ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನು 26 ವರ್ಷಗಳ ಬಳಿಕ ತನ್ನ ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್, ಬಿಜೆಪಿಯ ಭದ್ರಕೋಟೆಯಲ್ಲಿ ‘ಕೈ’ ಬಾವುಟ ಹಾರಿಸಿದೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ‘ಪೈಲ್ವಾನ’ ಯಾಸೀರ ಅಹಮದ್ ಖಾನ್ ಪಠಾಣ, ಉಪಚುನಾವಣೆ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧದ ‘ಕುಸ್ತಿ’ಯಲ್ಲಿ ಗೆದ್ದಿದ್ದಾರೆ.
ನಾಲ್ಕು ಅವಧಿಗೆ ಶಾಸಕರಾಗಿ ಮುಖ್ಯಮಂತ್ರಿಯೂ ಆಗಿದ್ದ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಬೇರೂರಿದ್ದ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ ಮತದಾರರು, ಈ ಬಾರಿ ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ.
ಒಳ ಜಗಳ ಮತ್ತು ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಬಿಜೆಪಿ ಸೋಲು ಅನುಭವಿಸಿದರೆ, ಒಳಜಗಳಗಳನ್ನು ನಿವಾರಿಸಿಕೊಂಡು ಮುಖಂಡರು ಒಟ್ಟಾಗಿ ಎದುರಿಸಿದ್ದರಿಂದ ಕಾಂಗ್ರೆಸ್‌ಗೆ ಗೆಲುವು ದಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭರತ್ ಅವರ ಅಜ್ಜ ಎಸ್.ಆರ್.ಬೊಮ್ಮಾಯಿ ಮತ್ತು ತಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಬಸವರಾಜ ಬೊಮ್ಮಾಯಿ, ಈ ಬಾರಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದರು. ಈ ಕುರಿತು ಬಿಜೆಪಿಯ ಹಲವು ಮುಖಂಡರಲ್ಲಿ ಅಸಮಾಧಾನ ಉಂಟಾಗಿತ್ತು. ಇದು ಕೂಡ ಬಿಜೆಪಿ ಸೋಲಿಗೆ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರ ಮನಗೆದ್ದಿದ್ದು, ಮಹಿಳಾ ಮತದಾರರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಮತದಾನಕ್ಕೂ ಮುನ್ನಾದಿನವೇ ಮನೆಯ ಯಜಮಾನಿಯರ ಖಾತೆಗೆ ₹2,000 ಗೃಹ ಲಕ್ಷ್ಮಿ ಹಣ ಜಮೆ ಮಾಡಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ 2ಎ ಮೀಸಲಾತಿ ಹೋರಾಟ ನಡೆದಿತ್ತು. ಆದರೆ, ಬೊಮ್ಮಾಯಿ ಈ ಬಗ್ಗೆ ಗಮನ ಹರಿಸಿರಲಿಲ್ಲ. ಇದೇ ಕಾರಣಕ್ಕೆ ಪಂಚಮಸಾಲಿ ಮತಗಳು, ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ತೆಕ್ಕೆಗೆ ಬಿದ್ದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಠಾಣ ಗೆಲ್ಲಿಸಿದ ‘ಗ್ಯಾರಂಟಿ’: ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿವೆ. ಇಡೀ ರಾಜ್ಯ ಸರ್ಕಾರವೇ, ಪಠಾಣ ಪರ ಪ್ರಚಾರದ ಕಣಕ್ಕೆ ಇಳಿದಿದ್ದರಿಂದ ಗೆಲುವು ಸುಲಭವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಪಠಾಣ ಜನರ ಒಡನಾಟ ಬಿಟ್ಟಿರಲಿಲ್ಲ. ಅನುಕಂಪದ ಮತಗಳೂ ಪಠಾಣ ಕೈ ಹಿಡಿದಿವೆ. ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರಕ್ಕೆ ಬಂದಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿ, ಜಮೀರ್ ಅಹಮದ್ ಖಾನ್ ಅವರು ಬಿತ್ತಿದ್ದ ಬೀಜಗಳು ಮೊಳಕೆಯೊಡೆದು ‘ಕಾಂಗ್ರೆಸ್’ಗೆ ಫಲ ನೀಡಿವೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಶಿಗ್ಗಾವಿಯಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದರು. ಶಿಗ್ಗಾವಿಯಲ್ಲೂ ಕಾಂಗ್ರೆಸ್ ಗೆದ್ದಿದ್ದು, ಹಾವೇರಿ ಜಿಲ್ಲೆ ‘ಬಿಜೆಪಿ ಶಾಸಕ ಮುಕ್ತ’ ಜಿಲ್ಲೆಯಾಗಿದೆ.
ಕಾಂಗ್ರೆಸ್ ಹರಿಸಿದ ಹಣದ ಹೊಳೆಯಿಂದ ಸೋಲಾಗಿದೆ. ಕಾರಣವೇನು ಎಂಬುದನ್ನು ಚರ್ಚಿಸುತ್ತೇವೆ. ಫಲಿತಾಂಶದ ಬಗ್ಗೆ ಅವಲೋಕಿಸುತ್ತೇವೆ. ಜನಪರ ಕೆಲಸ ಮುಂದುವರಿಸುವೆ-ಭರತ್ ಬೊಮ್ಮಾಯಿ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ
ಅಲ್ಪಸಂಖ್ಯಾತ ಸಮುದಾಯದ ಸಾಮಾನ್ಯ ಕುಟುಂಬದ ನನ್ನನ್ನು ಜನರು ಗೆಲ್ಲಿಸಿದ್ದಾರೆ. ದೇಶಕ್ಕೆ ಭಾವ್ಯಕ್ಯದ ಸಂದೇಶ ಸಾರಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವೆ-ಯಾಸೀರ ಅಹಮದ್ ಖಾನ್ ಪಠಾಣ ವಿಜೇತ ಕಾಂಗ್ರೆಸ್ ಅಭ್ಯರ್ಥಿ
ಜನರ ತೀರ್ಪಿಗೆ ತಲೆಬಾಗುವೆ. ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆಡಳಿತ ಪಕ್ಷ ಎಂಬ ಕಾರಣಕ್ಕೆ ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ-ಬಸವರಾಜ ಬೊಮ್ಮಾಯಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.