ADVERTISEMENT

ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ: ಟಿಕೆಟ್‌ಗಾಗಿ ಕಸರತ್ತು

ಟಿಕೆಟ್‌ ಆಕಾಂಕ್ಷಿಗಳಿಂದ ಶಕ್ತಿ ಪ್ರದರ್ಶನ

ಸಂತೋಷ ಜಿಗಳಿಕೊಪ್ಪ
Published 26 ಜೂನ್ 2024, 4:14 IST
Last Updated 26 ಜೂನ್ 2024, 4:14 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಶಿಗ್ಗಾವಿ– ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸದ್ಯದಲ್ಲೇ ಉಪ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಪಕ್ಷಗಳ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ.

ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ್ದಾರೆ. ಕಮಲದ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ, ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿವೆ.

ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರವು ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಕಾಂಗ್ರೆಸ್ ಅಭ್ಯರ್ಥಿ ಸುಮಾರು 8,500 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇದೇ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲೂ ಕೈ ಅಭ್ಯರ್ಥಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರವಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲೂ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಶುರುವಾಗಿದೆ.

ADVERTISEMENT

‘ಬಸವರಾಜ ಬೊಮ್ಮಾಯಿ ಅವರು ಎಲ್ಲ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸಿನಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಈ ಬಾರಿಯ ಚುನಾವಣೆ ಬಿಜೆಪಿಗೆ ದೊಡ್ಡ ಸವಾಲಾಗಲಿದೆ’ ಎಂಬುದು ಸ್ಥಳೀಯರ ಅಭಿಪ್ರಾಯ.

‘ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶಗಳಿವೆ. ಆದರೆ, ಕಾಂಗ್ರೆಸ್‌ ಸ್ಥಳೀಯ ಮುಖಂಡರಲ್ಲಿ ಗುಂಪುಗಾರಿಕೆ ಹೆಚ್ಚಿದೆ. ಟಿಕೆಟ್ ತಮಗೇ ಸಿಗಬೇಕೆಂಬ ಹಠದಿಂದ, ಪಕ್ಷದಲ್ಲಿ ಒಳ ಜಗಳಗಳು ಶುರುವಾಗಿವೆ. ಇದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಉಂಟು ಮಾಡಬಹುದು’ ಎಂದೂ ಮತದಾರರು ಹೇಳುತ್ತಿದ್ದಾರೆ.

ಉಭಯ ಪಕ್ಷಗಳ ಮುಖಂಡರು, ತಮ್ಮದೇ ಮತದಾರರ ತಂಡ ಕಟ್ಟಿಕೊಂಡು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಹಬ್ಬ, ವಿಶೇಷ ದಿನ ಹಾಗೂ ಮತದಾರರ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಶುಭ ಕೋರುತ್ತಿದ್ದಾರೆ. ‘ಶಿಗ್ಗಾವಿ–ಸವಣೂರು ಕ್ಷೇತ್ರದ ಆಕಾಂಕ್ಷಿ’ ಎಂಬುದಾಗಿ ಪೋಸ್ಟರ್‌ಗಳನ್ನು ಸಿದ್ಧಪಡಿಸಿ, ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಆರಂಭಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಆಕಾಂಕ್ಷಿಗಳು: ಕಾಂಗ್ರೆಸ್ಸಿನ ಸ್ಥಳೀಯ ಆಕಾಂಕ್ಷಿಗಳು, ತಮ್ಮ ಜನ ಹಾಗೂ ಹಣ ಬಲವನ್ನು ಮುಂದಿಟ್ಟುಕೊಂಡು ಟಿಕೆಟ್ ಕೇಳಲಾರಂಭಿಸಿದ್ದಾರೆ. ಮತದಾರರ ಗುಂಪು ಕಟ್ಟಿಕೊಂಡು ಜಿಲ್ಲಾ ಕೇಂದ್ರ ಹಾವೇರಿ ಹಾಗೂ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಲವು ಮುಖಂಡರು, ‘ನಮಗೆ ಜನ ಬೆಂಬಲವಿದೆ. ಚುನಾವಣೆಗೆ ಖರ್ಚು ಮಾಡಲು ಸಿದ್ಧರಾಗಿದ್ದೇವೆ. ಟಿಕೆಟ್ ಕೊಡಿ’ ಎಂದು ಹಿರಿಯ ನಾಯಕರಲ್ಲಿ ಕೋರುತ್ತಿದ್ದಾರೆ. ಎಲ್ಲರ ಮನವಿಗಳನ್ನು ಆಲಿಸುತ್ತಿರುವ ಹಿರಿಯ ನಾಯಕರು, ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಸದ್ಯಕ್ಕೆ ರಟ್ಟು ಮಾಡಿಲ್ಲ. ‘ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯೇ ಕಾಂಗ್ರೆಸ್ ಅಭ್ಯರ್ಥಿ’ ಎಂಬುದಾಗಿ ನಾಯಕರು ಹೇಳಿ ಕಳುಹಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿದ್ದ ಯಾಸೀರ್‌ಖಾನ್ ಪಠಾಣ ಸಹ ತಮಗೆ ಟಿಕೆಟ್ ಸಿಗುವುದೆಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಜೊತೆಯಲ್ಲೇ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸಹ ಟಿಕೆಟ್ ಆಕಾಂಕ್ಷಿ ಎಂಬುದಾಗಿ ಹೇಳುತ್ತಿದ್ದಾರೆ.

ಸ್ಥಳೀಯ ಮುಖಂಡ ಸೈಯದ್ ಅಜ್ಜಂಪೀರ ಖಾದ್ರಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದರು. ನಂತರ, ಉಚ್ಛಾಟನೆ ಆದೇಶವನ್ನು ಹಿಂದಕ್ಕೆ ಪಡೆಯಲಾಗಿತ್ತು. ಇವರು ಸಹ ಟಿಕೆಟ್‌ಗಾಗಿ ಇದೀಗ, ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಬಲ ಪ್ರದರ್ಶನಕ್ಕಾಗಿ ಬೆಂಬಲಿಗರ ಜೊತೆ ಸ್ವಾಭಿಮಾನಿ ಪಾದಯಾತ್ರೆಯನ್ನೂ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ವಿನಯ ಅಸೂಟಿ, ‘ನನಗೆ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಸಿಕ್ಕಿವೆ. ವಿಧಾನಸಭೆಗೂ ಅವಕಾಶ ನೀಡಿ’ ಎಂದು ಹಿರಿಯ ನಾಯಕರ ಬಳಿ ಮನವಿ ಮಾಡಿದ್ದಾಗಿ ಗೊತ್ತಾಗಿದೆ. ಇದರ ಜೊತೆಯಲ್ಲೇ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೋಮಣ್ಣ ಬೇವಿನಮರ ಹಾಗೂ ಹುಬ್ಬಳ್ಳಿಯ ರಜತ ಉಳ್ಳಾಗಡ್ಡಿಮಠ ಸಹ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

‘ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಜನರ ಮನಗೆದ್ದಿವೆ. ಹೀಗಾಗಿ, ಉಪ ಚುನಾವಣೆಯಲ್ಲಿ ಅವರ ಮಗ ಭರತ್‌ ಅವರಿಗೆ ಟಿಕೆಟ್ ನೀಡಬೇಕು’ ಎಂದು ಜಿಲ್ಲೆಯ ಹಲವು ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ.

‘ಶಿಗ್ಗಾವಿ–ಸವಣೂರು ಕ್ಷೇತ್ರ, ಬಿಜೆಪಿ ಭದ್ರಕೋಟೆಯಾಗಿದೆ. ಇದನ್ನು ಉಳಿಸಿಕೊಳ್ಳಬೇಕಿದೆ. ಹೀಗಾಗಿ, ಭರತ್ ಸೂಕ್ತ ಅಭ್ಯರ್ಥಿ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಬಸವರಾಜ ಬೊಮ್ಮಾಯಿ ಜೊತೆಯಲ್ಲಿ ಟಿಕೆಟ್‌ಗಾಗಿ ಹಲವರು ಪೈಪೋಟಿ ನಡೆಸಿದ್ದರು. ಸ್ಥಳೀಯ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ ಹಾಗೂ ಶಶಿಧರ ಎಲಿಗಾರ ಸಹ ಪಟ್ಟಿಯಲ್ಲಿದ್ದರು. ಇವರು ಈ ಬಾರಿಯೂ ಟಿಕೆಟ್ ತಮ್ಮದಾಗಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಶಶಿಧರ ಎಲಿಗಾರ ಸೋಲು ಅನುಭವಿಸುತ್ತಿದ್ದರು. ಈ ಬಾರಿ ಅವರು ಬಿಜೆಪಿಯಿಂದ ಸ್ಪರ್ಧಿಸಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚಿನ ಮತಗಳು ಬರುವ ನಿರೀಕ್ಷೆಯೂ ಇದೆ.

‘ಜಾತಿ ಧರ್ಮದ ಲೆಕ್ಕಾಚಾರ’

ಕ್ಷೇತ್ರದಲ್ಲಿ ಜಾತಿ ಹಾಗೂ ಧರ್ಮದ ಲೆಕ್ಕಾಚಾರಗಳೂ ಜೋರಾಗಿವೆ. ಯಾವ ಜಾತಿ ಹಾಗೂ ಯಾವ ಧರ್ಮದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಉತ್ತಮ ಎಂಬುದರ ಬಗ್ಗೆ ರಾಷ್ಟ್ರೀಯ ಪಕ್ಷಗಳ ತೆರೆಮರೆಯಲ್ಲಿ ಸಮೀಕ್ಷೆ ಆರಂಭಿಸಿವೆ. ‘ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಾತಿ ಹಾಗೂ ಧರ್ಮದ ನಾಯಕರಾಗಿದ್ದರು. ಇದೇ ಕಾರಣಕ್ಕೆ ಅವರು ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಜಾತಿ ಹಾಗೂ ಧರ್ಮ ಚುನಾವಣೆಯಲ್ಲಿ ಮಹತ್ವದ ಪತ್ರ ವಹಿಸುವ ಸಾಧ್ಯತೆ ಇದೆ’ ಎಂಬುದು ಮತದಾರರ ಅಭಿಪ್ರಾಯ.

ಕಾಂಗ್ರೆಸ್ ತೆಕ್ಕೆಗೆ ಪಡೆಯಲು ತಂತ್ರ: ಉಸ್ತುವಾರಿ ಸಮಿತಿ

‘ಕ್ಷೇತ್ರವನ್ನು ಹೇಗಾದರೂ ಮಾಡಿ ಈ ಬಾರಿ ತೆಕ್ಕೆಗೆ ತೆಗೆದುಕೊಳ್ಳಬೇಕು’ ಎಂದು ತಯಾರಿ ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಅಗತ್ಯವಿರುವ ತಂತ್ರಗಳನ್ನು ರೂಪಿಸಲು ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿದ್ದಾರೆ. ಸಚಿವರಾದ ಶಿವಾನಂದ ಪಾಟೀಲ ಸಂತೋಷ ಲಾಡ್ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಶಾಸಕ ಪ್ರಸಾದ್ ಅಬ್ಬಯ್ಯ ಸಂಜೀವಕುಮಾರ ನೀರಲಗಿ ಆನಂದ ಗಡ್ಡದೇವರಮಠ ಸಮಿತಿಯಲ್ಲಿದ್ದಾರೆ. ಜೊತೆಗೆ ಜಿಲ್ಲೆಯ ಶಾಸಕರ ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪಡೆಯುವಂತೆಯೂ ಸೂಚಿಸಿದ್ದಾರೆ.

ಕಣಕ್ಕೆ ಸ್ವಾಮೀಜಿ ?

ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವೇಶ್ವರ ಸ್ವಾಮೀಜಿ ಸಹ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿರುವ ಅವರು ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ ಟಿಕೆಟ್ ಖಾತರಿಯಾಗಿಲ್ಲ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಸ್ವಾಮೀಜಿಯ ಮುಂದಿನ ನಡೆ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿಯೂ ಸ್ವಾಮೀಜಿ ಕಣಕ್ಕೆ ಇಳಿಯುವ ಲಕ್ಷಣಗಳು ಇವೆ ಎಂಬುದಾಗಿ ಆಪ್ತರು ಹೇಳುತ್ತಿದ್ದಾರೆ. ಇದರ ನಡುವೆಯೇ ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಸಹ ಶಿಗ್ಗಾವಿ–ಸವಣೂರು ಕ್ಷೇತ್ರದ ಅಭ್ಯರ್ಥಿ ಎಂಬುದಾಗಿ ಈಗಾಗಲೇ ಘೋಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.