ಹಾವೇರಿ: ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಮಿಂಚು ಹರಿಸಿದ್ದ `ಹಾವೇರಿ ಕಾ ರಾಜಾ-49' ಹೆಸರಿನ ಹೋರಿ ಶುಕ್ರವಾರ ಮೃತಪಟ್ಟಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ನಗರದ ಕಲ್ಲು ಮಂಟಪ ಓಣಿಯ ನಿವಾಸಿ ಜಗದೀಶ ಕನವಳ್ಳಿ ಹಾಗೂ ರಾಜು ಕನವಳ್ಳಿ ಕುಟುಂಬದವರಿಗೆ ಸೇರಿದ್ದ 22 ವರ್ಷದ ಹೋರಿ ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದೆ. ಹಾವೇರಿ, ಅಕ್ಕಿ ಆಲೂರು, ಹಾನಗಲ್ಲ, ಶಿರಸಿ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಜರುಗಿದ ನೂರಾರು ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲಿ 40 ಗ್ರಾಂ ಚಿನ್ನದ ಪದಕ, ಎರಡು ಬೈಕ್, ನಾಲ್ಕು ಟ್ರಜರಿ, ಸೈಕಲ್, ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿತ್ತು.
ನಗರದ ಕಲ್ಲು ಮಂಟಪ ಓಣಿಯ ಬಸವೇಶ್ವರ ದೇವಸ್ಥಾನದಿಂದ ಪೂಜೆ ನೆರವೇರಿಸಿ, ವಾದ್ಯ ಮೇಳದೊಂದಿಗೆ ಎಂ.ಜಿ. ರಸ್ತೆ, ಪಿ.ಬಿ. ರಸ್ತೆಯಲ್ಲಿ ಮೃತ ಹೋರಿಯನ್ನು ಮೆರವಣಿಗೆ ಮಾಡಲಾಯಿತು. ಪಿಬಿ ರಸ್ತೆಯ ಕನವಳ್ಳಿ ಅವರ ಜಮೀನಿನಲ್ಲಿ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.
‘ಹಾವೇರಿ ಕಾ ರಾಜಾ’ನನ್ನು 12 ವರ್ಷದಿಂದ ನಮ್ಮ ಮನೆ ಮಗನಂತೆ ಸಾಕಿದ್ದೆವು. ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಕಾಳಜಿಯಿಂದ ನೋಡಿಕೊಂಡಿದ್ದೆವು. ಆದರೂ ಆತ ಬದುಕಲಿಲ್ಲ. ಮನೆಯ ಸದಸ್ಯನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ’ ಎಂದು ಹೋರಿ ಮಾಲೀಕ ಜಗದೀಶ ಕನವಳ್ಳಿ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.