ADVERTISEMENT

ಶಿಗ್ಗಾವಿ ಉಪಚುನಾವಣೆ: ಶಕ್ತಿ ಪ್ರದರ್ಶಿಸಿದ ಭರತ್–ಯಾಸೀರ್

* ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ * ಕೊನೆಯ ದಿನದಂದೂ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:39 IST
Last Updated 25 ಅಕ್ಟೋಬರ್ 2024, 23:39 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ನಾಮಪತ್ರ ಮೆರವಣಿಗೆ ನಡೆಸಿದರು
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ನಾಮಪತ್ರ ಮೆರವಣಿಗೆ ನಡೆಸಿದರು   

ಶಿಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರು ತಮ್ಮ ಪಕ್ಷದ ನಾಯಕರ ನೇತೃತ್ವದಲ್ಲಿ ಶುಕ್ರವಾರ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿ, ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಮೆರವಣಿಗೆಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಛಲವಾದಿ ನಾರಾಯಣಸ್ವಾಮಿ, ಭೈರತಿ ಬಸವರಾಜ್, ಮುರುಗೇಶ ನಿರಾಣಿ, ಶಿವಕುಮಾರ ಉದಾಸಿ ಹಾಜರಿದ್ದರು.

ಅಭ್ಯರ್ಥಿ ಭರತ್‌ ಬೊಮ್ಮಾಯಿ ಮಾತನಾಡಿ, ‘ಕ್ಷೇತ್ರ ಅಭಿವೃದ್ಧಿಗಾಗಿ ತಂದೆ ಬಸವರಾಜ ಬೊಮ್ಮಾಯಿ ಅವರು ಕಂಡ ಕನಸನ್ನು ನನಸು ಮಾಡುವುದೇ ನನ್ನ ಕೆಲಸ. ಕ್ಷೇತ್ರದ ರೈತರು, ಹಿಂದುಳಿದವರು, ಪರಿಶಿಷ್ಟ ಜಾತಿ–ಪಂಗಡದವರು ಸೇರಿದಂತೆ ಎಲ್ಲರ ಏಳ್ಗೆಗಾಗಿ ಶ್ರಮಿಸುವೆ. ಪ್ರತಿಯೊಬ್ಬರು ಮತದ ರೂಪದಲ್ಲಿ ನನಗೆ ಆಶೀರ್ವಾದಿಸಬೇಕು’ ಎಂದರು.

ADVERTISEMENT

ತರಾತುರಿಯಲ್ಲಿ ನಾಮಪತ್ರ ಸಲ್ಲಿಕೆ:

ಗುರುವಾರ ತಡವಾಗಿ ಟಿಕೆಟ್ ಘೋಷಣೆಯಾಗಿದ್ದರಿಂದ ಬೆಂಗಳೂರಿನಿಂದ ಶಿಗ್ಗಾವಿಗೆ ಶುಕ್ರವಾರ ನಸುಕಿನಲ್ಲಿ ಬಂದ ಯಾಸೀರ್ ಅಹ್ಮದ್‌ ಖಾನ್, ತರಾತುರಿಯಲ್ಲಿ ಬೆಳಿಗ್ಗೆಯೇ ಸೂಚಕರ ಜೊತೆ ಸೇರಿ ಚುನಾವಣಾಧಿಕಾರಿಗೆ ಮೊದಲ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ಮುಖಂಡರ ಜೊತೆ ಸೇರಿ ಎರಡನೇ ಬಾರಿ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್‌ ಮೆರವಣಿಗೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಶಿವಾನಂದ ಪಾಟೀಲ, ಶಾಸಕರಾದ ಪ್ರಕಾಶ ಕೋಳಿವಾಡ, ಶ್ರೀನಿವಾಸ್ ಮಾನೆ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ಮುಖಂಡರಾದ ಸಲೀಂ ಅಹ್ಮದ್, ವಿನೋದ ಅಸೂಟಿ ಹಾಜರಿದ್ದರು.

ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಮಾತನಾಡಿ, ‘ನಾನು ಯಾವುದೇ ಸಿ.ಎಂ ಮಗನಲ್ಲ. ಸಾಮಾನ್ಯ ರೈತ ಕುಟುಂಬದ ಮಗ. ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಕೃತಜ್ಞತೆಗಳು. ಜನರ ಸಮಸ್ಯೆಗಳ ಅರಿವು ನನಗಿದೆ. ಸೋತರೂ ಕ್ಷೇತ್ರದಲ್ಲಿದ್ದು, ಸಂಘಟನೆ ಮಾಡಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ’ ಎಂದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ಮೆರವಣಿಗೆ ನಡೆಸಿದರು
ಭಾರತ ಮಾತಾಕೀ ಜೈ ಎಂದರೆ ಜೈಲಿಗೆ ಹಾಕುವ ಸರ್ಕಾರ ರಾಜ್ಯದಲ್ಲಿದೆ. ಇದೇ ಘೋಷಣೆ ಕೂಗಿದರೆ ರಕ್ಷಿಸುವ ಸರ್ಕಾರ ಕೇಂದ್ರದಲ್ಲಿದೆ. ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಪಾಠ ಕಲಿಸಿ.
ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣ ಅವರು ಶುಕ್ರವಾರ ಮುಖಂಡರು–ಕಾರ್ಯಕರ್ತರ ಜೊತೆ ಮೆರವಣಿಗೆ ನಡೆಸಿದರು
ಕ್ಷೇತ್ರದ ಅಭಿವೃದ್ಧಿ ಮುಂದುವರಿಯಲು ಹಾಗೂ ಜನರ ರಕ್ಷಣೆಗೆ ಭರತ್‌ಗೆ ಆಶೀರ್ವಾದ ಮಾಡಿ. ಅಧಿಕಾರ ಇರಲಿ ಬಿಡಲಿ ಜೀವ ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ
ಬಸವರಾಜ ಬೊಮ್ಮಾಯಿ ಸಂಸದ
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣ ಅವರು ಶುಕ್ರವಾರ ಮುಖಂಡರು–ಕಾರ್ಯಕರ್ತರ ಜೊತೆ ಮೆರವಣಿಗೆ ನಡೆಸಿದರು
ಕ್ಷೇತ್ರದಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ಖಚಿತವಾಗಿದೆ. ಬಸವರಾಜ ಬೊಮ್ಮಾಯಿ ಅವರಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಭರತ್ ಅವರನ್ನು ಗೆಲ್ಲಿಸಬೇಕು
ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ
ಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿರುವುದಾಗಿ ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಅವರು ಒಂದೇ ಒಂದು ಮನೆ ಕೊಟ್ಟಿರುವುದನ್ನು ತೋರಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ
ಜಮೀರ್ ಅಹಮದ್ ಖಾನ್ ಸಚಿವ
ಶ್ರೀಕಾಂತ್ ದುಂಡಿಗೌಡ್ರಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ದೆಹಲಿಗೆ ಕರೆದುಕೊಂಡು ಹೋಗಿ ಬಂದಿದ್ದ ಬಸವರಾಜ ಬೊಮ್ಮಾಯಿ ಕೊನೆಯಲ್ಲಿ ಮಗನಿಗೆ ಟಿಕೆಟ್ ಕೊಡಿಸಿದರು.
ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ಬಿಜೆಪಿ–ಕಾಂಗ್ರೆಸ್ ವಿರುದ್ಧ ನೇರ ಹಣಾಹಳಿ ಇದೆ. ಬಡವರ ಪರವಾಗಿರುವ ಪಂಚ ಗ್ಯಾರಂಟಿಗಳು ಮುಂದುವರಿಯಲು ಕಾಂಗ್ರೆಸ್‌ಗೆ ಮತ ನೀಡಬೇಕು. ನಮ್ಮದೇ ಸರ್ಕಾರವಿದೆ. ಕ್ಷೇತ್ರ ಅಭಿವೃದ್ಧಿ ಆಗಲಿದೆ.
ಈಶ್ವರ ಖಂಡ್ರೆ ಸಚಿವ

ಕಾಂಗ್ರೆಸ್‌ಗೆ ಬಂಡಾಯ: ಇಬ್ಬರಿಂದ ‘ಪಕ್ಷೇತರ’ ನಾಮಪತ್ರ

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕರಾದ ಸೈಯದ್ ಅಜ್ಜಂಪೀರ್ ಖಾದ್ರಿ ಮತ್ತು  ಮಂಜುನಾಥ್ ಕುನ್ನೂರು ಅವರು ಶುಕ್ರವಾರ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ‘ಪಕ್ಷದಿಂದ ನಮಗೆ ಅನ್ಯಾಯವಾಗಿದ್ದು ಬೆಂಬಲಿಗರು ನೊಂದಿದ್ದಾರೆ. ಅಪರಾಧ ಹಿನ್ನೆಲೆಯುಳ್ಳ ಪಠಾಣ ಅವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಇಬ್ಬರೂ ಆರೋಪಿಸಿದರು. ಸುದ್ದಿಗಾರರ ಜೊತೆ ಸೈಯದ್ ಅಜ್ಜಂಪೀರ್ ಖಾದ್ರಿ ಮಾತನಾಡಿ ‘ನಮ್ಮ ಬೆಂಬಲಿಗರೇ ನನಗೆ ಹೈಕಮಾಂಡ್. ಅವರೇ ದೇವರು. ಇಂದು ಸಭೆ ಮಾಡಿ ಪಕ್ಷೇತರವಾಗಿ ನಿಲ್ಲುವಂತೆ ಅವರು ಹೇಳಿದ್ದರು. ಹೀಗಾಗಿ ಕೊನೆ ಗಳಿಕೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದೇನೆ’ ಎಂದರು. ಮುಸ್ಲಿಂ ಸಮುದಾಯದ ಮುಖಂಡರಾದ ಖಾದ್ರಿ 1999ರ ಅವಧಿಯಲ್ಲಿ ಶಾಸಕರಾಗಿ ಕೆಲಸ ಮಾಡಿದ್ದರು. ಪಂಚಮಸಾಲಿ ಲಿಂಗಾಯತ ಸಮುದಾಯದ ಮಂಜುನಾಥ್ ಕುನ್ನೂರು ಅವರು 1989 ಹಾಗೂ 1994ರ ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿದ್ದರು.

ಸಂಧಾನಕ್ಕೆ ಹೋಗಿದ್ದ ಜಮೀರ್ ಕಾರಿಗೆ ಕಲ್ಲೇಟು

ಕಾಂಗ್ರೆಸ್‌ ವಿರುದ್ಧ ಬಂಡಾಯ ಎದ್ದಿರುವ ಸೈಯದ್ ಅಜ್ಜಂಪೀರ ಖಾದ್ರಿ ಅವರನ್ನು ಸಮಾಧಾನಪಡಿಸಿ ಸಂಧಾನ ಮಾಡಲು ಹುಲಗೂರಿನಲ್ಲಿರುವ ಮನೆಗೆ ಶುಕ್ರವಾರ ಹೋಗಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರ ಕಾರಿನ ಮೇಲೆ ಬೆಂಬಲಿಗರು ಕಲ್ಲು ತೂರಿದರು. ಕಾರಿನ ಗಾಜು ಒಡೆಯಿತು. ಸ್ಥಳದಲ್ಲಿದ್ದ ಮುಖಂಡರು ಜಮೀರ್ ಅವರನ್ನು ಸ್ಥಳದಿಂದ ಸುರಕ್ಷಿತವಾಗಿ ವಾಪಸು ಕಳುಹಿಸಿಕೊಟ್ಟರು. ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’ ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ಒತ್ತಡ ಹೇರಿದ್ದರು. ಖಾದ್ರಿ ಅವರನ್ನು ಸಮಾಧಾನಪಡಿಸಲು ಜಮೀರ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಕಾರಿನಲ್ಲಿ ಮನೆಗೆ ಹೋಗಿದ್ದರು. ಮನೆಯಲ್ಲಿ ಮಾತುಕತೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಖಾದ್ರಿ ಬೆಂಬಲಿಗರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಬಳಿಕ ಜಮೀರ್ ಸ್ಥಳದಿಂದ ಹೊರಬಂದರು.

ಬ್ಯಾನರ್ ವಿಚಾರ: ಕೆಆರ್‌ಎಸ್– ಬಿಜೆಪಿ ಜಟಾಪಟಿ

ಶಿಗ್ಗಾವಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾನರ್‌–ಕಟೌಟ್‌ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕೆಆರ್‌ಎಸ್ ಕಾರ್ಯಕರ್ತರ ನಡುವೆ ಶುಕ್ರವಾರ ಜಟಾಪಟಿ ನಡೆಯಿತು.   ಭರತ್ ಬೊಮ್ಮಾಯಿ ಮೆರವಣಿಗೆಗಾಗಿ ಸ್ವಾಗತ ಕೋರಲು ಬ್ಯಾನರ್–ಕಟೌಟ್ ಹಾಕಲಾಗಿತ್ತು. ಅವುಗಳನ್ನು ಅಕ್ರಮವಾಗಿ ಹಾಕಿರುವುದಾಗಿ ಆರೋಪಿಸಿದ ಕೆಆರ್‌ಎಸ್‌ ಕಾರ್ಯಕರ್ತರು ಅವುಗಳನ್ನು ತೆರವು ಮಾಡುವಂತೆ ಪ್ರತಿಭಟನೆ ನಡೆಸಿದರು. ‘ಬಿಜೆಪಿಯವರು ಚುನಾವಣಾ ಆಯೋಗದ ಅನುಮತಿ ಪಡೆಯದೇ ಅಕ್ರಮವಾಗಿ ಬ್ಯಾನರ್ ಮತ್ತು ಕಟೌಟ್ ಕಟ್ಟಿದ್ದಾರೆ. ಪುರಸಭೆ ಹಾಗೂ ಸ್ಥಳೀಯ ಅಧಿಕಾರಿಗಳು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಅಕ್ರಮವಾಗಿ ಬ್ಯಾನರ್ ಹಾಗೂ ಕಟೌಟ್ ಕಟ್ಟಿದರೂ ಅಧಿಕಾರಿಗಳು‌ ಮೌನ ಆಗಿದ್ದಾರೆ. ನ್ಯಾಯ ಸಮ್ಮತ ಚುನಾವಣೆ ನಡೆಸಲು ಆಯೋಗ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆರೋಪಿಸಿದರು. ಬಿಜೆಪಿ‌ ಮತ್ತು ಕೆಆರ್‌ಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಸ್ಥಳದಲ್ಲಿ ವಾಗ್ವಾದ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.