ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹ್ಮದ್ ಖಾನ್ ಪಠಾಣ ವಿರುದ್ಧ 17 ಪ್ರಕರಣಗಳಿವೆ. ಪೈಲ್ವಾನ್ ಪಠಾಣನನ್ನು ಚುನಾವಣೆಗೆ ನಿಲ್ಲಿಸಿರುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಇದು ಜನರ ಪ್ರಜಾಪ್ರಭುತ್ವದ ಚುನಾವಣೆ. ಕುಸ್ತಿ ಕಣವಲ್ಲ. ನಾವೇನು ಪಠಾಣ ಜೊತೆ ಕುಸ್ತಿ ಹಿಡಿಯಬೇಕಾ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಶುಕ್ರವಾರ ಪ್ರಚಾರ ನಡೆಸಿದ ಅವರು, ‘ಹಿಂದೂಗಳೆಲ್ಲ ಒಗ್ಗಟ್ಟಾಗಬೇಕು. ಜಾತಿ ಆಧಾರದಲ್ಲಿ ಬೇರೆ ಬೇರೆಯಾದರೆ, ನಿಮ್ಮೆಲ್ಲರ ಆಸ್ತಿ ಮುಂದೆ ವಕ್ಫ್‌ಗೆ ಸೇರುತ್ತದೆ. ಈ ಸಲ ಬಿಜೆಪಿಗೆ ಮತ ನೀಡಿ, ವಕ್ಫ್ ಆಸ್ತಿ ಮಾಡಲು ಹೊರಟ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಿ’ ಎಂದರು.
‘ಕಾಂಗ್ರೆಸ್‌ನಲ್ಲಿ ಒಳ್ಳೆಯ ಮುಸ್ಲಿಂರಿಗೂ ಅವಕಾಶವಿಲ್ಲ. ನಾನು ಮುಸ್ಲಿಂರ ವಿರುದ್ದ ಮಾತನಾಡುತ್ತೇನೆ ಎಂದು ಪ್ರಕರಣ ದಾಖಲಿಸುತ್ತಾರೆ. ಪ್ರತಾಪ್ ಸಿಂಹ, ಸಿ.ಟಿ. ರವಿ, ಸೂಲಿಬೆಲೆ ಅವರ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಈಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದರು.
‘ಸಚಿವ ಜಮೀರ್ ಅಹ್ಮದ್ ಖಾನ್, ಮುಸ್ಲಿಂರನ್ನೂ ದಿಕ್ಕು ತಪ್ಪಿಸಿ ವಕ್ಫ್ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ, ಈಗಲೇ ಹಿಂದೂಗಳ ಎಲ್ಲ ಆಸ್ತಿಯನ್ನು ವಕ್ಪ್ ಆಸ್ತಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಜಾತ್ರೆ ಮಾಡಲು ಬಂದ ಮಂತ್ರಿಗಳು ಶಾಸಕರು
’ ಶಿಗ್ಗಾವಿ: ‘ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಜನರು ಹೇಳುತ್ತಾರೆ. ಇಂದು ಪ್ರಚಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ನಾನು ಮಾಡಿರುವ ರಸ್ತೆಯಲ್ಲಿಯೇ ಓಡಾಡುತ್ತಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ‘ನಾಲ್ಕು ದಿನದ ಜಾತ್ರೆ ಮಾಡಲು ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಶಾಸಕರು ಕ್ಷೇತ್ರಕ್ಕೆ ಬಂದಿದ್ದಾರೆ’ ಎಂದು ಆರೋಪಿಸಿದರು. ‘ಬೊಮ್ಮಾಯಿ ಅಭಿವೃದ್ಧಿ ಮಾಡಿಲ್ಲವೆಂದು ಹೇಳುವ ಮಂತ್ರಿಗಳು–ಶಾಸಕರು ತಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ‘ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಶಿಗ್ಗಾವಿಗೆ ಹೋಗಿ ಏನು ಮಾಡುತ್ತಿದ್ದೀರಾ?’ ಎಂದು ಅವರ ಮತದಾರರು ಕೇಳುತ್ತಿದ್ದಾರೆ. ಕ್ಷೇತ್ರದ ಬಗ್ಗೆ ದೂರುವ ಬದಲು ಮೊದಲು ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೀರಾ? ಎಂಬುದನ್ನು ಹೇಳಿ’ ಎಂದು ಸವಾಲು ಹಾಕಿದರು. ‘ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಶಿಗ್ಗಾವಿ ಕ್ಷೇತ್ರದಲ್ಲಿ ಒಂದೂ ಮನೆ ಕಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಎನ್.ಎಂ. ತಡಸವೆಂಬ ಒಂದೇ ಗ್ರಾಮದಲ್ಲಿ 168 ಮನೆ ಕಟ್ಟಿಸಿದ್ದೇನೆ. ಜಮೀರ್ ಸಚಿವರಾದ ನಂತರ ಕ್ಷೇತ್ರದಲ್ಲಿ 18 ಮನೆ ಮಾತ್ರ ಕಟ್ಟಿದ್ದಾರೆ. ಅದು ಸಹ ನನ್ನ ಅವಧಿಯಲ್ಲಿ ಮಂಜೂರಾದ ಮನೆಗಳು’ ಎಂದು ಬೊಮ್ಮಾಯಿ ಹೇಳಿದರು. ಗೃಹಪೂಜೆಯಲ್ಲಿ ಭಾಗಿ: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ₹ 5 ಲಕ್ಷ ಮೊತ್ತದಲ್ಲಿ ನಿರ್ಮಿಸಲಾದ ಶಿಗ್ಗಾವಿ ಕ್ಷೇತ್ರದ ತಿಮ್ಮಾಪುರದಲ್ಲಿರುವ ಮನೆಯ ಗೃಹಪೂಜೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಪಾಲ್ಗೊಂಡರು. ಫಲಾನುಭವಿ ಮಲ್ಲೇಶಪ್ಪ ದುರಪ್ಪನವರ ಅವರಿಗೆ ಮನೆ ಮಂಜೂರಾಗಿತ್ತು. ಬೊಮ್ಮಾಯಿ ಅವಧಿಯಲ್ಲಿ ನೀಡಿದ್ದ ಹಣದಲ್ಲಿ ಅವರು ಮನೆ ನಿರ್ಮಿಸಿಕೊಂಡಿದ್ದಾರೆ. ಗೃಹಪ್ರವೇಶಕ್ಕೆ ಬರುವಂತೆ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದರು. ಪ್ರಚಾರದ ನಡುವೆಯೇ ಮಲ್ಲೇಶಪ್ಪ ಮನೆಗೆ ಭೇಟಿ ನೀಡಿದ ಬೊಮ್ಮಾಯಿ ಅವರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.