ಶಿಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ–ಕಾಂಗ್ರೆಸ್ ನೇರ ಹಣಾಹಣಿಯಿದೆ. ಕಾಂಗ್ರೆಸ್‌ನಿಂದ ಯಾಸೀರ್ ಅಹಮದ್ ಖಾನ್ ಪಠಾಣ ಮತ್ತು ಬಿಜೆಪಿಯಿಂದ ಭರತ್ ಬೊಮ್ಮಾಯಿ ಕಣದಲ್ಲಿದ್ದಾರೆ. ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಬಸವರಾಜ ಬೊಮ್ಮಾಯಿ ಕಸರತ್ತು ನಡೆಸಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿಯಾದರೂ ಹಿಡಿತ ಸಾಧಿಸಲು ಕಾಂಗ್ರೆಸ್, ತೀವ್ರ ಪೈಪೋಟಿ ಒಡ್ಡುತ್ತಿದೆ.
ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕು ವ್ಯಾಪ್ತಿಯುಳ್ಳ ಈ ಕ್ಷೇತ್ರ, ಭಾವೈಕ್ಯ ಹಾಗೂ ಸೌಹಾರ್ದಕ್ಕೆ ಹೆಸರಾಗಿದೆ. ಜನಸಂಖ್ಯೆಯಲ್ಲಿ ಲಿಂಗಾಯತರು ಮೊದಲ ಸ್ಥಾನದಲ್ಲಿದ್ದರೆ, ಅಲ್ಪಸಂಖ್ಯಾತರು ಎರಡನೇ ಸ್ಥಾನದಲ್ಲಿದ್ದಾರೆ. ಕುರುಬರು, ಪರಿಶಿಷ್ಟ ಪಂಗಡ–ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯದವರು ನಂತರದ ಸ್ಥಾನದಲ್ಲಿದ್ದಾರೆ.
2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರು ‘ಸರ್ವಜನಾಂಗದ ಅಭಿವೃದ್ಧಿಗೆ ಬದ್ಧ’ ಎಂದು ಶಪಥ ಮಾಡಿ ನಾಲ್ಕು ಅವಧಿಯೂ ವಿಧಾನಸೌಧ ಪ್ರವೇಶಿಸಿದರು. ಅವರು ಸಂಸದರಾಗಿದ್ದರಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ. ಈಗ ಅವರ ಮಗ ಭರತ್ ಬೊಮ್ಮಾಯಿ ಅವರು ಟೊಂಕಕಟ್ಟಿ ನಿಂತಿದ್ದಾರೆ.
‘ನಮ್ಮದು ಸಾಮಾಜಿಕ ನ್ಯಾಯದ ಪಕ್ಷ’ ಎನ್ನುವ ಕಾಂಗ್ರೆಸ್, ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಅಲ್ಪಸಂಖ್ಯಾತ ಸಮಯದಾಯದ ಯಾಸೀರ್ ಅಹಮದ್ ಖಾನ್ ಪಠಾಣ ಅವರಿಗೆ ಎರಡನೇ ಬಾರಿ ಟಿಕೆಟ್ ನೀಡಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬೊಮ್ಮಾಯಿ ವಿರುದ್ಧ ಸೋತಿದ್ದ ಪಠಾಣ ಅವರಿಗೆ ಎರಡನೇ ಬಾರಿಗೆ ಟಿಕೆಟ್ ಸಿಕ್ಕಿದೆ. ಅವರ ಗೆಲುವಿಗೆ ಸಚಿವರು, ಶಾಸಕರು ಶ್ರಮಿಸುತ್ತಿದ್ದಾರೆ. ‘ಪೈಲ್ವಾನ್ ಪಠಾಣ’ ಎಂದು ಪ್ರಚಾರ ಮಾಡುತ್ತಿದ್ದಾರೆ.
‘ತಂದೆಯ ಕೆಲಸ ನೋಡಿ, ಮತ ನೀಡಿ’ ಎಂದು ಭರತ್ ಬೊಮ್ಮಾಯಿ ಪ್ರಚಾರ ಮಾಡಿದರೆ, ‘ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸ, ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ ಮುಖ ನೋಡಿ ಮತ ಹಾಕಿ’ ಎಂದು ಯಾಸೀರ್ ಅಹಮದ್ ಪಠಾಣ ಮತ ಯಾಚಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತಮ್ಮದಾಗಿಸಿಕೊಳ್ಳುವುದು ಸಂಸದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆಯಾಗಿದೆ.
ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂಬುದು ಹೇಳುವುದು ಸುಲಭವಲ್ಲ. ಪಕ್ಷಕ್ಕಿಂತ ಬಸವರಾಜ ಬೊಮ್ಮಾಯಿ ವ್ಯಕ್ತಿನಿಷ್ಠೆಯ ಕಟ್ಟಾ ಅಭಿಮಾನಿಗಳು ಕ್ಷೇತ್ರದಲ್ಲಿದ್ದಾರೆ. ಸತತ ಸೋಲು ಕಂಡರೂ ಕಾಂಗ್ರೆಸ್ ಬೇರುಗಳು ಕ್ಷೇತ್ರದಲ್ಲಿ ಚಿಗುರೊಡೆದಿವೆ. ಅತ್ತಿತ್ತ ಪಕ್ಷ ಬದಲಾಯಿಸುವ ಜನರೂ ಹೆಚ್ಚಾಗಿದ್ದಾರೆ. ‘ಹಣ–ಹೆಂಡ ಚುನಾವಣೆಯಲ್ಲಿ ಕೆಲಸ ಮಾಡಲಿದೆ’ ಎಂದು ಕಾಂಗ್ರೆಸ್–ಬಿಜೆಪಿ, ಪರಸ್ಪರ ಆರೋಪ ಮಾಡುತ್ತಿವೆ. ನಾಮಪತ್ರ ಸಲ್ಲಿಕೆ ದಿನದಿಂದಲೇ, ತಲೆ ಎಣಿಕೆ ಲೆಕ್ಕ ಶುರುವಾಗಿದೆ.
ಭರತ್ ಅಭ್ಯರ್ಥಿಯಾದರೂ ತಂದೆಯೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ತಂದೆ ಕಟ್ಟಿರುವ ‘ಬಿಜೆಪಿ’ ಸಾಮ್ರಾಜ್ಯ ಮಗನ ತೆಕ್ಕೆಗೆ ಹೋಗದಂತೆ ನೋಡಿಕೊಳ್ಳಲು, ಪಠಾಣ ಪರವಾಗಿ ಸರ್ಕಾರವೇ ‘ಬಂಡೆ’ಯಂತೆ ನಿಂತಿದೆ. ‘ಬೊಮ್ಮಾಯಿಗೆ ಜೈ’ ಎನ್ನುವ ಪಡೆ ಕ್ಷೇತ್ರದಲ್ಲಿದ್ದು, ಮಗನಿಗೆ ಪಟ್ಟಾಭಿಷೇಕ ಮಾಡಲು ಕಾಯುತ್ತಿದೆ. ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶವಿದ್ದರೂ ಬಿಜೆಪಿ ಸುಲಭವಾಗಿ ಕೈ ಚೆಲ್ಲುವುದಿಲ್ಲವೆಂಬುದು ಮತದಾರರಿಗೆ ಗೊತ್ತಿದೆ. ಕಾಂಗ್ರೆಸ್ ಹೆಣೆಯುವ ತಂತ್ರಕ್ಕೆ, ಬಿಜೆಪಿಯೂ ಪ್ರತಿತಂತ್ರ ಹೆಣೆಯುತ್ತಿದೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯ ಶ್ರೀಕಾಂತ ದುಂಡಿಗೌಡ್ರ ಹಾಗೂ ಕಾಂಗ್ರೆಸ್‌ನ ಅಜ್ಜಂಪೀರ ಖಾದ್ರಿ, ಮಂಜುನಾಥ ಕುನ್ನೂರ ಬಂಡಾಯ ಎದ್ದಿದ್ದರು. ಖಾದ್ರಿ ಹಾಗೂ ಕುನ್ನೂರ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ನಾಯಕರ ಮನವೊಲಿಕೆ ನಂತರ ವಾಪಸು ಪಡೆದುಕೊಂಡಿದ್ದಾರೆ. ಬಂಡಾಯದ ಬಿಸಿ ಆರಿದಂತೆ ಕಂಡರೂ ಹೊಗೆ ಮಾತ್ರ ನಿಂತಿಲ್ಲ. ಚುನಾವಣೆ ಫಲಿತಾಂಶದ ಮೇಲೆ ‘ಹೊಗೆ’ ಪರಿಣಾಮ ಬೀರಬಹುದು. ಧಾರವಾಡ ಲೋಕಾಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ (ಬಿಜೆಪಿಗಿಂತ 8,500 ಹೆಚ್ಚಿನ ಮತಗಳು). ಇದೇ ಫಲಿತಾಂಶ, ಉಪ ಚುನಾವಣೆಯಲ್ಲಿ ಮರುಕಳಿಸಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು.
‘ಸವಾಲಿಗೆ– ಪ್ರತಿ ಸವಾಲು’ ಎಂಬ ಜಿದ್ದಾಜಿದ್ದಿನಲ್ಲಿ ನಡೆಯುತ್ತಿರುವ ಪ್ರಚಾರಗಳಿಂದ ಚುನಾವಣೆ ಕಣ ರಂಗೇರಿದೆ. ಕಣದಲ್ಲಿರುವ ಕೆಆರ್‌ಎಸ್ ಪಕ್ಷದ ರವಿ ಕೃಷ್ಣಾರೆಡ್ಡಿ ಹಾಗೂ ಪಕ್ಷೇತರರು ಸೇರಿ 6 ಮಂದಿ, ಮತ ಸೆಳೆಯಲು ಪ್ರಚಾರ ಮಾಡುತ್ತಿದ್ದಾರೆ. ಎಲ್ಲವನ್ನೂ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.