ADVERTISEMENT

ಶಿಗ್ಗಾವಿ ಉಪ ಚುನಾವಣೆ: ಮುತ್ತಜ್ಜ, ಅಜ್ಜ, ಅಪ್ಪನ ದಾರಿಯಲ್ಲಿ ‘ಭರತ್‌’

ಬೊಮ್ಮಾಯಿ ಕುಟುಂಬದ ಐದನೇ ತಲೆಮಾರಿಗೆ ಬಿಜೆಪಿ ಟಿಕೆಟ್

ಸಂತೋಷ ಜಿಗಳಿಕೊಪ್ಪ
Published 20 ಅಕ್ಟೋಬರ್ 2024, 7:19 IST
Last Updated 20 ಅಕ್ಟೋಬರ್ 2024, 7:19 IST
ಭರತ್‌ ಬೊಮ್ಮಾಯಿ
ಭರತ್‌ ಬೊಮ್ಮಾಯಿ   

ಹಾವೇರಿ: ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಮಗ ಭರತ್‌ ಅವರಿಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ದಕ್ಕಿದೆ. ಬೊಮ್ಮಾಯಿ ಕುಟುಂಬದ ಐದನೇ ತಲೆಮಾರಿನ ಭರತ್ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಕ್ಷೇತ್ರದಲ್ಲಿ ನಾಲ್ಕು ಬಾರಿ (2008 ರಿಂದ 2023) ಶಾಸಕರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರು ಮತದಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ‘ಕಾಂಗ್ರೆಸ್ ಅಲೆ ಜೋರಿರುವ ಪರಿಸ್ಥಿತಿಯಲ್ಲಿ ಬಿಜೆಪಿ ಉಳಿಸಿಕೊಳ್ಳಲು ಬೊಮ್ಮಾಯಿ ಅವರ ಮಗನೇ ಸೂಕ್ತ ಅಭ್ಯರ್ಥಿ. ಅವರು ಸಾದರ ಲಿಂಗಾಯತರಾಗಿದ್ದು, ಅವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಭರತ್ ಅವರ ಮುತ್ತಜ್ಜ ಮಲ್ಲಪ್ಪ ಬಸಪ್ಪ ಹುರುಳಿಕುಪ್ಪಿ (ಬಸವರಾಜ ಬೊಮ್ಮಾಯಿ ಅವರ ಅಜ್ಜ) ಅವರು 1952ರಲ್ಲಿ (ಬಾಂಬೆ ಸರ್ಕಾರ) ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕರಾಗಿದ್ದರು. ಅಜ್ಜ ಎಸ್‌.ಆರ್. ಬೊಮ್ಮಾಯಿ (ಬಸವರಾಜ ಅವರ ತಂದೆ) ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ತಂದೆ ಬಸವರಾಜ ಬೊಮ್ಮಾಯಿ ಕೂಡ ಒಮ್ಮೆ ಮುಖ್ಯಮಂತ್ರಿಯಾಗಿದ್ದು, ಸದ್ಯ ಸಂಸದರಾಗಿದ್ದಾರೆ. ನಾಲ್ಕು ತಲೆಮಾರುಗಳ ಬಳಿಕ, ಐದನೇ ತಲೆಮಾರಿನವರಾದ ಭರತ್‌ ಬೊಮ್ಮಾಯಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ.

ADVERTISEMENT

8 ಕಂಪನಿ ನಿರ್ವಹಣೆ: ಬಾಲ್ಯದಿಂದಲೂ ರಾಜಕೀಯದಿಂದ ದೂರವಿರುವ 35 ವರ್ಷ ವಯಸ್ಸಿನ ಭರತ್, ಓದಿನಲ್ಲಿ ಮುಂದಿದ್ದರು. ಅಮೆರಿಕದ ಇಂಡಿಯಾನಾದ ಪುರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಬಿ.ಎಸ್. (ಬ್ಯಾಚುಲರ್ ಆಫ್ ಎಂಜಿನಿಯರಿಂಗ್) ಪದವಿ ಹಾಗೂ ಸಿಂಗಪುರ ಮ್ಯಾನೇಜ್‌ಮೆಂಟ್ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

35 ವರ್ಷ ವಯಸ್ಸಿನ ಭರತ್, ಶಿಕ್ಷಣ ಮುಗಿಯುತ್ತಿದ್ದಂತೆ ಉದ್ಯಮದಲ್ಲಿ ತೊಡಗಿಸಿಕೊಂಡರು. 2014ರ ಜುಲೈನಲ್ಲಿ ಆಟೊಟೆಕ್ ಎಂಜಿನಿಯರ್ಸ್ ಕಂಪನಿ ಸ್ಥಾಪಿಸಿ ಅದರ ಕಾರ್ಯನಿರ್ವಾಹಕ ನಿರ್ದೇಶಕರಾದರು. ಇದಾದ ಬಳಿಕ ಅವರು, ವಾಲ್ಟೆಕ್ ಕಾರ್ಪೊರೇಷನ್, ವಾಲ್ಟೆಕ್ ಇಂಡಸ್ಟ್ರೀಜ್, ಅಶ್ವಾ ಎನರ್ಜಿ, ಮಾಗ್ನೆಟಿಕ್ ಎಂಜಿನಿಯರ್ಸ್, ಐಬಿ ಕ್ಯೂಬ್, ಪ್ರಭಾಂಜನ ಅಪೇರಲ್ಸ್ (ಬೊಮ್ಮಾಯಿ ಗ್ರೂಪ್) ಹಾಗೂ ಬ್ಲೇಜ್ಡ್ ಫಾರ್ಮಾ ಕಂಪನಿಗಳನ್ನೂ ನಡೆಸುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ
ಎಸ್.ಆರ್‌. ಬೊಮ್ಮಾಯಿ 

‘ಕಾಂಗ್ರೆಸ್ ಇಬ್ಬರು ಮುಸ್ಲಿಂ– ಇಬ್ಬರು ಲಿಂಗಾಯತ ಅಭ್ಯರ್ಥಿ ಹೆಸರು ಅಂತಿಮ’

ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಅವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆ, ಕಾಂಗ್ರೆಸ್ ಪಕ್ಷದಲ್ಲಿಯೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.

ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಮುಖಂಡರು, ಟಿಕೆಟ್ ನೀಡುವ ವಿಚಾರವಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಂತಿಮವಾಗಿ, ಇಬ್ಬರು ಮುಸ್ಲಿಂ ಹಾಗೂ ಇಬ್ಬರು ಲಿಂಗಾಯತ ಅಭ್ಯರ್ಥಿಗಳ ಹೆಸರುಗಳನ್ನು ವರಿಷ್ಠರು ಅಂತಿಮಗೊಳಿಸಿರುವುದಾಗಿ ಪಕ್ಷದ ಮೂಲಗಳು ಹೇಳಿವೆ.

‘ನಾಲ್ವರು ಅಭ್ಯರ್ಥಿಗಳ ಹೆಸರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ. ನಾಲ್ವರಲ್ಲಿ ಇಬ್ಬರ ಹೆಸರನ್ನು ಅಂತಿಮಗೊಳಿಸಿ, ಹೈಕಮಾಂಡ್‌ಗೆ ಕಳುಹಿಸಲಾಗುತ್ತದೆ. ಈ ಇಬ್ಬರಲ್ಲಿ ಅಭ್ಯರ್ಥಿ ಯಾರು ? ಎಂಬುದನ್ನು ಹೈಕಮಾಂಡ್ ಘೋಷಿಸಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಷೇತ್ರದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಹಾಗೂ ಮುಖಂಡರು, ಲಿಂಗಾಯತ ಅಭ್ಯರ್ಥಿ ಪರ ಒಲವು ತೋರಿಸುತ್ತಿದ್ದಾರೆ. ಭರತ್ ಅವರಿಗೆ ಟಿಕೆಟ್ ಕೊಟ್ಟಿರುವುದರಿಂದ, ಅವರ ವಿರುದ್ಧ ಲಿಂಗಾಯತ ಅಭ್ಯರ್ಥಿ ನಿಲ್ಲಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಟಿಕೆಟ್ ನೀಡುವ ಬಗ್ಗೆ ಹೆಚ್ಚಿನ ಪರಾಮರ್ಶೆ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.