ಹಾವೇರಿ: ‘ಒಂದೇ ಠಾಣೆಯಲ್ಲಿ ಹಲವು ವರ್ಷ ಕೆಲಸ ಮಾಡುತ್ತಿರುವ ಜಿಲ್ಲೆಯ ಕೆಲ ಪೊಲೀಸರು, ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆರೋಪಿಗಳ ಜೊತೆ ಶಾಮೀಲಾಗುತ್ತಿದ್ದಾರೆ’ ಎಂಬ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ, ಜಿಲ್ಲೆಯ 200ಕ್ಕೂ ಹೆಚ್ಚು ಪೊಲೀಸರನ್ನು ಎತ್ತಂಗಡಿ ಮಾಡಲು ಸಿದ್ಧತೆ ಆರಂಭವಾಗಿದೆ.
‘ಒಂದೇ ಘಟಕ ಹಾಗೂ ಒಂದೇ ಠಾಣೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿರುವ ಪೊಲೀಸರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ಈ ಸೂಚನೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಎಸ್ಪಿ ಅಂಶುಕುಮಾರ್, ಜಿಲ್ಲೆಯಲ್ಲಿ ಹಲವು ಠಾಣೆಗಳಲ್ಲಿ ಮೊಕ್ಕಾಂ ಹೂಡಿರುವ ಪೊಲೀಸರನ್ನು ವರ್ಗಾವಣೆ ಮಾಡಲು ಪ್ರಕ್ರಿಯೆ ಆರಂಭಿಸಿದ್ದಾರೆ. ಸದ್ಯದಲ್ಲೇ ವರ್ಗಾವಣೆ ಆದೇಶ ಎಲ್ಲರ ಕೈಗೆ ಸೇರಲಿದೆ.
‘ಮರಳು ಅಕ್ರಮ ಸಾಗಣೆ, ಜೂಜಾಟ, ಮಟ್ಕಾ, ಮದ್ಯ ಅಕ್ರಮ ಮಾರಾಟ ಹಾಗೂ ಇತರೆ ಅಕ್ರಮ ಚಟುವಟಿಕೆಗಳಿಗೆ ಕೆಲ ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ. ಒಂದೇ ಕಡೆಗಳಲ್ಲಿ ಇರುವ ಪೊಲೀಸರಿಂದಲೇ ಅಕ್ರಮಗಳು ಹೆಚ್ಚಾಗಿವೆ’ ಎಂಬುದಾಗಿ ಜನಪ್ರತಿನಿಧಿಗಳು ದೂರುತ್ತಿದ್ದರು. ಇದೇ ಕಾರಣಕ್ಕೆ ಡಿಜಿ–ಐಜಿಪಿ, ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಜಿಲ್ಲಾ ಎಸ್ಪಿಗಳು ಹಾಗೂ ಕಮಿಷನರ್‌ಗಳಿಗೆ ಸೂಚನೆ ನೀಡಿದ್ದಾರೆ.
ಪಟ್ಟಿ ಸಿದ್ಧಪಡಿಸಿ ವರ್ಗಾವಣೆ: ‘ಜಿಲ್ಲೆಯ ವಿವಿಧ ಠಾಣೆ ಹಾಗೂ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಒಂದೇ ಕಡೆ ಅಥವಾ ಒಂದೇ ಠಾಣೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿರುವ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್ ಹಾಗೂ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಅವರ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಡೂರು ಠಾಣೆ, ಬಂಕಾಪುರ, ಬ್ಯಾಡಗಿ, ಗುತ್ತಲ, ಹಲಗೇರಿ, ಹಾನಗಲ್, ಹಂಸಭಾವಿ, ಹಾವೇರಿ ಶಹರ–ಗ್ರಾಮಾಂತರ–ಮಹಿಳಾ–ಸಂಚಾರ, ಹಿರೇಕೆರೂರು, ಕಾಗಿನೆಲೆ, ಕುಮಾರಪಟ್ಟಣ, ರಾಣೆಬೆನ್ನೂರು ಶಹರ–ಗ್ರಾಮಾಂತರ–ಸಂಚಾರ, ರಟ್ಟೀಹಳ್ಳಿ, ಸವಣೂರು, ಶಿಗ್ಗಾವಿ ಹಾಗೂ ತಡಸ ಠಾಣೆಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಇರುವ ಸಿಬ್ಬಂದಿ ಇದ್ದಾರೆ. ಇವರು ಸೇವೆ ಸೇರಿದ ವರ್ಷ, ಸದ್ಯದ ಜಾಗದಲ್ಲಿ ಕೆಲಸ ಆರಂಭಿಸಿದ ವರ್ಷ ಹಾಗೂ ಇತರೆ ಎಲ್ಲ ಮಾಹಿತಿಯನ್ನು ಠಾಣೆಯ ಅಧಿಕಾರಿಯಿಂದ ಪಡೆಯಲಾಗಿದೆ’ ಎಂದು ಹೇಳಿದರು.
‘ಯಾವ ಸಿಬ್ಬಂದಿಯನ್ನು ಯಾವ ಠಾಣೆಗೆ ವರ್ಗಾವಣೆ ಮಾಡಬೇಕು ಎಂಬುದನ್ನು ಜಿಲ್ಲಾ ಎಸ್ಪಿ ನೇತೃತ್ವದ ಸಮಿತಿ ತೀರ್ಮಾನಿಸಲಿದೆ. ಸದ್ಯದಲ್ಲೇ ಅಂತಿಮ ಪಟ್ಟಿ ಸಿದ್ಧಪಡಿಸಿ, ಎಲ್ಲರಿಗೂ ವರ್ಗಾವಣೆ ಆದೇಶ ನೀಡಲಾಗುವುದು’ ಎಂದು ತಿಳಿಸಿದರು.
ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಿಬ್ಬಂದಿಯೂ ಜಿಲ್ಲೆಯಲ್ಲಿದ್ದಾರೆ. ಜನರ ಜೊತೆ ಸೌಜನ್ಯದಿಂದ ವರ್ತಿಸದವರೂ ಇದ್ದಾರೆ. ಇವರನ್ನೂ ವರ್ಗಾವಣೆ ಮಾಡಲು ತಯಾರಿ ನಡೆದಿದೆ.
ಒಂದೇ ಠಾಣೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿರುವ ಸಿಬ್ಬಂದಿಯ ವರ್ಗಾವಣೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚನೆ ನೀಡಿದ್ದಾರೆ. ಅದರನ್ವಯ ವರ್ಗಾವಣೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ– ಸಿ. ಗೋಪಾಲ್ ಹೆಚ್ಚುವರಿ ಪೊಲೀಸ್ ಎಸ್ಪಿ ಹಾವೇರಿ
‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಇನ್‌ಸ್ಪೆಕ್ಟರ್ ಡಿವೈಎಸ್ಪಿ ಹೆಚ್ಚುವರಿ ಎಸ್ಪಿ ಹಾಗೂ ಎಸ್ಪಿಗಳು ನಿಗದಿತ ಸಮಯಕ್ಕೆ ವರ್ಗಾವಣೆ ಆಗುತ್ತಾರೆ. ಆದರೆ ಕಾನ್‌ಸ್ಟೆಬಲ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಎಎಸ್‌ಐಗಳು ವರ್ಗಾವಣೆ ಆಗುವುದಿಲ್ಲ. ಒಂದೇ ಠಾಣೆಯಲ್ಲೇ ಮೊಕ್ಕಾಂ ಹೂಡಿರುತ್ತಾರೆ. ಜೊತೆಗೆ ಠಾಣೆ ಮೇಲೆ ಹಿಡಿತ ಸಾಧಿಸಿ ಅಕ್ರಮ ಚಟುವಟಿಕೆಗಳಿಗೂ ಕುಮ್ಮಕ್ಕು ನೀಡುತ್ತಾರೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು. ‘ಪ್ರತಿಯೊಬ್ಬ ಸಿಬ್ಬಂದಿಯನ್ನು ಕಾಲ ಕಾಲಕ್ಕೆ ವರ್ಗಾವಣೆ ಮಾಡಬೇಕು. ಇದರಿಂದ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.