ADVERTISEMENT

ಹಾವೇರಿ: ಜೈಲಿನ ಕೈದಿಗಳಿಗೆ ಅಕ್ಷರ ಪಾಠ

ನಿತ್ಯ ಬೆಳಿಗ್ಗೆ, ಸಂಜೆ ವಿಶೇಷ ತರಗತಿ

ಸಂತೋಷ ಜಿಗಳಿಕೊಪ್ಪ
Published 11 ಜೂನ್ 2024, 7:09 IST
Last Updated 11 ಜೂನ್ 2024, 7:09 IST
ಹಾವೇರಿ ಜಿಲ್ಲಾ ಕಾರಾಗೃಹದ ಗ್ರಂಥಾಲಯದಲ್ಲಿ ಕೈದಿಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು
ಹಾವೇರಿ ಜಿಲ್ಲಾ ಕಾರಾಗೃಹದ ಗ್ರಂಥಾಲಯದಲ್ಲಿ ಕೈದಿಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು   

ಹಾವೇರಿ: ಅಪರಾಧ ಮಾಡಿ ಜೈಲು ಸೇರಿರುವ ಅನಕ್ಷರಸ್ಥ ಕೈದಿಗಳಿಗೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯು ಅಕ್ಷರ ಕಲಿಸುತ್ತಿದೆ. ಪ್ರತಿ ದಿನವೂ ನಡೆಯುವ ವಿಶೇಷ ತರಗತಿಗೆ 29 ವಿಚಾರಣಾಧೀನ ಕೈದಿಗಳು ಹಾಜರಾಗುತ್ತಾರೆ. ಅವರಿಗೆ ಕಲಿಕಾ ಸಾಮಗ್ರಿಗಳನ್ನೂ ಉಚಿತವಾಗಿ ನೀಡಲಾಗುತ್ತದೆ.

ಶಾಲೆ ಮೆಟ್ಟಿಲು ಹತ್ತದ ಮತ್ತು ಶಿಕ್ಷಣದಿಂದ ವಂಚಿತರಾದ ವಿಚಾರಣಾಧೀನ ಕೈದಿಗಳನ್ನು ಗುರುತಿಸಿರುವ ಇಲಾಖೆ, ಅವರಿಗೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿ, ನುರಿತ ಶಿಕ್ಷಕರಿಂದ ಪಾಠ ಮಾಡಿಸುತ್ತಿದೆ.

ಕಾರಾಗೃಹದಲ್ಲಿ ಗ್ರಂಥಾಲಯವಿದ್ದು, 3 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಅಲ್ಲಿಯೇ ಪಾಠ ಬೋಧನೆಗೆ ಅವಕಾಶವಿದೆ. ನಿತ್ಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ಮತ್ತು ಸಂಜೆ 4 ರಿಂದ 5.30 ರವರೆಗೆ ವಿಶೇಷ ತರಗತಿ ನಡೆಯುತ್ತವೆ.

ADVERTISEMENT

ಕನ್ನಡ ಓದಲು, ಬರೆಯಲು ಬಾರದ 29 ಕೈದಿಗಳಿಗೆ ಅ, ಆ, ಇ, ಈ ವರ್ಣಮಾಲೆಯಿಂದ ಕಲಿಕೆ ಆರಂಭಿಸಲಾಗಿದೆ.   ‘ಸವಿ ಬರಹ’ ಹಾಗೂ ‘ಬಾಳಿಗೆ ಬೆಳಕು’ ಪುಸ್ತಕಗಳನ್ನು ನೀಡಲಾಗಿದೆ ಕನ್ನಡ ಓದಲು, ಬರೆಯಲು ಬರುವುದರ ಜೊತೆಗೆ ಅವರಿಗೆ ಗಣಿತ ಮತ್ತು ಸಾಮಾನ್ಯ ಜ್ಞಾನವೂ ವೃದ್ಧಿ ಆಗಬೇಕು ಎಂಬುದು ವಿಶೇಷ ತರಗತಿಗಳ ಉದ್ದೇಶ.

‘ಕಾರಾಗೃಹದಲ್ಲಿ ಈಚೆಗೆ ಸಮೀಕ್ಷೆ ನಡೆಸಿದಾಗ, ಅನಕ್ಷರಸ್ಥ ಕೈದಿಗಳು ಇರುವುದು ಗೊತ್ತಾಯಿತು. ಅಂಥವರನ್ನು ಗುರುತಿಸಿ, ಪಾಠ ಮಾಡಲಾಗುತ್ತಿದೆ. ಜೂನ್ 23ರಂದು ಸಾಕ್ಷರತಾ ಪರೀಕ್ಷೆ ನಡೆಯಲಿದ್ದು, ಕೈದಿಗಳು ಹಾಜರಾಗುವರು. ಎಲ್ಲರೂ ಉತ್ತೀರ್ಣರಾಗುವ ವಿಶ್ವಾಸವಿದೆ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ (ಪ್ರಭಾರ) ಡಾ. ಬಿ.ಎಂ. ಬೇವಿನಮರದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾವೇರಿ ಜಿಲ್ಲೆಯಲ್ಲಿ ಒಟ್ಟು 3,806 ಅನಕ್ಷರಸ್ಥರು ಇದ್ದಾರೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಶೇಷ ತರಗತಿಗಳು ನಡೆಸಿದ್ದೇವೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಪರೀಕ್ಷೆ ನಡೆಯುತ್ತದೆ. ಜಿಲ್ಲೆಯ ಎಲ್ಲ ಅನಕ್ಷರಸ್ಥರಿಂದ ಪರೀಕ್ಷೆಗೆ ನೋಂದಣಿ ಮಾಡಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.