ADVERTISEMENT

ಶಿಗ್ಗಾವಿ ಉಪ ಚುನಾವಣೆ: ಅಹಿಂದ ಶಕ್ತಿ– ಪೈಲ್ವಾನ್ ಪಠಾಣ ಗೆದ್ದ ಕುಸ್ತಿ!

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಬೊಮ್ಮಾಯಿಗೆ ಆಘಾತ ನೀಡಿದ ಮತದಾರ: ಕಾಂಗ್ರೆಸ್ ಪರ ನಿಂತ ಸರ್ವಜನಾಂಗದ ಜನ

ಸಂತೋಷ ಜಿಗಳಿಕೊಪ್ಪ
Published 25 ನವೆಂಬರ್ 2024, 6:24 IST
Last Updated 25 ನವೆಂಬರ್ 2024, 6:24 IST
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಭಾನುವಾರ ಅಭಿನಂದನೆ ಸಲ್ಲಿಸಲು ಬಂದ ಕಾರ್ಯಕರ್ತರಿಗೆ ಯಾಸೀರ ಅಹಮದ್ ಖಾನ್ ಪಠಾಣ ಅವರು ಸಿಹಿ ತಿನ್ನಿಸಿ ಕೃತಜ್ಞತೆ ಸಲ್ಲಿಸಿದರು
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಭಾನುವಾರ ಅಭಿನಂದನೆ ಸಲ್ಲಿಸಲು ಬಂದ ಕಾರ್ಯಕರ್ತರಿಗೆ ಯಾಸೀರ ಅಹಮದ್ ಖಾನ್ ಪಠಾಣ ಅವರು ಸಿಹಿ ತಿನ್ನಿಸಿ ಕೃತಜ್ಞತೆ ಸಲ್ಲಿಸಿದರು   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದ್ದು, ಕ್ಷೇತ್ರದಲ್ಲಿರುವ ಅಹಿಂದ ಮತದಾರರು ತಮ್ಮ ಶಕ್ತಿ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ‘ಸೂಫಿ ಸಂತರು–ಶರಣರು–ಕನಕದಾಸರ ಭಾವೈಕ್ಯ ನಾಡು’ ಎನ್ನುತ್ತಲೇ ಪ್ರಚಾರ ಮಾಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ, ಅಹಿಂದ ಶಕ್ತಿಯಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಜನಸಂಖ್ಯೆವಾರು ಲಿಂಗಾಯತರು ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯವಿದೆ. ನಂತರದ ಸ್ಥಾನಗಳಲ್ಲಿ, ಹಿಂದುಳಿದ ವರ್ಗದವರು ಹಾಗೂ ಎಸ್‌.ಸಿ.–ಎಸ್‌.ಟಿ. ಸಮಯದಾಯದವರಿದ್ದಾರೆ.

ನಾಲ್ಕು ಅವಧಿಯಲ್ಲಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಲಿಂಗಾಯತರು ಹಾಗೂ ಅಹಿಂದ ಸಮುದಾಯದ ಮತಗಳ ಮೂಲಕ ಆಯ್ಕೆಯಾಗಿದ್ದರು. ಮುಸ್ಲಿಂ ಸಮುದಾಯದ ಮತಗಳನ್ನೂ ಅವರು ಸೆಳೆದಿದ್ದರು. ಆದರೆ, ಈ ಬಾರಿ ಫಲಿತಾಂಶ ಬದಲಾಗಿದೆ. ಬೊಮ್ಮಾಯಿ ಪರವಿದ್ದ ಬಹುತೇಕರು, ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ.

ADVERTISEMENT

ಮತದಾನದ ದಿನದಂದು ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಅವರು ಭಂಡಾರ ಹೋಲುವ ಬಣ್ಣದ ಶಾಲು ಧರಿಸಿಕೊಂಡು ಓಡಾಡಿದ್ದರು. ಕ್ಷೇತ್ರದಲ್ಲಿರುವ ಕುರುಬ ಸಮುದಾಯದ ಮತಗಳನ್ನು ಸೆಳೆಯಲು ಬೊಮ್ಮಾಯಿ ಈ ರೀತಿ ಮಾಡಿದ್ದರೆಂದು ಜನರು ಹೇಳುತ್ತಿದ್ದಾರೆ. ಜೊತೆಗೆ, ಒಳ ಮೀಸಲಾತಿ ಅಸ್ತ್ರ ಬಳಸಿಕೊಂಡು ಸಂಬಂಧಪಟ್ಟ ಸಮುದಾಯಗಳ ಮತ ಪಡೆಯಲು ತಂತ್ರ ರೂಪಿಸಿದ್ದರು. ಆದರೆ, ಯಾವುದೇ ತಂತ್ರ ಕೈ ಹಿಡಿಯಲಿಲ್ಲ.

ಬೊಮ್ಮಾಯಿ ಅವರ ಚುನಾವಣೆ ತಂತ್ರಗಳನ್ನು ಅರಿತಿದ್ದ ಕಾಂಗ್ರೆಸ್‌ ವರಿಷ್ಠರು, ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಮುಸ್ಲಿಂ ಸಮಯದಾಯದ ಮತಗಳನ್ನು ಗಟ್ಟಿಗೊಳಿಸಿದ್ದರು. ಲಿಂಗಾಯತರ ಮುಖಂಡರನ್ನೂ ಭೇಟಿಯಾಗಿ, ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದ್ದರು.

ಎರಡೂ ಪ್ರಬಲ ಸಮುದಾಯಗಳ ನಂತರ, ಕುರುಬರು ಹಾಗೂ ಎಸ್‌.ಸಿ.–ಎಸ್‌.ಟಿ ಸಮುದಾಯದವರನ್ನು ಸೆಳೆಯಲು ಸಜ್ಜಾದರು. ಅಹಿಂದ ಸಮುದಾಯಗಳ ಮುಖಂಡರ ಪಟ್ಟಿ ಸಿದ್ಧಪಡಿಸಿ, ಅವರೆಲ್ಲರ ಮನೆಗೂ ಕಾಂಗ್ರೆಸ್ ನಾಯಕರು ಭೇಟಿ ನೀಡಿದರು. ಅತ್ತ ಬೊಮ್ಮಾಯಿ, ಅಹಿಂದ ಸಮುದಾಯ ತಮ್ಮ ಪರವಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದರು. ತೆರೆಮರೆಯಲ್ಲಿಯೇ ಕಾಂಗ್ರೆಸ್ ಮುಖಂಡರು, ಅಹಿಂದ ಮತಗಳನ್ನು ಕಾಂಗ್ರೆಸ್‌ ತೆಕ್ಕೆಗೆ ತರಲು ಭದ್ರ ಬುನಾದಿಯನ್ನೇ ಹಾಕಿಬಿಟ್ಟಿದ್ದರು.

ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಹಿಂದ ಸಮುದಾಯಗಳ ಶಕ್ತಿ ತೋರಿಸಬೇಕಿತ್ತು. ಅದನ್ನು ತೋರಿಸಿದ್ದೇವೆ’ ಎಂದರು.

‘ಬಿಜೆಪಿ ಸೋಲಿಸಬೇಕು ಎಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಕ್ಷೇತ್ರದಲ್ಲಿ ಅಹಿಂದ ಸಮುದಾಯ ಗಟ್ಟಿಯಾಗಿದೆ. ಅಹಿಂದ ಸಮುದಾಯ ಒಗ್ಗಟ್ಟಾದರೆ, ಫಲಿತಾಂಶ ಏನಾಗುತ್ತದೆ ? ಎಂಬ ಸಂದೇಶ ಚುನಾವಣೆಯಲ್ಲಿ ಬಂದಿದೆ’ ಎಂದು ಹೇಳಿದರು.

ಜಾತಿ ಲೆಕ್ಕಾಚಾರದಲ್ಲಿ ನಾಯಕರ ಓಡಾಟ: ‘ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತಾರೆ. ಮುಸ್ಲಿಂ ಸಮುದಾಯದವರು, ಪಠಾಣ ಪರ ನಿಲ್ಲುತ್ತಾರೆ. ಉಳಿದಂತೆ, ಅಹಿಂದ ಸಮುದಾಯಗಳ ಮತವೇ ನಿರ್ಣಾಯಕ’ ಎಂಬುದನ್ನು ಅರಿತಿದ್ದ ಕಾಂಗ್ರೆಸ್ ಮುಖಂಡರು, ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ಪ್ರಚಾರಕ್ಕಾಗಿ ಸಚಿವರನ್ನು ನಿಯೋಜಿಸಿತ್ತು.

ಉಪ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ, ಜಾತಿಯ ಮುಖಂಡರ ಮನೆಗಳ ಭೇಟಿ ಶುರುವಾಯಿತು. ಬೂತ್ ಮಟ್ಟದಲ್ಲಿಯೇ ಅಹಿಂದ ಸಮುದಾಯದವರ ಮತಗಳನ್ನು ಒಗ್ಗೊಡಿಸುವ ಕೆಲಸ ಯಶಸ್ವಿಯಾಯಿತು.

ಕುರುಬ ಸಮುದಾಯದವರು ಹೆಚ್ಚಿರುವ ಬಂಕಾಪುರ, ಚಂದಾಪುರ, ಹುರಳಿಕುಪ್ಪಿ ಗ್ರಾಮಗಳಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ಪ್ರಚಾರ ಮಾಡಿದರು. ಗಂಗಿಬಾವಿಯಲ್ಲಿರುವ ರೆಸಾರ್ಟ್‌ನಲ್ಲಿ ಕುರುಬ ಸಮುದಾಯದವರ ಸಭೆ ಮಾಡಿ, ಈ ಬಾರಿ ಕಾಂಗ್ರೆಸ್‌ ಗೆಲ್ಲಿಸುವಂತೆ ಕೋರಿದರು.

ಎಸ್‌.ಸಿ.–ಎಸ್‌.ಟಿ ಸಮುದಾಯದವರು ಹೆಚ್ಚಿರುವ ಗ್ರಾಮಗಳಿಗೆ ಸತೀಶ ಜಾರಕಿಹೊಳಿ ಹಾಗೂ ಆರ್‌.ಬಿ. ತಿಮ್ಮಾಪುರ ಅವರು ಲಗ್ಗೆ ಇಟ್ಟರು. ತಮ್ಮ ಚುನಾವಣೆ ತಂತ್ರಗಳನ್ನು ಪ್ರಯೋಗಿಸಿ ಕಾಂಗ್ರೆಸ್‌ ಗೆಲ್ಲಿಸಿದರು. ಲಂಬಾಣಿ ಮತಗಳನ್ನು ಸೆಳೆಯಲು ರುದ್ರಪ್ಪ ಲಮಾಣಿ ಯಶಸ್ವಿಯಾದರು. ಶ್ರೀನಿವಾಸ ಮಾನೆ ಅವರ ಮನೆ ಮನೆ ಭೇಟಿ ಹಾಗೂ ಇತರೆ ತಂತ್ರಗಳು, ಕೈಗೆ ಗೆಲುವು ತಂದುಕೊಟ್ಟವು.

ಶಿಗ್ಗಾವಿ ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರತಿ ಬಾರಿ ಬಿಜೆಪಿಗೆ ಅಧಿಕ ಮತಗಳು ಬಿದ್ದಿದ್ದವು. ಸವಣೂರು ಪಟ್ಟಣದಲ್ಲಿ ಕಾಂಗ್ರೆಸ್‌ ಪರ ಮತಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಭದ್ರವಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರವೂ ಬುಡಮೇಲಾಗಿದೆ.

ಬಿಜೆಪಿಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರಿರುವ ಪ್ರದೇಶಗಳಲ್ಲಿಯೇ ಭರತ್‌ ಅವರಿಗೆ ನಿರಾಶೆಯಾಗಿದೆ. ತಕ್ಕಮಟ್ಟಿಗೆ ಮತಗಳು ಬಂದಿಲ್ಲ. ಎಲ್ಲ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌, ತನ್ನ ಅಭ್ಯರ್ಥಿಯನ್ನು ವಿಧಾನಸೌಧ ಪ್ರವೇಶಿಸುವಂತೆ ಮಾಡಿದೆ.

ಒಳ ಜಗಳದ ಲಾಭ ಪಡೆದ ಕಾಂಗ್ರೆಸ್: ಬಿಜೆಪಿ ಟಿಕೆಟ್ ಪಡೆಯಲು 50ಕ್ಕೂ ಹೆಚ್ಚು ಆಕಾಂಕ್ಷಿಗಳು, ಅರ್ಜಿ ಸಲ್ಲಿಸಿದ್ದರು. ಬೊಮ್ಮಾಯಿ ಮಗನಿಗೆ ಟಿಕೆಟ್ ಸಿಗುತ್ತಿದ್ದಂತೆ, ಹಲವರು ಬಂಡಾಯ ಎದ್ದರು. ಬಹಿರಂಗ ಸಭೆ ನಡೆಸಿದ್ದ ಮುಖಂಡ ಶ್ರೀಕಾಂತ ದುಂಡಿಗೌಡ್ರ, ತಟಸ್ಥವಾಗಿರುವುದಾಗಿ ಘೋಷಿಸಿದರು. ಉಳಿದ ಕೆಲವರ, ಒಳಜಗಳ ಮುಂದುವರಿದಿತ್ತು. ಇದರ ಲಾಭ ಪಡೆದ ಕಾಂಗ್ರೆಸ್ ಮುಖಂಡರು, ಸರ್ವಜನಾಂಗದ ಜನರ ನಿರ್ಣಾಯಕ ಮತಗಳು ಕಾಂಗ್ರೆಸ್‌ಗೆ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾದರು.

ಎಲ್ಲ ಸಮುದಾಯದ ಜನ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಸುಳ್ಳು ಆರೋಪ ಮಾಡುವ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ

–ಸಲೀಂ ಅಹ್ಮದ್ ವಿಧಾನಪರಿಷತ್ ಮುಖ್ಯಸಚೇತಕ

ಅಹಿಂದ ಸಂಘಟನೆಯ ಕಾರ್ಯಕರ್ತರ ಶ್ರಮ ಮತ್ತು ಸರ್ಕಾರದ ಜನಪರ ಯೋಜನೆಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಗೆದ್ದಿದ್ದಾರೆ

–ಅನಂತ ನಾಯ್ಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ

––––

ಮೂರನೇ ಸ್ಥಾನದಲ್ಲಿ ಕೆಆರ್‌ಎಸ್ ಕೆಆರ್‌ಎಸ್ ಪಕ್ಷದಿಂದ ಸ್ಪರ್ಧಿಸಿದ್ದ ರವಿಕೃಷ್ಣಾ ರೆಡ್ಡಿ ಅವರಿಗೆ 1876 ಮತಗಳು ಬಿದ್ದಿದ್ದು ಮೂರನೇ ಸ್ಥಾನದಲ್ಲಿದ್ದಾರೆ. 834 ನೋಟಾ ಮತಗಳು ಚಲಾವಣೆಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.