ರಟ್ಟೀಹಳ್ಳಿ: ಇಲ್ಲಿಯ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಇದರಿಂದಾಗಿ ಚಿಕಿತ್ಸೆ ಪಡೆಯಲು ಜನರು ಪರದಾಡುತ್ತಿದ್ದಾರೆ. ಲಭ್ಯವಿರುವ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಲು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯಲ್ಲಿ ಸದ್ಯ ನಾಲ್ವರು ವೈದ್ಯರಿದ್ದಾರೆ. ಅವರಲ್ಲಿ ಒಬ್ಬರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ ಮೂವರು, ಹಗಲು ಪಾಳಿಯಲ್ಲಿ ಜನರ ತಪಾಸಣೆ ಮಾಡುತ್ತಿದ್ದಾರೆ. ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಸೇರಿದಂತೆ ಹಲವು ವೈದ್ಯರ ಹುದ್ದೆಗಳು ಖಾಲಿ ಇವೆ.
ರಟ್ಟೀಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸುಮಾರು 200ರಿಂದ 250ಕ್ಕೂ ಹೆಚ್ಚಿನ ಜನರು ನಿತ್ಯವೂ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ವೈದ್ಯರ ಕೊರತೆಯಿರುವುದರಿಂದ, ಹಲವರು ಅನಿವಾರ್ಯವಾಗಿ ರಾಣೆಬೆನ್ನೂರು, ದಾವಣಗೆರಿಯ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.
16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇತ್ತೀಚಿನ ದಿನಗಳಲ್ಲಿ ಜ್ವರ, ನೆಗಡಿ ಹಾಗೂ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂಥ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರೆ ಚಿಕಿತ್ಸೆ ಸಿಗುತ್ತಿಲ್ಲ. ಮಕ್ಕಳ ತಜ್ಞರು ಇಲ್ಲದಿದ್ದರಿಂದ, ಪೋಷಕರು ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಸದ್ಯ ಆಸ್ಪತ್ರೆಗೆ ಬರುತ್ತಿರುವ ಜನರ ಪೈಕಿ 25 ಮಂದಿ ಜ್ವರದಿಂದ ಬಳಲುವವರಿದ್ದಾರೆ. ಅವರಿಗೆಲ್ಲ ಉಚಿತವಾಗಿ ಡೆಂಗಿ ತಪಾಸಣೆ ಮಾಡಿಸಲಾಗುತ್ತಿದೆ. ಡೆಂಗಿ ಇರುವುದು ಸಾಬೀತಾಗುತ್ತಿದ್ದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಹಲವರನ್ನು ಬೇರೆ ಬೇರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆ ಇದ್ದು, ನೈರ್ಮಲ್ಯ ಹೆಚ್ಚಾಗಿದೆ.ರೋಗಿಗಳ ಜೊತೆ ಬರುವ ಸಂಬಂಧಿಕರು ನಾನಾ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವಿವಿಧ ವಿಭಾಗಗಳಲ್ಲೂ ಸಿಬ್ಬಂದಿ ಕೊರತೆ ಇದ್ದು, ಲಭ್ಯವಿರುವ ಸಿಬ್ಬಂದಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.
ರಟ್ಟೀಹಳ್ಳಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿದೆ. ಸುತ್ತಮುತ್ತಲಿನ ಹಲವು ಹಳ್ಳಿಗಳಿಂದ ಜನರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಶುದ್ದ ಕುಡಿಯುವ ನೀರು, ಗಂಜಿ, ಅನ್ನದ ಸಲುವಾಗಿ ಕ್ಯಾಂಟೀನ್ ವ್ಯವಸ್ಥೆ ಇಲ್ಲ. ನಿತ್ಯ ಕೃಷಿಕರು, ಕೂಲಿ ಕಾರ್ಮಿಕರು ಹೊಲದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಹಾವು ಸೇರಿದಂತೆ ವಿಷ ಜಂತುಗಳು ಕಡಿದರೆ ಆಸ್ಪತ್ರೆಯಲ್ಲಿ ತುರ್ತಾಗಿ ಚಿಕಿತ್ಸೆ ಸಿಗುವುದಿಲ್ಲ ಎಂದು ಜನರು ದೂರಿದರು.
ಹೊಸ ತಾಲ್ಲೂಕು ಆಗಿರುವ ರಟ್ಟೀಹಳ್ಳಿಯಲ್ಲಿ ಆಸ್ಪತ್ರೆ ಹಲವು ಸೌಕರ್ಯಗಳಿಂದ ವಂಚಿತವಾಗಿದೆ. ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇವರಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪವಿದೆ.
ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಸದ್ಯದ ವೈದ್ಯರು ಹಾಗೂ ಸಿಬ್ಬಂದಿ, ರಟ್ಟೀಹಳ್ಳಿಯಲ್ಲಿಯೇ ಆಸ್ಪತ್ರೆಯ ಅಕ್ಕ–ಪಕ್ಕದಲ್ಲಿಯೇ ವಾಸಿಸಲು ಅಗತ್ಯವಿರವು ವಸತಿ ಗೃಹಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ ಕಸ ಕಡ್ಡಿ ತ್ಯಾಜ್ಯ ಎಲ್ಲೆಂದರಲ್ಲಿ ಗೋಚರಿಸುತ್ತಿದೆ. ಶೌಚಾಲಯಗಳಲ್ಲಿ ಸ್ವಚ್ಛತೆ ಇರುವುದಿಲ್ಲ. ಆಸ್ಪತ್ರೆಯ ಸುತ್ತಲೂ ಕಾಂಪೌಂಡ್ ಗೋಡೆ ಇಲ್ಲ. ವೈದ್ಯರು ಹಾಗೂ ಸಿಬ್ಬಂದಿ ಬೇರೆ ಬೇರೆ ಕಡೆ ನೆಲೆಸಿದ್ದಾರೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿದೆ.ಶಿವಕುಮಾರ ಉಪ್ಪಾರ, ರಟ್ಟೀಹಳ್ಳಿ
ಪ್ರಸ್ತುತ ದಿನಗಳಲ್ಲಿ ಡೆಂಗಿ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಸಂಗ್ರಹವಿದೆ. ಲಭ್ಯವಿರುವ ಸೌಕರ್ಯ ಹಾಗೂ ವೈದ್ಯರನ್ನು ಬಳಸಿಕೊಂಡು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಡಾ. ಲೋಕೇಶಕುಮಾರ, ಆಡಳಿತ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.