ADVERTISEMENT

ಹಾವೇರಿ | ಮಳೆ ಭೀತಿ: ಹಿಂಗಾರು ಬಿತ್ತನೆ ಕುಂಠಿತ

ಬೆಳೆ ಕಟಾವಿಗೆ ರೈತರ ಹಿಂದೇಟು; ಶೇ 15ರಷ್ಟು ಮಾತ್ರ ಬಿತ್ತನೆ

ಸಂತೋಷ ಜಿಗಳಿಕೊಪ್ಪ
Published 6 ನವೆಂಬರ್ 2024, 4:11 IST
Last Updated 6 ನವೆಂಬರ್ 2024, 4:11 IST
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹಳೇಮೆಳ್ಳಾಗಟ್ಟಿ ಗ್ರಾಮದಲ್ಲಿ ರೈತರೊಬ್ಬರು ಹಿಂಗಾರು ಬಿತ್ತನೆಗಾಗಿ ಜಮೀನು ಹದಗೊಳಿಸಿದರು
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹಳೇಮೆಳ್ಳಾಗಟ್ಟಿ ಗ್ರಾಮದಲ್ಲಿ ರೈತರೊಬ್ಬರು ಹಿಂಗಾರು ಬಿತ್ತನೆಗಾಗಿ ಜಮೀನು ಹದಗೊಳಿಸಿದರು   

ಹಾವೇರಿ: ಜಿಲ್ಲೆಯಲ್ಲಿ ಬಿಡುವು ಕೊಡುತ್ತಲೇ ಮೇಲಿಂದ ಮೇಲೆ ಮಳೆ ಸುರಿಯುತ್ತಿದ್ದು, ಇದರ ಭೀತಿಯಿಂದಾಗಿ ಮುಂಗಾರು ಹಂಗಾಮಿನ ಬೆಳೆ ಕಟಾವು ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ, ಹಿಂಗಾರು ಬಿತ್ತನೆ ತೀರಾ ಕುಂಠಿತಗೊಂಡಿದೆ.

ಜಿಲ್ಲೆಯಲ್ಲಿ ಮಳೆಗಾಲ ಶುರುವಾಗುತ್ತಿದ್ದಂತೆ ಕೃಷಿ ಜಮೀನು ಹದ ಮಾಡಿದ್ದ ರೈತರು, ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ, ಆರಂಭದಲ್ಲಿ ಮಳೆ ಬಾರದಿದ್ದರಿಂದ ಬಹುತೇಕ ಕಡೆಗಳಲ್ಲಿ ಬೀಜಗಳು ಮೊಳಕೆಯೊಡೆದಿರಲಿಲ್ಲ. ಬೆಳೆ ಹಾನಿಯಾಗುವ ಭಯದಲ್ಲಿದ್ದ ರೈತರು, ಜಮೀನಿನಲ್ಲಿದ್ದ ಬೀಜಗಳನ್ನು ನಾಶಪಡಿಸಿ ಪುನಃ ಹದಗೊಳಿಸಿದ್ದರು. ಕೆಲ ದಿನಗಳ ನಂತರ, ಮಳೆಯ ಮುನ್ಸೂಚನೆ ದೊರೆಯುತ್ತಿದ್ದಂತೆ ಪುನಃ ಬಿತ್ತನೆ ಮಾಡಿದ್ದರು.

ಬಿತ್ತನೆ ಅವಧಿಯಲ್ಲಿ ವ್ಯತ್ಯಾಸವಾಗಿದ್ದರಿಂದ, ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿಗೆ ಬೆಳೆ ಕಟಾವು ಹಂತಕ್ಕೆ ಬಂದಿದೆ. ಸೆಪ್ಟೆಂಬರ್ ಅಂತ್ಯ ಹಾಗೂ ಅಕ್ಟೋಬರ್‌ನಲ್ಲಿ ಮುಂಗಾರು ಕಟಾವು ಮಾಡಿಕೊಂಡು, ಹಿಂಗಾರು ಬೆಳೆ ಬಿತ್ತನೆ ಮಾಡಲು ರೈತರು ಯೋಚಿಸಿದ್ದರು. ಈ ಅವಧಿಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ, ಬೆಳೆ ಕಟಾವು ನಿರ್ಧಾರದಿಂದ ರೈತರು ಹಿಂದೆ ಸರಿದಿದ್ದಾರೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಗೋವಿನ ಜೋಳ, ಸೋಯಾಬಿನ್, ಶೇಂಗಾ ಹಾಗೂ ಇತರೆ ಬೆಳೆಗಳನ್ನು ರೈತರು ಬೆಳೆದಿದ್ದರು. ಕೆಲ ರೈತರು, ಬೆಳೆ ಕಟಾವು ಮಾಡಿದ್ದಾರೆ. ಇದರಲ್ಲಿ ಬಹುಪಾಲು ರೈತರು, ಬೆಳೆಯ ಕಾಳುಗಳನ್ನು ಒಣಗಿಸಲು ಸಾಧ್ಯವಾಗದೇ ಕಷ್ಟ ಅನುಭವಿಸುತ್ತಿದ್ದಾರೆ.

ಜಮೀನಿನಲ್ಲಿರುವ ಗೋವಿನ ಜೋಳ, ಸೋಯಾಬೀನ್ ಹಾಗೂ ಶೇಂಗಾ ಬೆಳೆಗಳು ಕಟಾವು ಹಂತಕ್ಕೆ ಬಂದಿವೆ. ನಿರಂತರ ಮಳೆ ಇರುವುದರಿಂದ, ಅವುಗಳ ಕಟಾವು ಮಾಡಲು ರೈತರು ಮನಸ್ಸು ಮಾಡುತ್ತಿಲ್ಲ. ಕಟಾವು ಮಾಡಿದರೆ, ಒಣಗಿಸುವುದು ಹೇಗೆ? ಕಾಳು ಒಣಗದಿದ್ದರೆ ಬೆಲೆ ಸಿಗುವುದಿಲ್ಲವೆಂಬ ಚಿಂತೆಯಲ್ಲಿದ್ದಾರೆ.

ಮುಂಗಾರು ಹಂಗಾಮಿನ ಬೆಳೆ ಕೈ ಸೇರದಿದ್ದರಿಂದ ರೈತರು, ಹಿಂಗಾರು ಬಿತ್ತನೆ ಮಾಡದೇ ದಿನ ಎಣಿಸುತ್ತಿದ್ದಾರೆ. 2023ನೇ ವರ್ಷಕ್ಕೆ ಹೋಲಿಸಿದರೆ, ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶದ ಶೇ 15ರಷ್ಟು ಭಾಗದಲ್ಲಿ ಮಾತ್ರ ಹಿಂಗಾರು ಬಿತ್ತನೆ ಆಗಿದೆ. ಮುಂಬರುವ ದಿನಗಳಲ್ಲಿ ತಡವಾಗಿ, ಹಿಂಗಾರು ಬಿತ್ತನೆ ಆಗುವ ಸಾಧ್ಯತೆಯಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂಬರುವ ಮುಂಗಾರು ಹಂಗಾಮಿನ ಅವಧಿಯಲ್ಲಿ ವ್ಯತ್ಯಾಸವಾಗುವ ಸಂಭವವಿದೆ.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಬಿತ್ತನೆಯಲ್ಲಿ ವ್ಯತ್ಯಾಸವಾಗಿದೆ. ನಿಗದಿತ ದಿನಕ್ಕಿಂತ ಹೆಚ್ಚು ದಿನಗಳ ಅಂತರದಲ್ಲಿ ರೈತರು ಮುಂಗಾರು ಬೆಳೆ ಬಿತ್ತಿದ್ದರು. ಈ ಪೈಕಿ ಬಹುತೇಕ ಕಡೆಗಳಲ್ಲಿ ಬೆಳೆ ಕಟಾವು ಆಗಿಲ್ಲ. ಇದರಿಂದಾಗಿ ಹಿಂಗಾರು ಬಿತ್ತನೆ ಕುಂಠಿತವಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರಂತರ ಮಳೆಯಿಂದಾಗಿ ರೈತರು ಬೆಳೆಗಳನ್ನು ಕಟಾವು ಮಾಡಿಲ್ಲ. ಕಟಾವು ಹಂತಕ್ಕೆ ಬಂದಿರುವ ಬೆಳೆ, ಜಮೀನಿನಲ್ಲಿದೆ. ಮಳೆ ಸ್ವಲ್ಪ ಬಿಡುವು ನೀಡುವ ಲಕ್ಷಣ ಕಂಡುಬಂದರೆ, ಬಹುತೇಕ ರೈತರು ಕಟಾವು ಕೆಲಸ ಆರಂಭಿಸುತ್ತಾರೆ. ಜಮೀನಿನಲ್ಲಿರುವ ಬೆಳೆ ಕಟಾವು ಮಾಡಿದ ನಂತರವೇ, ಹಿಂಗಾರು ಬೆಳೆ ಬಿತ್ತನೆಗೆ ಅನುಕೂಲವಾಗಲಿದೆ’ ಎಂದರು.

ಕೆಲವೆಡೆ ಮಾತ್ರ ಭೂಮಿ ಹದ: ಹಾವೇರಿ, ಸವಣೂರು, ಶಿಗ್ಗಾವಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕಿನ ಗ್ರಾಮಗಳಲ್ಲಿ ಕೆಲ ರೈತರು ಮಾತ್ರ ಹಿಂಗಾರು ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭೂಮಿಯನ್ನು ಹದ ಮಾಡಿಕೊಂಡು ಗೋವಿನ ಜೋಳ ಬಿತ್ತಲೆ ತಯಾರಿ ನಡೆಸುತ್ತಿದ್ದಾರೆ.

ಮಳೆಗಾಲದ ಆರಂಭದಲ್ಲಿ ಸಮರ್ಪಕವಾಗಿ ಮಳೆಯಾಗಲಿಲ್ಲ. ಹೀಗಾಗಿ ತಡವಾಗಿ ಶೇಂಗಾ ಬಿತ್ತನೆ ಮಾಡಿದೆವು. ಈಗ ಶೇಂಗಾ ಕಟಾವು ಹಂತಕ್ಕೆ ಬಂದಿದ್ದು ಮಳೆ ಸ್ವಲ್ಪ ಬಿಡುವು ನೀಡಿದರೆ ಕಟಾವು ಮಾಡುತ್ತೇವೆ
ಶೇಖಪ್ಪ ಬರದೂರು ಬಂಕಾಪುರ ರೈತ
ಸೆಪ್ಟೆಂಬರ್‌ ಅಂತ್ಯದಲ್ಲಿ ಸೋಯಾಬೀನ್ ಕಟಾವು ಮಾಡಲಾಯಿತು. ನಂತರ ಕಾಳು ಒಣಗಿಸಲು ಪರದಾಡಿದೆವು. ಕಾಳು ತೂಕ ಬಾರದಿದ್ದರಿಂದ ನಷ್ಟವಾಯಿತು. ಈಗ ಹಿಂಗಾರು ಬಿತ್ತನೆಯಾಗಿ ಗೋವಿನ ಜೋಳ ಬೆಳೆಯುತ್ತಿದ್ದೇವೆ
ಶಿವಣ್ಣ ಸವೂರು ರೈತ

1045 ಹೆಕ್ಟೇರ್ ಬೆಳೆ ಹಾನಿ

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ 1045 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಬೆಳೆದಿದ್ದ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ‘ಹಾವೇರಿ ರಾಣೆಬೆನ್ನೂರು ಬ್ಯಾಡಗಿ ಹಾನಗಲ್ ಶಿಗ್ಗಾವಿ ತಾಲ್ಲೂಕಿನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಈ ಬಗ್ಗೆ ಜಂಟಿ ತಂಡದಿಂದ ಸಮೀಕ್ಷೆ ನಡೆಯುತ್ತಿದೆ’ ಎಂದರು. ‘ಮುಂಗಾರು ಹಂಗಾಮಿನಲ್ಲಿ ಗೋವಿನ ಜೋಳ ಶೇಂಗಾ ಹತ್ತಿ ಸೋಯಾಬೀನ್ ಭತ್ತ ಬೆಳೆಯಲಾಗಿದೆ. ಮೆಣಸಿನಕಾಯಿ ಸೌತೆಕಾಯಿ ಟೊಮೆಟೊ ಹಿರೇಕಾಯಿ ಬಾಳೆ ಪಪ್ಪಾಯಿ ಶುಂಠಿ ಹಾಗೂ ಇತರೆ ತೋಟಗಾರಿಕೆ ಬೆಳೆ ಇದೆ. ಈ ಬೆಳೆ ಬೆಳೆಯಲಾಗಿದ್ದ ಜಮೀನಿಗೆ ನೀರು ನುಗ್ಗಿರುವುದು ಕಂಡುಬಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.