ADVERTISEMENT

ಶಿಗ್ಗಾವಿ– ಸವಣೂರು ಉಪ ಚುನಾವಣೆ: ಆಕಾಂಕ್ಷಿಗಳ ಪೈಪೋಟಿ ಶುರು

ಬಹುಸಂಖ್ಯಾತರಿಗೆ ಮಣೆ ಸಾಧ್ಯತೆ

ಸಂತೋಷ ಜಿಗಳಿಕೊಪ್ಪ
Published 16 ಅಕ್ಟೋಬರ್ 2024, 5:15 IST
Last Updated 16 ಅಕ್ಟೋಬರ್ 2024, 5:15 IST
   

ಹಾವೇರಿ: ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳ ಮುಖಂಡರು ಅಭ್ಯರ್ಥಿಗಳಾಗಲು ಪೈಪೋಟಿ ಶುರುವಾಗಿದೆ. ಕೆಲವರು ಬಂಡಾಯದ ಬಾವುಟ ಹಾರಿಸಲು ತಯಾರಿ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ಎರಡು ತಿಂಗಳಿನಿಂದ ತಯಾರಿ ನಡೆಸುತ್ತಿದ್ದ ಕೇಂದ್ರ ಚುನಾವಣಾ ಆಯೋಗ, ಜಿಲ್ಲಾಡಳಿತ ಅಧಿಕಾರಿಗಳ ಮೂಲಕ ಮತದಾರರ ಪರಿಷ್ಕರಣೆ ಹಾಗೂ ಇತರೆ ಕೆಲಸಗಳನ್ನು ಕೈಗೊಂಡಿತ್ತು. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಆಯೋಗ, ಚುನಾವಣೆ ದಿನಾಂಕ ಘೋಷಿಸಿದೆ.

ಬೊಮ್ಮಾಯಿ ಅವರು ಕೇಂದ್ರ ರಾಜಕಾರಣಕ್ಕೆ ಪ್ರವೇಶಿಸಿದ ಬಳಿಕ ಅಂದಿನಿಂದಲೇ ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಇತರೆ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದವು.

ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ (ಬಿಜೆಪಿಗಿಂತ 8,500 ಮತಗಳ ಅಂತರ) ಸಿಕ್ಕಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸುವ ಲೆಕ್ಕಚಾರ ಮುಖಂಡರದ್ದು. ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಉಸ್ತುವಾರಿ ಸಮಿತಿ ಸದಸ್ಯರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಮಯೂರ್ ಎಸ್. ಜಯಕುಮಾರ್, ಶಿಗ್ಗಾವಿಗೆ ಬಂದು ಆಕಾಂಕ್ಷಿಗಳಿಂದ ಅರ್ಜಿ ಪಡೆದುಕೊಂಡಿದ್ದರು. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಾಗಲು ಪೈಪೋಟಿ ಹೆಚ್ಚಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇತ್ತೀಚೆಗೆ ಹುಬ್ಬಳ್ಳಿಗೆ ಬಂದಿದ್ದಾಗ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಸಭೆ ನಡೆಸಿದ್ದರು. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರ ಪರ ಕೆಲಸ ಮಾಡುವಂತೆ ಎಲ್ಲ ಮುಖಂಡರಿಗೆ ತಾಕೀತು ಮಾಡಿದ್ದಾರೆ.

ಚುನಾವಣೆ ಎದುರಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ಕಾರ್ಯಕರ್ತರು ಸಂಘಟಿತರಾಗಿ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಮತದಾರರ ಒಲುವು ಕಾಂಗ್ರೆಸ್ ಪರವಿದೆ. ವಾರದೊಳಗೆ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ.
ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಸಾಧ್ಯತೆ:

ಬಿಜೆಪಿ ಪಕ್ಷದಿಂದ ಈಚೆಗೆ ಶಿಗ್ಗಾವಿಯಲ್ಲಿ ಬೃಹತ್ ಸಭೆ ನಡೆದಿತ್ತು. 50ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಶೇ 60ರಷ್ಟು ಆಕಾಂಕ್ಷಿಗಳು, ‘ಟಿಕೆಟ್ ಕೊಟ್ಟರೆ ನಮಗೆ ಕೊಡಿ. ಇಲ್ಲದಿದ್ದರೆ, ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಅವರಿಗೆ ಕೊಡಿ’ ಎಂದು ನೇರವಾಗಿಯೇ ಹೇಳಿದ್ದಾರೆ.

ಶೇ 40ರಷ್ಟು ಮಂದಿ, ‘ಕುಟುಂಬ ರಾಜಕಾರಣ ಬೇಡ. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿ’ ಎಂದು ಮುಖಂಡರಿಗೆ ತಿಳಿಸಿದ್ದಾರೆ. ಬಿಜೆಪಿ ಮುಖಂಡರ ನಡುವೆ ಚರ್ಚೆಗಳು ಜೋರಾಗಿದ್ದು, ಅಂತಿಮವಾಗಿ ಭರತ್ ಬೊಮ್ಮಾಯಿ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಬಹುಸಂಖ್ಯಾತರಿಗೆ ಮಣೆ:

ಸಂತರ ನಾಡು ಎಂದೇ ಖ್ಯಾತಿ ಹೊಂದಿರುವ ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗುತ್ತಿದ್ದರು. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಿಲ್ಲುತ್ತಿದ್ದ ಮುಸ್ಲಿಂ ಅಭ್ಯರ್ಥಿಗಳು ಸೋಲು ಕಂಡಿದ್ದರು.

ಪದೇ ಪದೇ ಸೋಲು ಅನುಭವಿಸಿರುವ ಕಾಂಗ್ರೆಸ್‌ಗೆ ಈ ಬಾರಿ ಮುಸ್ಲಿಂ ಹಾಗೂ ಇತರೆ ಸಮುದಾಯಗಳ ಮತಗಳು ಸಿಗುವುದು ಖಾತ್ರಿಯಾಗಿದೆ. ಆದರೆ, ಹಿಂದೂಗಳಲ್ಲಿ ಪ್ರಬಲ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯವೆಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ.

ಸಾಲು ಸಾಲು ಸಮಸ್ಯೆ:

ಕ್ಷೇತ್ರದಲ್ಲಿ ಸಾಲು ಸಾಲು ಸಮಸ್ಯೆಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂಬುದನ್ನೇ ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿಯಲು ಕೆಲವರು ಸಜ್ಜಾಗಿದ್ದಾರೆ. ಇದಕ್ಕಾಗಿ ಗ್ರಾಮ ಹಾಗೂ ಪಟ್ಟಣಗಳಲ್ಲಿ ಸಭೆ ನಡೆಸುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಿನಿಂದ ಉಪ ಚುನಾವಣೆಗೆ ತಯಾರಿ ಶುರುವಾಗಿದೆ. ಶೀಘ್ರದಲ್ಲಿಯೇ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ. ಈ ಬಾರಿಯೂ ಕ್ಷೇತ್ರದಲ್ಲಿ ಕಮಲ ಅರಳಲಿದೆ.
ಅರುಣಕುಮಾರ ಪೂಜಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಲ್ಲೂಕು ಆಸ್ಪತ್ರೆ ಕಟ್ಟಡ ಉದ್ಘಾಟನೆಯಾಗಿಲ್ಲ. ಕ್ಷೇತ್ರದ ರಸ್ತೆಗಳು ಹಾಳಾಗಿದ್ದು, ಡಾಂಬರ್ ಕಂಡಿಲ್ಲ. ಬಸ್‌ ನಿಲ್ದಾಣದಲ್ಲಿ ನಿರ್ವಹಣೆ ಇಲ್ಲ. ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟಿನ್ ಸಹ ಆರಂಭವಾಗಿಲ್ಲ. ಇಂಥ ಹಲವು ಸಮಸ್ಯೆಗಳನ್ನು ಈಡೇರಿಸದ ಜನಪ್ರತಿನಿಧಿಗಳ ಬಗ್ಗೆ ಮತದಾರರಲ್ಲಿ ಅಸಮಾಧಾನವಿದೆ.

ಕೆಆರ್‌ಎಸ್ ಪಕ್ಷದಿಂದ ಈ ಬಾರಿ ರವಿಕೃಷ್ಣಾ ರೆಡ್ಡಿ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಇವರ ತಂಡ ಸಹ ಕ್ಷೇತ್ರದಲ್ಲಿ ಸಂಚರಿಸಿ, ಜನಪ್ರತಿನಿಧಿಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಜನರಿಗೆ ತೋರಿಸಿ ಮತಯಾಚನೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.