ADVERTISEMENT

ಸಂದರ್ಶನ | ಜನರಿಗೆ ಶಾಶ್ವತ ಗ್ಯಾರಂಟಿ ನೀಡುವುದೇ ಗುರಿ: ಭರತ್ ಬೊಮ್ಮಾಯಿ

ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಸಂದರ್ಶನ

ಸಂತೋಷ ಜಿಗಳಿಕೊಪ್ಪ
Published 8 ನವೆಂಬರ್ 2024, 0:45 IST
Last Updated 8 ನವೆಂಬರ್ 2024, 0:45 IST
ಭರತ್ ಬೊಮ್ಮಾಯಿ
ಭರತ್ ಬೊಮ್ಮಾಯಿ   

ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಅಧಿಕಾರಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಅವರ ಗ್ಯಾರಂಟಿ ಯೋಜನೆಗಳು ಕೇವಲ ತಾತ್ಕಾಲಿಕ. ಕ್ಷೇತ್ರದ ಜನರಿಗೆ ಬಿಜೆಪಿ ಕೊಟ್ಟಿರುವ ಕುಡಿಯುವ ನೀರು, ಉದ್ಯೋಗ, ವಾಸಕ್ಕೆ ಜಾಗ ಸೇರಿ ಅಭಿವೃದ್ಧಿ ಕೆಲಸಗಳು ಶಾಶ್ವತ ಗ್ಯಾರಂಟಿಗಳು. ಮುಂದಿನ ದಿನಗಳಲ್ಲೂ ಜನರಿಗೆ ಶಾಶ್ವತ ಗ್ಯಾರಂಟಿ ನೀಡಲು ಕೆಲಸ ಮಾಡುವೆ’ ಎಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಭರತ್ ಬೊಮ್ಮಾಯಿ ಭರವಸೆ ನೀಡಿದರು.

ಕ್ಷೇತ್ರದ ಚುನಾವಣೆ ಬಗ್ಗೆ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

* ಪ್ರಶ್ನೆ: ಕ್ಷೇತ್ರದಲ್ಲಿ ಮತದಾರರ ಪ್ರತಿಕ್ರಿಯೆ ಹೇಗಿದೆ?

ADVERTISEMENT

ಭರತ್ ಬೊಮ್ಮಾಯಿ: ಹಳ್ಳಿಹಳ್ಳಿಗೆ ಭೇಟಿ ನೀಡುತ್ತಿದ್ದೇನೆ. ಗುರು–ಹಿರಿಯರು, ಅಕ್ಕ–ತಂಗಿಯರು, ಅಣ್ಣ–ತಮ್ಮಂದಿರು ಹಾಗೂ ಸರ್ವ ಜನಾಂಗದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಸಮುದಾಯದವರು ಬೆಂಬಲ ಸೂಚಿಸುತ್ತಿದ್ದಾರೆ.

* ನೀವು ಯಶಸ್ವಿ ಉದ್ಯಮಿ. ದಿಢೀರ್ ರಾಜಕೀಯಕ್ಕೆ ಬರಲು ಕಾರಣವೇನು? ತಂದೆಯ ಮುಖ ನೋಡಿ ಟಿಕೆಟ್ ಸಿಕ್ಕಿದೆಯೇ?

ಉತ್ತರ: ನಾನು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ಈ ಬಾರಿ ಟಿಕೆಟ್ ಬೇಡವೆಂದು ತಂದೆ ಹೇಳಿದ್ದರು. ಪಕ್ಷದ ವರಿಷ್ಠರು ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿದ್ದರು. ಬಹುತೇಕರು ನನ್ನ ಹೆಸರು ಹೇಳಿದ್ದರಿಂದ, ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ನಾನು ಸಾಮಾನ್ಯ ಕಾರ್ಯಕರ್ತ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿ ಚುನಾವಣೆಗೆ ನಿಂತಿದ್ದೇನೆ

* ಪ್ರತಿಸ್ಪರ್ಧಿ ಯಾರು ? ನಿಮ್ಮನ್ನು ಸೋಲಿಸಲು ರಾಜ್ಯ ಸರ್ಕಾರವೇ ಕ್ಷೇತ್ರಕ್ಕೆ ಬಂದಿದೆಯಲ್ಲವೇ ?

ಉತ್ತರ: ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಎಲ್ಲ ಶಾಸಕರು, ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬರುವುದು ಸಹಜ. ಆದರೆ, ಕ್ಷೇತ್ರದ ಮತದಾರರು ಬುದ್ಧಿವಂತರು. ಭೇದ–ಭಾವ ಮಾಡದೇ ಅಭಿವೃದ್ಧಿ ನೋಡಿ ಹಾಗೂ ಮುಂದೆ ಯಾರು ಅಭಿವೃದ್ಧಿ ಮಾಡುತ್ತಾರೆ ಎಂಬುದನ್ನು ತಿಳಿದು, ಮತ ಹಾಕುತ್ತಾರೆ

* ಜನರಿಗೆ ನೀವು ನೀಡುವ ಪ್ರಮುಖ ಮೂರು ಆಶ್ವಾಸನೆಗಳು ಏನು?

ಉತ್ತರ: ತಂದೆಯವರು, ಕ್ಷೇತ್ರದಲ್ಲಿ ‘ಜಲಜೀವನ್ ಮಿಷನ್’ ಯೋಜನೆ ಮೂಲಕ ಮನೆ ಮನೆಗೆ ನೀರು ಕೊಟ್ಟಿದ್ದಾರೆ. ತಲಾ ₹ 5 ಲಕ್ಷ ಮೊತ್ತದಲ್ಲಿ 15,000 ಮನೆ ಕಟ್ಟಿಸಿದ್ದಾರೆ. ದೂರದೃಷ್ಟಿಯಿಂದ ಶಾಶ್ವತ ಗ್ಯಾರಂಟಿಗಳನ್ನು ನೀಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇನೆ. ಶಿಕ್ಷಣ, ಆರೋಗ್ಯ, ರೈತರು, ರೈತರ ಆದಾಯ ವೃದ್ಧಿ, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇನೆ.

* ಅಲ್ಪಸಂಖ್ಯಾತ ಸಮುದಾಯದವರ ಜೊತೆ ಬಸವರಾಜ ಬೊಮ್ಮಾಯಿ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಅವರೊಂದಿಗೆ ನಿಮ್ಮ ಒಡನಾಟ ಹೇಗಿರುತ್ತದೆ ?

ಉತ್ತರ: ತಂದೆ (ಬಸವರಾಜ ಬೊಮ್ಮಾಯಿ) ಹಾಗೂ ತಾತ (ಎಸ್‌.ಆರ್. ಬೊಮ್ಮಾಯಿ), ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಹೇಳುತ್ತಿದ್ದರು. ಅವರ ಮಾತಿನಂತೆ, ಭಾವೈಕ್ಯದ ನಾಡಾದ ಶಿಗ್ಗಾವಿ–ಸವಣೂರು ಕ್ಷೇತ್ರದಲ್ಲಿ ಸರ್ವಜನಾಂಗದ ಅಭಿವೃದ್ಧಿಗೆ ಶ್ರಮಿಸುವೆ.

ಭರತ್ ಬೊಮ್ಮಾಯಿ
ಭರತ್ ಬೊಮ್ಮಾಯಿ

* ಟಿಕೆಟ್ ವಿಷಯದಲ್ಲಿ ಬಿಜೆಪಿಯಲ್ಲಿ ಬಂಡಾಯ ಎದ್ದಿತ್ತು? ಅದು ಪ್ರಭಾವ ಬೀರುವುದೇ?

ಉತ್ತರ: ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ ಇಲ್ಲ. ಎಲ್ಲರೂ ನಮ್ಮವರು. ಎಲ್ಲರೂ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿಗಳು. ಬಿಜೆಪಿ ಗೆಲ್ಲಿಸುವುದೇ ಎಲ್ಲರ ಗುರಿ. ಜವಾಬ್ದಾರಿಗಳನ್ನು ವಹಿಸಿಕೊಂಡು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.