ADVERTISEMENT

ಖಬರ್‌ಸ್ತಾನದಲ್ಲಿ ವಾಣಿಜ್ಯ ಮಳಿಗೆ: ನೋಟಿಸ್ ನೀಡಿಲ್ಲ; ಇರ್ಫಾನ್‌ ಖಾನ್

ಅಂಜುಮನ್ ಇಸ್ಲಾಂ ಅಧ್ಯಕ್ಷ ಪತ್ರಿಕಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 13:25 IST
Last Updated 29 ಅಕ್ಟೋಬರ್ 2024, 13:25 IST
ಹಾವೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಭಣ್ಣ ಜತ್ತಿ ಹಾಗೂ ಇತರರು, ‘ಖಬರ್‌ಸ್ತಾನ್‌ದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಗಳು ಅಕ್ರಮ’ ಎಂದು ಆರೋಪಿಸಿ ದಾಖಲೆಗಳನ್ನು ಪ್ರದರ್ಶಿಸಿದರು
ಹಾವೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಭಣ್ಣ ಜತ್ತಿ ಹಾಗೂ ಇತರರು, ‘ಖಬರ್‌ಸ್ತಾನ್‌ದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಗಳು ಅಕ್ರಮ’ ಎಂದು ಆರೋಪಿಸಿ ದಾಖಲೆಗಳನ್ನು ಪ್ರದರ್ಶಿಸಿದರು   

ಹಾವೇರಿ: ‘ನಗರದ ಸುಭಾಷ್ ಸರ್ಕಲ್‌ ಬಳಿಯ ಖಬರ್‌ಸ್ತಾನದಲ್ಲಿ ವಾಣಿಜ್ಯ ಮಳಿಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಪತ್ರ ಹಾಗೂ ನೋಟಿಸ್ ಬಂದಿಲ್ಲ’ ಎಂದು ಹಾವೇರಿ ಅಂಜುಮನ್ ಇಸ್ಲಾಂ ಅಧ್ಯಕ್ಷ ಇರ್ಫಾನ್‌ ಖಾನ್ ಪಠಾಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನಮ್ಮ ಸಮುದಾಯದಲ್ಲಿ ಬಡವರು ಹೆಚ್ಚಿದ್ದಾರೆ. ಬಡವರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

‘ಖಬರ್‌ಸ್ತಾನದಲ್ಲಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವ ಅಶೂರ್ ಖಾನ್ ಕಟ್ಟಡ ಹಾಗೂ 10 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ, ವಕ್ಫ್ ಮಂಡಳಿ ಹಾಗೂ ನಗರಸಭೆಯಿಂದ ಅನುಮತಿ ಪಡೆಯಲಾಗಿದೆ. ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಯವರು ಮೌಖಿಕವಾಗಿ ಹೇಳಿದ್ದಾರೆ. ಹೀಗಾಗಿ, ಈಗ ತಾತ್ಕಾಲಿಕವಾಗಿ ಕೆಲಸ ಸ್ಥಗಿತ ಮಾಡಿದ್ದೇವೆ’ ಎಂದು ಹೇಳಿದರು.

ADVERTISEMENT

‘ದಾನಮ್ಮದೇವಿ ದೇವಸ್ಥಾನಕ್ಕೆ ಹಿಂದೂಗಳಂತೆಯೇ ನಾವು ಸಹ ಗೌರವ ಸಲ್ಲಿಸುತ್ತೇವೆ. ವಾಣಿಜ್ಯ ಮಳಿಗೆಗಳಲ್ಲಿ ಮೊಟ್ಟೆ, ಮಾಂಸದ ವ್ಯಾಪಾರ ಮಾಡುವುದಿಲ್ಲ. ಅದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ. ಆಕಸ್ಮಾತ್ ಮಾಂಸದ ವ್ಯಾಪಾರ ನಡೆದರೆ, ನಗರಸಭೆ ಅವರು ಮಳಿಗೆಗಳನ್ನು ಜಪ್ತಿ ಮಾಡಬಹುದು’ ಎಂದರು.

‘ವಾಣಿಜ್ಯ ಮಳಿಗೆ ನಿರ್ಮಾಣದ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ. ಕಾನೂನಿನ ಪ್ರಕಾರ ಕಾಮಗಾರಿ ಬಂದ್ ಮಾಡಬೇಕು ಎಂದರೆ, ಬಂದ್ ಮಾಡುತ್ತೇವೆ’ ಎಂದು ಹೇಳಿದರು.

ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಅನ್ವರ್ ಕಡೆಮನಿ, ಚಮನ್ ಮುಲ್ಲಾ, ಕಾರ್ಯದರ್ಶಿ ಮುಜಾಫರ್ ಕೊಟ್ಟಿಗೇರಿ, ಸದಸ್ಯರಾದ ಇಮಾಮ್‌ಹುಸೇನ್ ಬಾಲಿಬಾಯಿ, ಉಸ್ಮಾನಸಾಬ ಪಟವೇಗಾರ, ಜಮೀರ್ ಜಿಗರಿ, ಇಸ್ಮಾಯಿಲ್ ಅಬ್ಬೇರ, ಅಜ್ಮತ್ ಶೇಖ್, ವಾಸಿಮ್ ಸುನ್ನಾಖಾನ್, ಹಜರತಲಿ ತಹಸೀಲ್ದಾರ್, ರಫೀಕ್ ಸವಣೂರ ಪತ್ರಿಕಾಗೋಷ್ಠಿಯಲ್ಲಿದ್ದರು.

ಹಾವೇರಿಯಲ್ಲಿ ಮಂಗಳವಾರ ಅಂಜುಮನ್ ಇಸ್ಲಾಂ ಅಧ್ಯಕ್ಷ ಇರ್ಫಾನ್‌ ಖಾನ್ ಪಠಾಣ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು

‘ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ’

‘ಮುಸ್ಲಿಂ ಸಮುದಾಯದ ಖಬರ್‌ಸ್ತಾನದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸ್ಮಶಾನದಲ್ಲಿ ಅಂತ್ಯಕ್ರಿಯೆ ಬಿಟ್ಟು ಬೇರೆ ಯಾವುದೇ ಚಟುವಟಿಕೆ ಮಾಡಬಾರದೆಂಬ ನಿಯಮವಿದೆ. ಇದನ್ನು ಮೀರಿ ವಾಣಿಜ್ಯ ಮಳಿಗೆ ನಿರ್ಮಿಸುವ ಮೂಲಕ ಖಬರ್‌ಸ್ತಾನ್‌ವನ್ನು ವ್ಯಾಪಾರಿ ಸ್ಥಳವಾಗಿ ಮಾಡುತ್ತಿರುವುದು ಖಂಡನೀಯ’ ಎಂದು ಹಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅ. 25ರ ನಂತರ ಕಟ್ಟಡ ಕಾಮಗಾರಿ ಮುಂದುವರಿಸುವುದಾಗಿ ಅಂಜುಮನ್ ಇಸ್ಲಾಂ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಇದು ಸಮಾಜದ ಸೌಹಾರ್ದತೆ ಕದಡುವ ವಿಚಾರವಾಗಿದೆ’ ಎಂದು ದೂರಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಭಣ್ಣ ಜತ್ತಿ ಮಾತನಾಡಿ ‘ವಕ್ಫ್ ಭೂಮಿಯಾಗಲೀ ಹಾಗೂ ಯಾವುದೇ ಭೂಮಿಯಾಗಲಿ ಅಲ್ಲಿ ಕಟ್ಟಡ ನಿರ್ಮಿಸಲು ನಗರಸಭೆ ಅನುಮತಿ ಪಡೆಯುವುದು ಕಡ್ಡಾಯ. ಮುಸ್ಲಿಮರ ಸ್ಮಶಾನ ಜಾಗ ಎಂದು ಇರುವ ಸ್ಥಳದಲ್ಲಿ ವಾಣಿಜ್ಯ ಮಂಡಳಿ ನಿರ್ಮಾಣಕ್ಕೆ ಅವಕಾಶವಿಲ್ಲ’ ಎಂದರು. ಸಾಮಾಜಿಕ ಕಾರ್ಯಕರ್ತ ಪ್ರದೀಪ ಮುಳ್ಳೂರ ಮಾತನಾಡಿ ‘ವಾಣಿಜ್ಯ ಮಳಿಗೆ ನಿರ್ಮಾಣದ ವಿರುದ್ಧ ಅ. 28ರಂದು ಪ್ರತಿಭಟನೆಗೆ ತೀರ್ಮಾನಿಸಲಾಗಿತ್ತು. ಪ್ರತಿಭಟನೆಗೆ ಮೊದಲು ಅನುಮತಿ ನೀಡಿ ನಂತರ ವಾಪಸು ಪಡೆಯಲಾಗಿತ್ತು. ಪ್ರತಿಭಟನೆಗೆ ಮುಂದಾದವರನ್ನು ಪೊಲೀಸರು ವಶಕ್ಕೆ ಪಡೆದು ಪ್ರತಿಭಟನೆ ಹತ್ತಿಕ್ಕಿದ್ದಾರೆ’ ಎಂದು ದೂರಿದರು. ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ ಕಾರಡಗಿ ವೆಂಕಟೇಶ ನಾರಾಯಣಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.