ADVERTISEMENT

ಹಾವೇರಿ | ಜಿಲ್ಲೆಯಲ್ಲಿ ಮೊದಲ ಇಲಿ ಜ್ವರ: ಜನರಲ್ಲಿ ಆತಂಕ

ಬೆಂಚಿಹಳ್ಳಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮ | ಸ್ಥಳೀಯರ ಆರೋಗ್ಯ ತಪಾಸಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:52 IST
Last Updated 7 ಜುಲೈ 2024, 14:52 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಹಾವೇರಿ: ಜಿಲ್ಲೆಯಲ್ಲಿ ಡೆಂಗಿ, ಅತಿಸಾರ, ಟೈಪಾಯಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ ಮೊದಲ ಬಾರಿಗೆ ಇಲಿ ಜ್ವರದ ಪ್ರಕರಣವೂ ಪತ್ತೆಯಾಗಿದೆ.

ತಾಲ್ಲೂಕಿನ ದೇವಿಹೊಸೂರು ಬಳಿಯ ಬೆಂಚಿಹಳ್ಳಿ ಗ್ರಾಮದ 12 ವರ್ಷದ ಬಾಲಕ ಇಲಿ ಜ್ವರದಿಂದ ಬಳಲುತ್ತಿದ್ದು, ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ಇಲಿ ಜ್ವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ಗ್ರಾಮದಲ್ಲಿ ಸಮೀಕ್ಷೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಾಲಕನ ಮನೆಗೆ ಹೋಗಿ ಕುಟುಂಬದವರು ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವಂತೆಯೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದ್ದಾರೆ.

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಲಿ ಜ್ವರ ಪ್ರಕರಣ ಪತ್ತೆಯಾಗಿರುವುದರಿಂದ, ಇದು ಬೇರೆಯವರಿಗೂ ಬರಬಹುದೆಂದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯರು, ‘ಇದು ಸಾಂಕ್ರಾಮಿಕ ರೋಗವಲ್ಲ. ಇಲಿಯ ಮಲ ಹಾಗೂ ಮೂತ್ರದಿಂದ ಬರುತ್ತದೆ. ಇದಕ್ಕೆ ಚಿಕಿತ್ಸೆ ಲಭ್ಯವಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಯಾವುದೇ ಲಕ್ಷಣಗಳು ಇದ್ದರೆ, ಜನರು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.

ರಕ್ತದ ಮಾದರಿ ಪರೀಕ್ಷೆಯಿಂದ ದೃಢ: ‘ಗ್ರಾಮದ 12 ವರ್ಷದ ಬಾಲಕ, ಸ್ಥಳೀಯ ಶಾಲೆಯ ವಿದ್ಯಾರ್ಥಿ. ಈತನಿಗೆ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಸಾಮಾನ್ಯ ಜ್ವರವೆಂದು ತಿಳಿದ ಪೋಷಕರು, ಸ್ಥಳೀಯ ಆಸ್ಪತ್ರೆಗೆ ತೋರಿಸಿದ್ದರು. ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಜ್ವರ ನಿಯಂತ್ರಣಕ್ಕೆ ಬಂದಿರಲಿಲ್ಲ’ ಎಂದು ವೈದ್ಯರೊಬ್ಬರು ಹೇಳಿದರು.

‘ಜ್ವರ ಬಿಟ್ಟು ಬಿಟ್ಟು ಬರುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯ ವೈದ್ಯರು, ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಎರಡು ದಿನ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗಿದ್ದರಿಂದ ವಾಪಸು ಊರಿಗೆ ಕಳುಹಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡೆಂಗಿ ಅಥವಾ ಕಾಮಾಲೆ ಶಂಕೆ ಇತ್ತು. ಹೀಗಾಗಿ, ಬಾಲಕನ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.’

‘ಪರೀಕ್ಷೆಯ ವರದಿ ಶುಕ್ರವಾರ ಬಂದಿದ್ದು, ಇಲಿ ಜ್ವರವೆಂಬುದು ದೃಢಪಟ್ಟಿದೆ. ಇದೇ ಕಾರಣಕ್ಕೆ ಬಾಲಕನನ್ನು ಪುನಃ ಜಿಲ್ಲಾಸ್ಪತ್ರೆಗೆ ಕರೆಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಬಾಲಕನಿಗೆ ಜ್ವರ ಹಾಗೂ ಮೈ ಕೈ ನೋವು ಇದೆ. ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾನೆ. ಈತ ಬೇಗನೇ ಗುಣಮುಖವಾಗುವ ಲಕ್ಷಣಗಳಿವೆ’ ಎಂದು ವೈದ್ಯ ತಿಳಿಸಿದರು.

ಸಂಪರ್ಕಿತರ ಮಾಹಿತಿ ಸಂಗ್ರಹ: ಬಾಲಕನ ಜೊತೆ ಸಂಪರ್ಕದಲ್ಲಿದ್ದ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಗ್ರಾಮದ ಜನರ ಬಗ್ಗೆಯೂ ಆಶಾ ಕಾರ್ಯಕರ್ತೆಯರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರೆಲ್ಲರ ಆರೋಗ್ಯ ತಪಾಸಣೆ ಮಾಡಿಸಿ, ಲಕ್ಷಣಗಳ ಬಗ್ಗೆ ತಿಳಿಯಲಿದ್ದಾರೆ.

ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆಯೂ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜ್ವರ, ಮೈ ಕೈ ನೋವು ಹಾಗೂ ಇತರೆ ಲಕ್ಷಣಗಳಿರುವ ಜನರು, ದೇವಿಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜ್ವರವಿದ್ದರೆ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರ ಜ್ವರ ಹಾಗೂ ಇತರೆ ಗಂಭೀರ ಲಕ್ಷಣಗಳಿರುವವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.