ADVERTISEMENT

14 ಲೀಟರ್ ಹಾಲು ಕೊಟ್ಟ ‘ಜರ್ಸಿ’ ಚಾಂಪಿಯನ್

ಹಳೇರಿತ್ತಿ ಗ್ರಾಮದಲ್ಲಿ ಹಾಲು ಕರೆಯುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:25 IST
Last Updated 15 ನವೆಂಬರ್ 2024, 16:25 IST
ಹಾವೇರಿ ಜಿಲ್ಲೆಯ ಹಳೇರಿತ್ತಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಚಾಂಪಿಯನ್ ಆದ ಜರ್ಸಿ ಆಕಳಿನ ಮಾಲೀಕ ಚನ್ನಬಸವನಗೌಡ ಹನುಮಗೌಡ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು
ಹಾವೇರಿ ಜಿಲ್ಲೆಯ ಹಳೇರಿತ್ತಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಚಾಂಪಿಯನ್ ಆದ ಜರ್ಸಿ ಆಕಳಿನ ಮಾಲೀಕ ಚನ್ನಬಸವನಗೌಡ ಹನುಮಗೌಡ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು   

ಹಾವೇರಿ: ಜಿಲ್ಲೆಯ ಹಳೇರಿತ್ತಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಸ್ಥಳೀಯ ನಿವಾಸಿ ಚನ್ನಬಸವನಗೌಡ ಹನುಮಗೌಡ ಅವರ ‘ಜರ್ಸಿ’ ಆಕಳು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಲಾಖೆಯ ‘ವಿಸ್ತರಣಾ ಘಟಕ ಬಲಪಡಿಸುವ ಯೋಜನೆ’ ಅಡಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 52 ಆಕಳುಗಳು ಪಾಲ್ಗೊಂಡಿದ್ದವು. 24 ಗಂಟೆ ಅವಧಿಯಲ್ಲಿ ಪ್ರತಿಯೊಂದು ಆಕಳಿನ ಹಾಲಿನ ಪ್ರಮಾಣವನ್ನು ಲೆಕ್ಕ ಹಾಕಿದ ಇಲಾಖೆಯ ಅಧಿಕಾರಿಗಳು, ದಿನಕ್ಕೆ 14 ಲೀಟರ್ ನೀಡುವ ಚನ್ನಬಸವನಗೌಡ ಅವರ ಆಕಳನ್ನು ಚಾಂಪಿಯನ್ ಎಂದು ಘೋಷಿಸಿದರು.

ಎಚ್‌.ಎಫ್‌., ಜರ್ಸಿ ಹಾಗೂ ದೇಸಿ ವಿಭಾಗದಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಂದು ವಿಭಾಗದಲ್ಲಿ ಕ್ರಮವಾಗಿ ಮೊದಲ, ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರಿಗೆ ಪ್ರಮಾಣ ಪತ್ರ ಹಾಗೂ ವಿವಿಧ ಉಪಕರಣಗಳನ್ನು ನೀಡಲಾಯಿತು.

ADVERTISEMENT

ಹಾಲು ಕರೆಯುವ ಸ್ಪರ್ಧೆಯ ಜೊತೆಯಲ್ಲಿ ಕರುಗಳ ಪ್ರದರ್ಶನ ಹಾಗೂ ಪ್ರಾಣಿಜನ್ಯ ರೋಗಗಳ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಉಪನಿರ್ದೇಶಕ (ಆಡಳಿತ) ಡಾ. ಎಸ್.ವಿ. ಸಂತಿ, ‘ಭಾರತದಲ್ಲಿ ಜಾನುವಾರುಗಳ ಸಂಖ್ಯೆ ಸ್ವತಂತ್ರ ಪೂರ್ವಕ್ಕೆ ಹೋಲಿಸಿದರೆ ಶೇ 50ರಷ್ಟು ಕಡಿಮೆಯಾಗಿದೆ. ಜಾನುವಾರುಗಳು, ಮನುಷ್ಯ ಮತ್ತು ಭೂಮಿ ನಡುವೆ ಗಟ್ಟಿಯಾದ ಸಂಬಂಧವನ್ನು ಹೊಂದಿವೆ. ರೈತರು, ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಸಾಕಾಣಿಕೆ ಮಾಡಬೇಕು’ ಎಂದರು.

ಹಾವೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಪ್ರಸಾದ ಮಾತನಾಡಿ, ‘ರೈತರು ಪಶುಪಾಲನಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕ (ಪಾಲಿ ಕ್ಲಿನಿಕ್) ಡಾ. ಜಯಕುಮಾರ ಕಂಕಣವಾಡಿ ಮಾತನಾಡಿ, ‘ಮನೆಯಲ್ಲಿ ಉತ್ತಮ ಜಾನುವಾರು ಉತ್ಪತ್ತಿ ಆಗಬೇಕಾದರೆ, ಕರುಗಳ ಪಾಲನೆ ಮತ್ತು ಪೋಷಣೆ ಮುಖ್ಯ. ಕರು ಹುಟ್ಟಿದ ಮೇಲೆ ಗಿಣ್ಣದ ಹಾಲು ಕರುಗಳಿಗೆ ಕುಡಿಸುವುದರಿಂದ, ಕರುಗಳಿಗೆ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ನಿಗದಿತ ಅವಧಿಯಲ್ಲಿ ನಿಯಮಿತವಾಗಿ ಕರುಗಳಿಗೆ ಜಂತು ನಾಶಕ ಔಷಧ ಹಾಕಿಸಬೇಕು’ ಎಂದರು.

ಸಹಾಯಕ ನಿರ್ದೇಶಕ ಡಾ. ಪರಮೇಶ ಹುಬ್ಬಳ್ಳಿ, ಡಾ. ರಾಘವೇಂದ್ರ ಕಿತ್ತೂರ, ಡಾ. ಪವನ ಬಿ.ಎಲ್., ಡಾ. ಬಾಲಾಜಿ, ಡಾ. ಕಾರ್ತಿಕ್, ಡಾ. ಹರ್ಷ, ಶಿವಯೋಗಿ ಕರಿಯಪ್ಪನವರ, ಪಶುವೈದ್ಯಕೀಯ ಪರೀಕ್ಷಕ ಪ್ರಕಾಶ ಅಂಕಲಕೋಟಿ, ಶಶಿಧರಗೌಡ, ಮೃತ್ಯುಂಜಯ ಒಗ್ಗಣ್ಣವರ, ಡಾ. ಎಂ.ಎ. ಬೂದಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.