ADVERTISEMENT

ಹಾವೇರಿ | ಬೀದಿ ನಾಯಿ ಹಾವಳಿ: ರಸ್ತೆಯಲ್ಲಿ ಓಡಾಡಲು ಭಯ

ಸಂತೋಷ ಜಿಗಳಿಕೊಪ್ಪ
Published 28 ಅಕ್ಟೋಬರ್ 2024, 5:11 IST
Last Updated 28 ಅಕ್ಟೋಬರ್ 2024, 5:11 IST
ಹಾವೇರಿಯ ಇಜಾರಿ ಲಕಮಾಪುರ ಬಳಿ ಕಂಡುಬಂದ ಬೀದಿನಾಯಿಗಳ ಗುಂಪು
ಹಾವೇರಿಯ ಇಜಾರಿ ಲಕಮಾಪುರ ಬಳಿ ಕಂಡುಬಂದ ಬೀದಿನಾಯಿಗಳ ಗುಂಪು   

ಹಾವೇರಿ: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಹಾಗೂ ವೃದ್ಧರ ಮೇಲೆ ನಾಯಿಗಳು ಏಕಾಏಕಿ ದಾಳಿ ಮಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನಾಯಿಗಳು ಗುಂಪು ಗುಂಪಾಗಿ ಸುತ್ತಾಡುತ್ತಿವೆ. ರಾಣೆಬೆನ್ನೂರಿನಲ್ಲಿ ಹಲವು ನಾಯಿಗಳನ್ನು ಹಿಡಿದು ಸಂತಾನಹರಣ ಮಾಡಲಾಗಿದ್ದು, ಉಳಿದ ತಾಲ್ಲೂಕಿನಲ್ಲಿ ನಾಯಿಗಳ ಹಾವಳಿ ಯಥಾಪ್ರಕಾರ ಮುಂದುವರಿದಿದೆ.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತವಾಗಿದೆ. ನಾಯಿ ಕಡಿತದಿಂದ ಗಾಯಗೊಳ್ಳುತ್ತಿರುವ ಜನರು, ಸಮೀಪದ ಆಸ್ಪತ್ರೆ ಹಾಗೂ ತಾಲ್ಲೂಕು– ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರು, ಆಯುರ್ವೇದ ಔಷಧಗಳ ಮೊರೆ ಹೋಗುತ್ತಿದ್ದಾರೆ.

ADVERTISEMENT

ಬೀದಿ ನಾಯಿಗಳ ಹಾವಳಿಯಿಂದಾಗಿ ಮಕ್ಕಳು–ಮಹಿಳೆಯರು ಒಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ರಸ್ತೆಗಳಲ್ಲಿ ಬೈಕ್‌ನಲ್ಲಿ ಹೋಗುವ ಸವಾರರನ್ನು ನಾಯಿಗಳು ಬೆನ್ನಟ್ಟುತ್ತಿದ್ದು, ಕೆಲವರು ಬೈಕ್‌ನಿಂದ ಉರುಳಿಬಿದ್ದ ಘಟನೆಗಳೂ ನಡೆದಿವೆ.

‘ಇಜಾರಿಲಕಮಾಪುರ, ಕೇಂದ್ರ ಬಸ್‌ ನಿಲ್ದಾಣ ಸುತ್ತಮುತ್ತ, ಅಶ್ವಿನಿನಗರ, ಹಳೇ ಪಿ.ಬಿ. ರಸ್ತೆ, ಶಿವಾಜಿನಗರ, ಬಸವೇಶ್ವರನಗರ, ರೇಲ್ವೆ ನಿಲ್ದಾಣ ಸುತ್ತಮುತ್ತ, ನಾಗೇಂದ್ರನಮಟ್ಟಿ, ಶಿವಲಿಂಗೇಶ್ವರನಗರ ಹಾಗೂ ಇತರೆ ಪ್ರದೇಶಗಳಲ್ಲಿ ಬೀದಿನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಒಂಟಿಯಾಗಿ ಓಡಾಡುವವರನ್ನು ಕಂಡರೆ, ಬೊಗಳುತ್ತಿವೆ. ದಾಳಿ ಸಹ ಮಾಡಿ ಗಾಯಗೊಳಿಸುತ್ತಿವೆ’ ಎಂದು ನಿವಾಸಿ ಚಂದ್ರಶೇಖರ ಆರಾಧ್ಯಮಠ ಹೇಳಿದರು.

‘ಗುಂಪಿನಲ್ಲಿ 10ಕ್ಕೂ ಹೆಚ್ಚು ನಾಯಿಗಳು ಇರುತ್ತದೆ. ಎಲ್ಲ ನಾಯಿಗಳು ಒಟ್ಟಿಗೆ ಓಡಾಡುತ್ತವೆ. ಹಗಲು ಹಾಗೂ ರಾತ್ರಿ ಎನ್ನದೇ ಜನರ ಮೇಲೆ ದಾಳಿ ಮಾಡುತ್ತಿವೆ. ರಾತ್ರಿಯಂತೂ ಜನರ ಓಡಾಟವೇ ಕಷ್ಟವಾಗಿದೆ’ ಎಂದರು.

ನಾಯಿ ದಾಳಿಯಿಂದ ಗಾಯಗೊಂಡಿರುವ ಮಹಿಳೆ ಪ್ರೇಮಾ, ‘ಕುಡಿಯಲು ಶುದ್ಧ ಕುಡಿಯುವ ನೀರು ತರಲು ಹೋಗಿದ್ದೆ. ನೀರಿನ ಕ್ಯಾನ್‌ ಹೊತ್ತುಕೊಂಡು ಬರುವಾಗ, ಗುಂಪಿನಲ್ಲಿ ಬೀದಿನಾಯಿಗಳು ಬಂದವು. ನಾಯಿಗಳು ಬೊಗಳುತ್ತಿದ್ದರಿಂದ, ಭಯವಾಯಿತು. ಕೆಲ ಕ್ಷಣಗಳಲ್ಲಿ ನಾಯಿಯೊಂದು ನನ್ನ ಮೇಲೆ ದಾಳಿ ಮಾಡಿ, ಕಚ್ಚಿತು. ಸಮೀಪದಲ್ಲಿದ್ದ ಕೆಲವರು, ಸ್ಥಳಕ್ಕೆ ಬಂದು ನಾಯಿ ಓಡಿಸಿ ನನ್ನನ್ನು ರಕ್ಷಿಸಿದರು. ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡು, ಚೇತರಿಸಿಕೊಳ್ಳುತ್ತಿದ್ದೇವೆ’ ಎಂದು ದಾಳಿ ಸಂದರ್ಭವನ್ನು ವಿವರಿಸಿದರು.

ಆರು ತಿಂಗಳಿನಲ್ಲಿ 2,682 ಮಂದಿ ಗಾಯ

‘ಜಿಲ್ಲೆಯಾದ್ಯಂತ ನಾಯಿಗಳ ದಾಳಿಯಿಂದ ಆರು ತಿಂಗಳ ಅವಧಿಯಲ್ಲಿ (2024ರ ಏಪ್ರಿಲ್‌–ಸೆಪ್ಟೆಂಬರ್) 2,682 ಮಂದಿ ಗಾಯಗೊಂಡಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ತಿಳಿಸಿದರು.

‘ನಾಯಿ ಕಡಿತಕ್ಕೆ ವಿವಿಧ ಚಿಕಿತ್ಸೆಗಳು ಲಭ್ಯವಿವೆ. ಇಂಥ ಪ್ರಕರಣಗಳಲ್ಲಿ ಜಿಲ್ಲೆಯ ಯಾವುದೇ ವ್ಯಕ್ತಿಯಲ್ಲೂ ರೇಬಿಸ್ ರೋಗದ ಲಕ್ಷಣಗಳು ಕಂಡುಬಂದಿಲ್ಲ’ ಎಂದರು.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ:

ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ತಡೆಗಟ್ಟಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೀದಿ ನಾಯಿಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ.

‘ಬೀದಿನಾಯಿಗಳ ಹಾವಳಿ ತಡೆಯಲು ಮುಂದಾದರೆ, ಪ್ರಾಣಿ ದಯಾ ಸಂಘಗಳು ನಾನಾ ರೀತಿಯಲ್ಲಿ ದೂರು ನೀಡುತ್ತಿವೆ. ನಿಯಮಗಳಿಂದಾಗಿ ನಾಯಿಗಳ ವಿರುದ್ಧ ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಾಯಿ ಹಾವಳಿಯನ್ನು ಸಂಪೂರ್ಣ ಪ್ರಮಾಣದಲ್ಲಿ ತಡೆಯಲು ಆಗುತ್ತಿಲ್ಲ. ಕೆಲವು ಕಡೆ ಮಾತ್ರ, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹಾನಗಲ್‌ ಜನರಲ್ಲಿ ಭೀತಿ:

ಹಾನಗಲ್ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಿಂದ ಜನರಲ್ಲಿ ಭೀತಿ ಶುರುವಾಗಿದೆ. ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ಜಮಾಯಿಸುವ ನಾಯಿಗಳ ಗುಂಪು, ರಸ್ತೆಯಲ್ಲಿ ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ.

ಬೀದಿ ನಾಯಿಗಳ ಆರ್ಭಟಕ್ಕೆ ಮಹಿಳೆಯರು, ಮಕ್ಕಳು ಹೆದರಿಕೆಯಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ನಾಯಿ ಸ್ಥಳಾಂತರ ಮಾಡಲು ಪುರಸಭೆಯಿಂದ ಕೆಲ ತಿಂಗಳ ಹಿಂದೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನಂತರ, ಕಾರ್ಯಾಚರಣೆ ಬಂದ್ ಮಾಡಲಾಗಿದೆ. ಈಗ ಮತ್ತೆ, ಬೀದಿನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು’ ಎಂದು ನಿವಾಸಿ ಮಂಜುನಾಥ ಪೂಜಾರ ಒತ್ತಾಯಿಸಿದ್ದಾರೆ.

ಹಿರೇಕೆರೂರಿನಲ್ಲಿ ನಾಯಿಗಳ ಹಿಂಡು:

ಹಿರೇಕೆರೂರು ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ವಿವಿಧ ಬಡಾವಣೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಬೀದಿನಾಯಿಗಳ ಹಿಂಡು ಕಾಣ ಸಿಗುತ್ತಿದೆ. ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ನಗರ, ಸರ್ವಜ್ಞ ವೃತ್ತ, ಚೌಡಿ ವೃತ್ತ, ಬಾಳಂಬೀಡ ಕ್ರಾಸ್, ವಿವೇಕಾನಂದ ನಗರ ಹಾಗೂ ತಂಬಾಕದ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಇದೆ.

ರಾಣೆಬೆನ್ನೂರಿನ ಬಸ್‌ ನಿಲ್ದಾಣ ರಸ್ತೆಯ ಕೆ.ಎಂ.ಪಿ ವೃತ್ತದ ಬಳಿ ಕಂಡುಬಂದ ಬೀದಿನಾಯಿಗಳು
ರಾಣೆಬೆನ್ನೂರಿನಲ್ಲಿ 800ಕ್ಕೂ ಹೆಚ್ಚು ಬೀದಿನಾಯಿಗಳಿವೆ. ನಗರಸಭೆಯಿಂದ 1105 ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮಹೇಶ ಕೋಡಬಾಳ ನಗರಸಭೆ ಪರಿಸರ ಎಂಜನಿಯರ್‌
ಹಾನಗಲ್‌ನಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಎಚ್ಚರಿಸಲು ಪ್ರತಿಭಟನೆಗೆ ಮುಂದಾಗುತ್ತೇವೆ
ಪ್ರಶಾಂತ್ ಮುಚಂಡಿ ನಿವಾಸಿ

ರಾಣೆಬೆನ್ನೂರಿನಲ್ಲೂ ಬೀದಿನಾಯಿಗಳ ಕಾಟ

ರಾಣೆಬೆನ್ನೂರು: ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಯತ್ನದ ನಡುವೆಯೂ ರಾಣೆಬೆನ್ನೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ನಾಲ್ಕೈದು ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಮನೆ ಮುಂದೆ ಆಟವಾಡುವ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ.

ಗುಂಪು–ಗುಂಪಾಗಿ ತಿರುಗಾಡುವ ಬೀದಿನಾಯಿಗಳು ಡಬ್ಬಾ ಅಂಗಡಿ ಎಗ್‌ ರೈಸ್‌ ಚಿಕನ್‌ ಬಿರಿಯಾನಿ ಪಾಯಿಂಟ್‌ ಪಾದಚಾರಿ ಅಂಗಡಿಗಳ ಮುಂದೆ ಹಾಗೂ ವಿವಿಧ ಕಲ್ಯಾಣ ಮಂಟಪದ ಬಳಿ ಸುತ್ತಾಡುತ್ತಿವೆ. ಹಳೇ ಪಿ.ಬಿ.ರಸ್ತೆ ದೊಡ್ಡಪೇಟೆ ಬಸ್‌ ನಿಲ್ದಾಣ ಅಂಚೆ ಕಚೇರಿ ವೃತ್ತ ಎಂ.ಜಿ. ರಸ್ತೆ ಕೋರ್ಟ್‌ ವೃತ್ತ ಹಲಗೇರಿ ವೃತ್ತ ಕುರುಬಗೇರಿ ಸಿದ್ದೇಶ್ವರನಗರ ಸಂಗಮ ವೃತ್ತದ ಬಳಿ ಬೀದಿನಾಯಿಗಳು ಹೆಚ್ಚಾಗಿವೆ.

‘ನಗರದಲ್ಲಿ ಹಲವು ಪ್ರದೇಶಗಳಲ್ಲಿ ಬೀದಿನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಇದರಿಂದಲೇ ಅವು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ. ಆದ್ದರಿಂದ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲು ಪ್ರಾಣಿ ಪಾಲಕರು ಪೌರಕಾರ್ಮಿಕರು ಹೋಟೆಲ್ ಮಾಲೀಕರು ಪಶು ಸಂಗೋಪನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಂದಾಗಬೇಕು. ನಿಗದಿತ ಸ್ಥಳಗಳಲ್ಲಿ ಆಹಾರ ಇರಿಸಿ ಬೀದಿ ನಾಯಿಗಳಿಗೆ ಸಿಗುವಂತೆ ಮಾಡಬೇಕು’ ಎಂದು ಹೊಟೇಲ್‌ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ ತಿಳಿಸಿದರು.

(ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಶಂಕರ ಕೊಪ್ಪದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.