ADVERTISEMENT

ಶಿಗ್ಗಾವಿ ಉಪಚುನಾವಣೆ: ಊರು ಬಿಟ್ಟವರ ಕರೆತರಲು ಪೈಪೋಟಿ

ಶಿಗ್ಗಾವಿ ಉಪಚುನಾವಣೆ: ದೀಪಾವಳಿ ನೆಪದಲ್ಲಿ ವಾಹನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 19:12 IST
Last Updated 30 ಅಕ್ಟೋಬರ್ 2024, 19:12 IST
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಸೈಯದ್ ಅಜ್ಜಂಪೀರ ಖಾದ್ರಿ ಅವರು ಬುಧವಾರ ನಾಮಪತ್ರ ಹಿಂಪಡೆದ ನಂತರ ಕಾಂಗ್ರೆಸ್ ಮುಖಂಡರು ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. ಕಾಂಗ್ರೆಸ್ ಅಭ್ಯರ್ಥಿ ಯಾಸೀರಅಹ್ಮದ್ ಖಾನ್ ಪಠಾಣ, ಸಚಿವ ಜಮೀರ್ ಅಹ್ಮದ್ ಖಾನ್ ಇದ್ದಾರೆ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಸೈಯದ್ ಅಜ್ಜಂಪೀರ ಖಾದ್ರಿ ಅವರು ಬುಧವಾರ ನಾಮಪತ್ರ ಹಿಂಪಡೆದ ನಂತರ ಕಾಂಗ್ರೆಸ್ ಮುಖಂಡರು ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. ಕಾಂಗ್ರೆಸ್ ಅಭ್ಯರ್ಥಿ ಯಾಸೀರಅಹ್ಮದ್ ಖಾನ್ ಪಠಾಣ, ಸಚಿವ ಜಮೀರ್ ಅಹ್ಮದ್ ಖಾನ್ ಇದ್ದಾರೆ   

ಶಿಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಜಿದ್ದಾಜಿದ್ದಿ ಸ್ಪರ್ಧೆಯಿದ್ದು, ಕೆಲಸ ಅರಸಿ ಊರು ಬಿಟ್ಟಿರುವ ಮತದಾರರನ್ನು ಕ್ಷೇತ್ರಕ್ಕೆ ವಾಪಸು ಕರೆತರಲು ತೀವ್ರ ಪೈಪೋಟಿ ಏರ್ಪಟ್ಟಿದೆ.

ಶಿಗ್ಗಾವಿ ಮತ್ತು ಸವಣೂರು ತಾಲ್ಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ ಹೆಚ್ಚಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ಹಲವರಿಗೆ ಜಮೀನಿಲ್ಲ. ಕ್ಷೇತ್ರದಲ್ಲಿ ಉದ್ಯೋಗಗಳ ಸಂಖ್ಯೆಯೂ ಕಡಿಮೆಯಿದೆ. ಇದೇ ಕಾರಣಕ್ಕೆ, ಕ್ಷೇತ್ರದ ಜನರು ಕೆಲಸ ಅರಸಿ ಮಂಗಳೂರು, ಗೋವಾ, ಬೆಂಗಳೂರು, ಮುಂಬೈಗಳಿಗೆ ವಲಸೆ ಹೋಗಿದ್ದಾರೆ.

ಈಗಿನ ಉಪಚುನಾವಣೆಯಲ್ಲಿ  ಪ್ರತಿಯೊಂದು ಮತವೂ ಮಹತ್ವದ್ದೆಂದು ಅಭ್ಯರ್ಥಿಗಳಿಗೆ ಹೇಳುತ್ತಿರುವ ಪಕ್ಷಗಳ ನಾಯಕರು, ಎಲ್ಲ ಮತದಾರರನ್ನು ಖುದ್ದಾಗಿ ಭೇಟಿಯಾಗಿ ಮತಯಾಚನೆ ಮಾಡುವಂತೆ ಸೂಚಿಸುತ್ತಿದ್ದಾರೆ. ಇದೇ ಕಾರಣಕ್ಕೆ, ಗ್ರಾಮೀಣ ಪ್ರದೇಶದಲ್ಲೂ ಪ್ರಚಾರ ಈಗಾಗಲೇ ಶುರುವಾಗಿದೆ.

ADVERTISEMENT

ಕ್ಷೇತ್ರದಲ್ಲಿರುವ ಮತಗಟ್ಟೆವಾರು ಮತದಾರರ ಪಟ್ಟಿ ಪರಿಶೀಲನೆ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ವಲಸೆ ಹೋಗಿರುವ ಮತದಾರರ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದಾರೆ. ಯಾವ ಊರಿನಲ್ಲಿ ಎಷ್ಟು ಜನರಿದ್ದಾರೆ ? ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ವಲಸೆ ಮತದಾರರನ್ನು ಸಂಪರ್ಕಿಸಿ ಕ್ಷೇತ್ರಕ್ಕೆ ವಾಪಸು ಕರೆತಂದು ಮತ ಹಾಕಿಸುವ ಜವಾಬ್ದಾರಿಯನ್ನು ಬೂತ್‌ ಮಟ್ಟದ ಕಾರ್ಯಕರ್ತರಿಗೆ ನೀಡಲಾಗಿದೆ.

‘ನಮ್ಮ ಮತಗಟ್ಟೆ ವ್ಯಾಪ್ತಿಯ 54 ಮಂದಿ ಗೋವಾಗೆ ದುಡಿಯಲು ಹೋಗಿದ್ದಾರೆ. ಅವರ ಹೆಸರು ನಮ್ಮ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದೆ. 54 ಜನರ ಪೈಕಿ 48 ಮಂದಿಯನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಅವರನ್ನು ಕ್ಷೇತ್ರಕ್ಕೆ ವಾಪಸು ಕರೆತರುವ ಕೆಲಸವೂ ಪ್ರಗತಿಯಲ್ಲಿದೆ’ ಎಂದು ಪಕ್ಷದ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದೀಪಾವಳಿ ಹಬ್ಬದ ನೆಪ:

‘ದೀಪಾವಳಿ ಹಬ್ಬಕ್ಕೆ ಬರಲು ನಿಮಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ವಾಹನ ಬೇಡವೆಂದರೆ, ಬಸ್ ಪ್ರಯಾಣ ಶುಲ್ಕವನ್ನು ನೀಡಲಾಗುವುದು. ಎಲ್ಲರೂ ಸುರಕ್ಷಿತವಾಗಿ ಕ್ಷೇತ್ರಕ್ಕೆ ಬರಬೇಕು. ಜೊತೆಗೆ, ಕ್ಷೇತ್ರಕ್ಕೆ ಬಂದ ನಂತರ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು’ ಎಂದು ‍ಪಕ್ಷಗಳ ಕಾರ್ಯಕರ್ತರು ವಲಸೆ ಮತದಾರರಿಗೆ ಭರವಸೆ ನೀಡಿದ್ದಾರೆ.

ದೀಪಾವಳಿ ಹಬ್ಬದ ಮುನ್ನಾದಿನವಾದ ಬುಧವಾರ, ವಲಸೆ ಕಾರ್ಮಿಕರನ್ನು ಕರೆತರಲು ಬೆಂಗಳೂರು, ಮಂಗಳೂರಿನಿಂದ ವಾಹನ ವ್ಯವಸ್ಥೆ ಮಾಡಿದ ಮಾಹಿತಿ ಇದೆ. ಗೋವಾದಿಂದ ಬರಲು ಕೆಲ ಮತದಾರರಿಗೆ, ವ್ಯವಸ್ಥೆ ಮಾಡಲಾಗಿದೆ.

ಶಿಗ್ಗಾವಿ ಕ್ಷೇತ್ರದ ಅಲ್ಲಿಪುರ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಬುಧವಾರ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು

ನಾಮಪತ್ರ ಹಿಂಪಡೆದ ಖಾದ್ರಿ: ಒಗ್ಗಟ್ಟು ಪ್ರದರ್ಶನ

ಶಿಗ್ಗಾವಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರವನ್ನು ಬುಧವಾರ ಹಿಂಪಡೆದರು. ಇದರ ಬೆನ್ನಲ್ಲೇ ಕಾರ್ಯಕ್ರಮ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು ಯಾಸೀರ್ ಹಾಗೂ ಖಾದ್ರಿ ಅವರ ಕೈಗಳನ್ನು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. ಬೆಂಗಳೂರಿನಿಂದ ಮಂಗಳವಾರ ರಾತ್ರಿಯೇ ಖಾದ್ರಿ ಅವರು ಹುಬ್ಬಳ್ಳಿಗೆ ಬಂದಿದ್ದರು. ಸಚಿವರಾದ ಜಮೀರ್ ಅಹಮದ್ ಮತ್ತು ಶಿವಾನಂದ ಪಾಟೀಲ ಜೊತೆಯಲ್ಲಿ ಹುಬ್ಬಳ್ಳಿಯಲ್ಲಿ ಉಳಿದಿದ್ದರು.  ಬುಧವಾರ ಬೆಳಿಗ್ಗೆ ನೇರವಾಗಿ ಶಿಗ್ಗಾವಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಹಿಂಪಡೆದರು. ಈ ಸಂದರ್ಭದಲ್ಲಿ ಖಾದ್ರಿ ಮಾತನಾಡಿ ‘ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಜನಪರವಾಗಿವೆ. ಸಿದ್ದರಾಮಯ್ಯ ಅವರ ಶಿಷ್ಯ ನಾನು. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ’ ಎಂದರು. ಖಾದ್ರಿ ಕ್ಷೇತ್ರಕ್ಕೆ ಬರುವ ಮಾಹಿತಿ ತಿಳಿದಿದ್ದ ಬೆಂಬಲಿಗರು ತಡಸ ವೃತ್ತದಲ್ಲಿ ಸೇರಿದ್ದರು. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯದಂತೆ ಘೋಷಣೆ ಕೂಗಿದ್ದರು. ಆದರೆ ಪೊಲೀಸರ ಭದ್ರತೆಯಲ್ಲಿ ಖಾದ್ರಿ ಅವರು ತಡಸ ವೃತ್ತ ದಾಟಿ ಶಿಗ್ಗಾವಿ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.