ಹಾವೇರಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಭರತ್ ಹೆಗಡೆ ಅವರನ್ನು ಸೇವೆಯಿಂದ ಅಮಾನತು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
‘ಬೇಜವಾಬ್ದಾರಿ ವರ್ತನೆ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ದುರ್ನಡತೆ ಎಸಗಿರುವ ಭರತ್ ಹೆಗಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ್ ಶ್ರೀಧರ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದರು. ಅದೇ ಪ್ರಸ್ತಾವ ಆಧರಿಸಿ ಇಒ ಅವರನ್ನು ಅಮಾನತು ಮಾಡಲಾಗಿದೆ. ಇಲಾಖೆ ವಿಚಾರಣೆಗೂ ಆದೇಶಿಸಲಾಗಿದೆ.
‘ಭರತ್ ಹೆಗಡೆ ಅವರನ್ನು ದಾಂಡೇಲಿ ತಾ.ಪಂ.ಗೆ ವರ್ಗಾವಣೆ ಮಾಡಿ ಜುಲೈ 29ರಂದು ಆದೇಶ ಹೊರಡಿಸಲಾಗಿತ್ತು. 30ರಂದು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ವರ್ಗಾವಣೆ ಆದೇಶ ಪ್ರಶ್ನಿಸಿದ್ದ ಅವರು, ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದಿದ್ದರು. ಮೇಲಾಧಿಕಾರಿಗಳ ಗಮನಕ್ಕೆ ತರದೇ ಆಗಸ್ಟ್ 1ರಂದು ಪುನಃ ಹುದ್ದೆ ಅಲಂಕರಿಸಿದ್ದರು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
‘ಹಾವೇರಿ ಜಿಲ್ಲೆಯಲ್ಲಿ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಪ್ರಕೃತಿ ವಿಕೋಪ ಉಂಟಾಗಿ ಮನೆಗಳು ಹಾಳಾಗಿವೆ. ರೈತರ ಬೆಳೆಗಳು ಜಲಾವೃತಗೊಂಡಿವೆ. ಈ ಸಮಯದಲ್ಲಿ ಭರತ್ ಹೆಗಡೆ ಅವರು ಕೇಂದ್ರ ಸ್ಥಾನದಲ್ಲಿರದೇ ಕರ್ತವ್ಯಲೋಪ ಎಸಗಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ವಿಷಾರ ವ್ಯಕ್ತಪಡಿಸಿದ್ದರು. ಜೊತೆಗೆ, ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೂ ಗೈರಾಗಿದ್ದರು. ಈ ಸಂಬಂಧ ಕಾರಣ ಕೇಳಿ ಶೋಕಾಸ್ ಜಾರಿ ಮಾಡಲಾಗಿತ್ತು. ಇದಕ್ಕೂ ಅವರು ಸಮಂಜಸ ಉತ್ತರ ನೀಡಿರಲಿಲ್ಲ. ಎಲ್ಲ ಸಂಗತಿಗಳನ್ನು ಪರಿಗಣಿಸಿ ಇಲಾಖೆ ವಿಚಾರಣೆ ಬಾಕಿ ಇರಿಸಿ ಭರತ್ ಹೆಗಡೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಇವರು ಅರ್ಹರಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.