಸೌಕರ್ಯಗಳ ಕೊರತೆಯಿಂದಾಗಿ ಕೇಂದ್ರ ಸೊರಗುತ್ತಿದೆ. ಗ್ರಾಮಸ್ಥರ ಹೋರಾಟದ ಫಲವಾಗಿ ಉದ್ಘಾಟನೆಗೊಂಡಿದ್ದ ಕೇಂದ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದಿದ್ದರಿಂದ, ಹುರುಳಿಕುಪ್ಪಿ ಹಾಗೂ ಸುತ್ತಲಿನ ಗ್ರಾಮದ ಜನರು ಪರದಾಡುತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರ ಸ್ಥಾಪಿಸಿ, 2018ರಲ್ಲಿ ಉದ್ಘಾಟನೆ ಮಾಡಲಾಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಅವರು ಉದ್ಘಾಟನೆ ನೆರವೇರಿಸಿದ್ದರು. ಇದಾದ ನಂತರ, ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದರೆ, ಕೇಂದ್ರ ಮಾತ್ರ ಬದಲಾಗಿಲ್ಲ.
ಕೇಂದ್ರವಿರುವ ಕಟ್ಟಡ, ಮಳೆಗಾಲದಲ್ಲಿ ಸೋರುತ್ತಿದೆ. ಕಟ್ಟಡದಲ್ಲಿ ನೀರಿನ ಸೌಲಭ್ಯ ಇಲ್ಲದಿದ್ದರಿಂದ, ಶೌಚಾಲಯ ಬಳಕೆ ಸಂಪೂರ್ಣ ಬಂದ್ ಆಗಿದೆ. ವಿದ್ಯುತ್ ಸಂಪರ್ಕವೂ ಇಲ್ಲದಿದ್ದರಿಂದ, ಸೂರ್ಯನ ಬೆಳಕಿನಲ್ಲಷ್ಟೇ ಕೇಂದ್ರದ ಕೆಲಸಗಳನ್ನು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಹಲವೆಡೆ ಬಿರುಕು ಬಿಟ್ಟಿದೆ. ಕಳಪೆ ಕಾಮಗಾರಿ ಮಾಡಿರುವ ಆರೋಪವೂ ಇದೆ.
ವೈದ್ಯ, ಸ್ಟಾಫ್ ನರ್ಸ್ ಹಾಗೂ ಡಿ ಗ್ರೂಪ್ ದರ್ಜೆ ಸಿಬ್ಬಂದಿ ಮಾತ್ರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹುರುಳಿಕುಪ್ಪಿಯಲ್ಲಿ ಸುಮಾರು 6 ಸಾವಿರ ಜನಸಂಖ್ಯೆ ಇದೆ. ಇಲ್ಲಿಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ತುರ್ತು ಪರಿಸ್ಥಿತಿ ಹಾಗೂ ಯಾವುದಾದರೂ ಆರೋಗ್ಯ ಸಮಸ್ಯೆ ಎದುರಾದರೆ ಪಕ್ಕದ ಊರುಗಳಿಗೆ ಹಾಗೂ ಸವಣೂರಿನಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ಹೋಗುತ್ತಿದ್ದಾರೆ.
ಹುರುಳಿಕುಪ್ಪಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸುವ ಪ್ರಸ್ತಾವವಿದೆ. ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶದ ಜಾರಿ ಪ್ರಕ್ರಿಯೆ ಹಣಕಾಸು ಇಲಾಖೆಯಲ್ಲಿ ಬಾಕಿ ಉಳಿದಿದೆ.ಡಾ. ಚಂದ್ರಕಲಾ, ತಾಲ್ಲೂಕು ಆರೋಗ್ಯಾಧಿಕಾರಿ
‘ನೆಗಡಿ, ಕೆಮ್ಮು ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಕೇಂದ್ರದ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲವು ಬಾರಿ ಮಾತ್ರೆಯಷ್ಟೇ ಕೊಟ್ಟು ಕಳುಹಿಸುತ್ತಿದ್ದಾರೆ. ಆರೋಗ್ಯದಲ್ಲಿ ಏನಾದರೂ ಏರುಪೇರು ಉಂಟಾದರೆ, ತುರ್ತು ಸ್ಥಿತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಅದಕ್ಕಾಗಿ ಸವಣೂರು ಹಾಗೂ ಸುತ್ತಲಿನ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ’ ಎಂದು ಗ್ರಾಮಸ್ಥ ಸಿದ್ದಪ್ಪ ಪೂಜಾರ ಹೇಳಿದರು.
‘ಮನ್ನಂಗಿ, ಕುರುಬರ ಮಲ್ಲೂರು, ಮೆಳ್ಳಿಗಟ್ಟಿ ಹಾಗೂ ಸುತ್ತಲಿನ ಗ್ರಾಮಸ್ಥರು ಸಹ ಹುರುಳಿಕುಪ್ಪಿಯ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರಕ್ಕೆ ಬರುತ್ತಿದ್ದಾರೆ. ಅವರಿಗೂ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಔಷಧ ಹಾಗೂ ಮಾತ್ರೆ ಸಂಗ್ರಹವಿಲ್ಲ. ಎಲ್ಲವನ್ನೂ ಕಳಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಂದು ವಿತರಿಸಲಾಗುತ್ತಿದೆ’ ಎಂದು ದೂರಿದರು.
ಮೇಲ್ದರ್ಜೇಗೇರಿಸುವ ಪ್ರಕ್ರಿಯೆ ವಿಳಂಬ: ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸುವುದಾಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದರು. ಆದರೆ, ಇದುವರೆಗೂ ಮೇಲ್ದರ್ಜೇಗೇರಿಸುವ ಕೆಲಸವಾಗಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.
‘ಕಟ್ಟಡ ಚೆನ್ನಾಗಿದೆ. ಹೆಚ್ಚು ಜಾಗವೂ ಲಭ್ಯವಿದೆ. ಆದರೆ, ಕಳಪೆ ಕಾಮಗಾರಿಯಿಂದ ಹಾಳಾಗಿದೆ. ಹೊರಗಡೆ ಪ್ರಾಥಮಿಕ ಆರೋಗ್ಯ ಕೇಂದ್ರವೆಂದು ಬರೆಸಲಾಗಿದೆ. ಆದರೆ, ಒಳಗಡೆ ಮಾತ್ರ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರವಾಗಿಯೇ ಕಾರ್ಯನಿರ್ವಹಿಸುತ್ತಿದೆ’ ಎಂದು ಗ್ರಾಮಸ್ಥರು ಹೇಳಿದರು.
‘ಪುನಃ ಹೋರಾಟ ಅನಿವಾರ್ಯ’
‘ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರ ಆರಂಭಿಸಲು ನಿರ್ದಿಷ್ಟಾವಧಿ ಹೋರಾಟ ನಡೆಸಲಾಗಿತ್ತು. ಈಗ ಕೇಂದ್ರದಲ್ಲಿ ಮೂಲಸೌಕರ್ಯ ಕಲ್ಪಿಸಲು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೇಗೇರಿಸಲು ಒತ್ತಾಯಿಸಿ ಪುನಃ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಗ್ರಾಮಸ್ಥರು ಹೇಳಿದರು.
‘ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹುರುಳಿಕುಪ್ಪಿಯಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ವಾತಾವರಣ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಜನರಿಗೆ ಗುಣಮಟ್ಟದ ಚಿಕಿತ್ಸೆ ಬೇಕು. ಹೀಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.