ADVERTISEMENT

ಶಿಗ್ಗಾವಿ ಉಪಚುನಾವಣೆ: ‘ಕೈ’ ಅಭ್ಯರ್ಥಿ ಗೆಲ್ಲಿಸಲು ಪಣ

ಮುಖ್ಯಮಂತ್ರಿ– ಉಪಮುಖ್ಯಮಂತ್ರಿ ಸೂಚನೆಯಂತೆ 9 ಸಚಿವರು, 23 ಶಾಸಕರು ಮೊಕ್ಕಾಂ

ಸಂತೋಷ ಜಿಗಳಿಕೊಪ್ಪ
Published 27 ಅಕ್ಟೋಬರ್ 2024, 2:00 IST
Last Updated 27 ಅಕ್ಟೋಬರ್ 2024, 2:00 IST
<div class="paragraphs"><p>ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಸಚಿವ ಜಾರಕಿಹೊಳಿ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು</p></div>

ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಸಚಿವ ಜಾರಕಿಹೊಳಿ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು

   

ಶಿಗ್ಗಾವಿ (ಹಾವೇರಿ ಜಿಲ್ಲೆ): 20 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಗೆಲ್ಲಿಸಲು ಪಣ ತೊಟ್ಟಿರುವ ಕಾಂಗ್ರೆಸ್ ಹೈಕಮಾಂಡ್, ಚುನಾವಣೆ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿಗೊಬ್ಬ ಸಚಿವರನ್ನು ನೇಮಕ ಮಾಡಿ, ಜವಾಬ್ದಾರಿ ವಹಿಸಿದೆ.

ಶಿಗ್ಗಾವಿ ಕ್ಷೇತ್ರದಲ್ಲಿ 6 ಜಿಲ್ಲಾ ಪಂಚಾಯಿತಿ‌ ಕ್ಷೇತ್ರಗಳು, 23 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಹಾಗೂ 3 ಪುರಸಭೆಗಳಿವೆ. ಪ್ರತಿ ಕ್ಷೇತ್ರದಲ್ಲೂ ಮತದಾರರನ್ನು ನೇರ ಭೇಟಿಯಾಗಿ ಮತಯಾಚಿಸುವಂತೆ ಸಚಿವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.

ADVERTISEMENT

‘ಶಿಗ್ಗಾವಿ ತಾಲ್ಲೂಕಿನಲ್ಲಿ ತಡಸ, ದುಂಡಶಿ, ಕುಂದೂರು ಮತ್ತು ಹುಲಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಾಗಿವೆ. ಸವಣೂರು ತಾಲ್ಲೂಕಿನಲ್ಲಿ ಕಾರಡಗಿ ಹಾಗೂ ಹುರುಳಿಕುಪ್ಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಇದರ ಜೊತೆಗೆ, ಬಂಕಾಪುರ, ಶಿಗ್ಗಾವಿ ಹಾಗೂ ಸವಣೂರು ಪುರಸಭೆಗಳಾಗಿವೆ. ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತು ಪುರಸಭೆಗೊಬ್ಬ ಸಚಿವರನ್ನು ನೇಮಿಸಿ, ಚುನಾವಣೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿಗೊಬ್ಬ ಶಾಸಕ: ಶಿಗ್ಗಾವಿ ತಾಲ್ಲೂಕಿನಲ್ಲಿ 14 ಹಾಗೂ ಸವಣೂರು ತಾಲ್ಲೂಕಿನಲ್ಲಿ 9 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿವೆ. ತಾಲ್ಲೂಕು ಪಂಚಾಯಿತಿಗೊಬ್ಬ ಶಾಸಕರನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ಅವರ ಸೂಚನೆಯಂತೆ ರಾಜ್ಯ ಸರ್ಕಾರದ 9 ಸಚಿವರು ಹಾಗೂ 23 ಶಾಸಕರು, ಶಿಗ್ಗಾವಿ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ.

ರೌಡಿಶೀಟರ್‌ಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ ಎಂದು ಕಾಂಗ್ರೆಸ್‌ನವರೇ ಆರೋಪಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟೀಕರಣ ನೀಡಬೇಕು
ಬಸವರಾಜ ಬೊಮ್ಮಾಯಿ ಸಂಸದ
ಚುನಾವಣೆಯ ಜವಾಬ್ದಾರಿಗಳನ್ನು ಕಾರ್ಯಕರ್ತರಿಗೆ ವಹಿಸಿದ್ದೇವೆ. ಕಾಂಗ್ರೆಸ್ ಗೆಲುವು ಕಾರ್ಯಕರ್ತರನ್ನು ಅವಲಂಬಿಸಿದೆ. ಸಿ.ಎಂ ಡಿಸಿಎಂ ಪ್ರಚಾರ ನಡೆಸುವರು.
ಸತೀಶ ಜಾರಕಿಹೊಳಿ, ಸಚಿವ

ಕಾಂಗ್ರೆಸ್‌ ಬಂಡಾಯ ಶಮನ: ಖಾದ್ರಿ ಮನವೊಲಿಕೆ

ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜೊತೆ ಮಾತುಕತೆ ನಡೆಸಿದ ಬಳಿಕ ನಾಮಪತ್ರ ಹಿಂಪಡೆಯಲು ಒಪ್ಪಿದ್ದಾರೆ.

ಖಾದ್ರಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಶನಿವಾರ ಭೇಟಿ ಮಾಡಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಜ್ಜಂಪೀರ್ ಖಾದ್ರಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಇದೇ 30ರಂದು ತಮ್ಮ ನಾಮಪತ್ರವನ್ನು ಖಾದ್ರಿ ಹಿಂಪಡೆಯಲಿದ್ದಾರೆ. ಅವರ ಅರ್ಹತೆಗೆ ತಕ್ಕಂತೆ ಪಕ್ಷವು ಅಧಿಕಾರ ನೀಡಲಿದೆ’ ಎಂದರು.

‘ಖಾದ್ರಿ ತಮ್ಮ ನೋವು ಹೇಳಿಕೊಂಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಅವರಿಗೆ ನೀಡಿರುವ ಭರವಸೆಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಖಾದ್ರಿ ಅವರ ಬಳಿ ಗೌಪ್ಯವಾಗಿ ಮಾತನಾಡಿದ್ದೇನೆ’ ಎಂದರು.

ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ: ಅಜ್ಜಂಪೀರ್ ಖಾದ್ರಿ ಮಾತನಾಡಿ, ‘ಈ ಬಾರಿ ಟಿಕೆಟ್ ನೀಡಿದರೆ ನಾನೇ ಗೆಲ್ಲುತ್ತೇನೆ, ಟಿಕೆಟ್ ಕೊಡಿ ಎಂದು ನಾಯಕರ ಬಳಿ ಮತ್ತೊಮ್ಮೆ ಮನವಿ ಮಾಡಿದೆ. ಇದು ನಮ್ಮ ತೀರ್ಮಾನವಲ್ಲ, ಹೈಕಮಾಂಡ್ ತೀರ್ಮಾನ ಎಂದರು. ನಾನು ಪಕ್ಷದ ತೀರ್ಮಾನವನ್ನು ಕ್ಷೇತ್ರದ ಕಾರ್ಯಕರ್ತರ ಬಳಿಗೆ ತೆಗೆದುಕೊಂಡು ಹೋಗುತ್ತೇನೆ. ಅವರ ಬಳಿ ಚರ್ಚಿಸುತ್ತೇನೆ. ಕಾರ್ಯಕರ್ತರಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭಾನುವಾರ (ಅ. 27)  ಭೇಟಿ ಮಾಡಿಸಿ, ನಾಯಕರ ಆದೇಶ ಪಾಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.