ADVERTISEMENT

ಹಾವೇರಿ: ₹1 ಲಕ್ಷಕ್ಕೆ ‘ಮೈಲಾರಿ’ ಟಗರು ಮಾರಾಟ

* ಬಕ್ರೀದ್: ಟಗರು– ಕುರಿ ಖರೀದಿ ಜೋರು * ಹೊರ ಜಿಲ್ಲೆ– ಹೊರ ರಾಜ್ಯಕ್ಕೆ ಸಾಗಣೆ

ಸಂತೋಷ ಜಿಗಳಿಕೊಪ್ಪ
Published 13 ಜೂನ್ 2024, 12:33 IST
Last Updated 13 ಜೂನ್ 2024, 12:33 IST
<div class="paragraphs"><p>ಹಾವೇರಿ ಸಂತೆಯಲ್ಲಿ ಮಾರಾಟಕ್ಕೆ ತಂದ ಕುರಿಗಳ ಗುಂಪಿನಲ್ಲಿ ಕುರಿಗಾರ – </p></div>

ಹಾವೇರಿ ಸಂತೆಯಲ್ಲಿ ಮಾರಾಟಕ್ಕೆ ತಂದ ಕುರಿಗಳ ಗುಂಪಿನಲ್ಲಿ ಕುರಿಗಾರ –

   

ಪ್ರಜಾವಾಣಿ ಚಿತ್ರ – ಮಾಲತೇಶ ಇಚ್ಚಂಗಿ

ಹಾವೇರಿ: ಬಕ್ರೀದ್ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಹಾವೇರಿಯ ಸಂತೆಯಲ್ಲಿ ಟಗರು ಹಾಗೂ ಕುರಿಗಳ ಖರೀದಿ ಗುರುವಾರ ಜೋರಾಗಿತ್ತು. ‘ಮೈಲಾರಿ’ ಹೆಸರಿನ ಟಗರು ₹1 ಲಕ್ಷಕ್ಕೆ ಮಾರಾಟವಾಯಿತು.

ADVERTISEMENT

ನಗರದ ಹಾನಗಲ್ ರಸ್ತೆಗೆ ಹೊಂದಿಕೊಂಡಿರುವ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಗುರುವಾರ ಸಂತೆ ಜರುಗಿತು. ಕಳೆದ ವಾರಕ್ಕಿಂತ ಈ ಬಾರಿ, ಕುರಿ, ಟಗರು ಹಾಗೂ ಮೇಕೆಗಳ ಸಂಖ್ಯೆ ಹೆಚ್ಚಿತ್ತು. ಮಾರಾಟಗಾರರು ಹಾಗೂ ಖರೀದಿದಾರರೂ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಜೂನ್ 18ರಂದು ಬಕ್ರೀದ್ ಹಬ್ಬವಿದ್ದು, ಹಬ್ಬಕ್ಕೆ ಅಗತ್ಯವಿರುವ ಟಗರು–ಕುರಿಗಳನ್ನು ಖರೀದಿಸಲು ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದಿದ್ದರು. ಕುರಿಗಾರರು ಹಾಗೂ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿ, ತಮ್ಮಿಷ್ಟದ ಕುರಿ– ಟಗರು ಖರೀದಿಸಿ ವಾಹನಗಳಲ್ಲಿ ಕೊಂಡೊಯ್ದರು.

ಆರು ತಿಂಗಳ ಮರಿಯಿಂದ ಹಿಡಿದು ಎರಡು–ಮೂರು ವರ್ಷಗಳ ಕುರಿಗಳು ಹಾಗೂ ಟಗರುಗಳು ಸಂತೆಯಲ್ಲಿದ್ದವು. ಕನಿಷ್ಠ 3 ಸಾವಿರದಿಂದ ಗರಿಷ್ಠ ₹1 ಲಕ್ಷದವರೆಗೂ ಬೆಲೆ ನಿಗದಿಪಡಿಸಲಾಗಿತ್ತು. ಖರೀದಿದಾರರು, ಚೌಕಾಶಿ ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಬೆಂಗಳೂರು, ಮೈಸೂರು, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಬೆಳಗಾವಿ, ದಾವಣಗೆರೆ, ತುಮಕೂರು ಹಾಗೂ ಇತರೆ ಜಿಲ್ಲೆಗಳಿಂದ ಗ್ರಾಹಕರು ಮಾರುಕಟ್ಟೆಗೆ ಬಂದಿದ್ದರು. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದ ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಮೈಲಾರ ಬಳಿಯ ಹೊಳಲದ ರಾಜಣ್ಣ ಎಂಬುವವರು ತಮ್ಮ ‘ಮೈಲಾರಿ’ ಹೆಸರಿನ ಟಗರನ್ನು ₹1 ಲಕ್ಷಕ್ಕೆ ಮಾರಾಟ ಮಾಡಿದರು.

‘ನಮ್ಮದು ಪಂದ್ಯದ ಟಗರು. ಸಣ್ಣ ಮರಿ ತಂದು ಸಾಕಿದ್ದೆವು. ಈಗ, ಮಾರುಕಟ್ಟೆಗೆ ತಂದು ಮಾರಿದ್ದೇವೆ. ವಾಹನದಿಂದ ಇಳಿಸುತ್ತಿದ್ದಂತೆ ಟಗರು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಎರಡು ವರ್ಷದ ಟಗರು, ಸುಮಾರು 80 ಕೆಜಿ ತೂಕವಿತ್ತು’ ಎಂದು ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಕುರಿ, ಟಗರು ಹಾಗೂ ಮೇಕೆಗಳ ಸಂಖ್ಯೆ ಹೆಚ್ಚಿತ್ತು. ಅಂದುಕೊಂಡಷ್ಟು ಬೆಲೆ ಸಿಗಲಿಲ್ಲವೆಂದು ಕುರಿಗಾರರು ಬೇಸರ ವ್ಯಕ್ತಪಡಿಸಿದರು.

‘ವರ್ಷಗಟ್ಟಲೇ ಕುರಿ ಸಾಕಿದ್ದೇವೆ. ಇದೀಗ 20 ಕುರಿಗಳನ್ನು ತಂದಿದ್ದೇವೆ. ಒಂದು ಕುರಿಗೆ ₹20 ಸಾವಿರದಿಂದ ₹25 ಸಾವಿರ ಹೇಳುತ್ತಿದ್ದೇವೆ. ಆದರೆ, ಗ್ರಾಹಕರು ಕಡಿಮೆ ಬೆಲೆ ಕೇಳುತ್ತಿದ್ದಾರೆ. ನಮ್ಮ ಬೆಲೆ ಸಿಕ್ಕರೆ ಮಾತ್ರ ಕೊಡುತ್ತೇವೆ. ಇಲ್ಲದಿದ್ದರೆ, ವಾಪಸು ಹೋಗುತ್ತಿದ್ದೇವೆ’ ಎಂದು ಕುರಿಗಾರ ರಾಮಪ್ಪ ಹೇಳಿದರು.

ಪರೀಕ್ಷಿಸಿ ಖರೀದಿ:

ಬಕ್ರೀದ್ ಹಬ್ಬಕ್ಕೆ ಕುರಿ ಖರೀದಿಸಲು ಬಂದಿದ್ದ ಸವಣೂರಿನ ಮತೀನ್ ಖತೀಬ್, ‘ಒಂದು ವರ್ಷದ ಮೇಲಿನ ಹಲ್ಲು ಇರುವ ಟಗರು ಖರೀದಿಸಲು ಬಂದಿದ್ದೇವೆ. ಈಗ, ₹16 ಸಾವಿರಕ್ಕೆ ಒಂದು ಟಗರು ಖರೀದಿಸಿದ್ದೇವೆ. ಇದು ದೇವರಿಗೆ ಅರ್ಪಿಸಲು ಬೇಕಿರುವುದರಿಂದ, ಗಾಯವಿದೆಯಾ? ಹಾಗೂ ಇತರೆ ಎಲ್ಲವನ್ನೂ ಪರೀಕ್ಷಿಸಿಯೇ ಖರೀದಿ ಮಾಡಿದ್ದೇವೆ’ ಎಂದರು.

ತಮಿಳುನಾಡಿನ ರಾಮಾಂಜನೇಯ, ‘ಬಕ್ರೀದ್ ಹಬ್ಬಕ್ಕೆ ಕುರಿ, ಟಗರಿಗೆ ಬೇಡಿಕೆ ಹೆಚ್ಚು. ಪ್ರತಿ ವರ್ಷವೂ ಹಾವೇರಿ ಮಾರುಕಟ್ಟೆಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದೇವೆ. ಇಲ್ಲಿ ದರವೂ ಕಡಿಮೆ’ ಎಂದು ಹೇಳಿದರು.

ಹಾವೇರಿ ಸಂತೆಯಲ್ಲಿ ಮೇಕೆ ಹೊತ್ತು ಸಾಗಿದ ಬಾಲಕ
ಹಾವೇರಿ ಕುರಿ ಮಾರುಕಟ್ಟೆಯಲ್ಲಿ ಗುರುವಾರ ಸೇರಿದ್ದ ಜನರ ಗುಂಪು – ಪ್ರಜಾವಾಣಿ ಚಿತ್ರ – ಮಾಲತೇಶ ಇಚ್ಚಂಗಿ 

ನೆರೆ ರಾಜ್ಯಗಳಿಂದಲೂ ಬರುವ ಖರೀದಿದಾರರು ಕುರಿ, ಮೇಕೆಗಳ ಖರೀದಿ–ಮಾರಾಟದಲ್ಲಿ ಚೌಕಾಸಿ ವಿಶೇಷ ಮಾರುಕಟ್ಟೆಯಲ್ಲಿ ಟಗರು ಖರೀದಿಗೆ ಭಾರಿ ಪೈಪೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.