ಹಾವೇರಿ: ಇಲ್ಲಿಯ ತಹಶೀಲ್ದಾರ್ ಗಿರೀಶ ಸ್ವಾದಿ ಅವರು ಮೂರು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅ.31ರಂದು ರಾತ್ರಿ 9.30ಕ್ಕೆ ತಹಶೀಲ್ದಾರ್ ಗಿರೀಶ್ ಸ್ವಾದಿ ಅವರು, ತಮಗೆ ಪರಿಚಿತರಿರುವ ಬೆಳಗಾವಿಯ ಆಜಾಮ್ ನಗರದ ಜಹೂರ ಅಂಗಡಿ ಅವರ ಮೊಬೈಲ್‌ನಿಂದ ಪತ್ನಿ ಭಾಗ್ಯಶ್ರೀ ಅವರಿಗೆ ಕಡೆಯ ಬಾರಿ ಕರೆ ಮಾಡಿದ್ದರು.
‘ರಾತ್ರಿ ನಾನು ಮನೆಗೆ ಬರುವುದಿಲ್ಲ. ನಾಳೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ಇದೆ. ಇಲ್ಲೇ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಇಲ್ಲವೇ ಹಾನಗಲ್ ರಸ್ತೆಯಲ್ಲಿರುವ ಶಿವಾ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುತ್ತೇನೆ’ ಎಂದು ಹೇಳಿದ ಬಳಿಕ ತಹಶೀಲ್ದಾರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 1ರಂದು ಬೆಳಿಗ್ಗೆ 6 ಗಂಟೆಗೆ ಕಚೇರಿಯ ವಾಹನ ಚಾಲಕ ಹಾವೇರಿಯ ಸಿದ್ಧೇಶ್ವರ ನಗರದ ತಹಶೀಲ್ದಾರ್ ಅವರ ಮನೆಗೆ ಬಂದು ವಿಚಾರಿಸಿದಾಗ, ತಹಶೀಲ್ದಾರ್ ಅವರು ರಾತ್ರಿ ಮನೆಗೆ ಬಂದಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಮತ್ತು ಕಚೇರಿಯ ಸಿಬ್ಬಂದಿ ಶಿವಾ ರೆಸಿಡೆನ್ಸಿಗೆ ಹೋಗಿ ವಿಚಾರಿಸಿದಾಗ, ನ.1ರಂದು ಬೆಳಗಿನ ಜಾವ 5 ಗಂಟೆಗೆ 112ನೇ ರೂಮ್ ಖಾಲಿ ಮಾಡಿ, ಏನೂ ಹೇಳದೇ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗಿರೀಶ ಸ್ವಾದಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಅ.31ರ ರಾತ್ರಿ ನಂತರ ತಹಶೀಲ್ದಾರ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
‘ಹಾವೇರಿ ತಹಶೀಲ್ದಾರ್ ಗಿರೀಶ ಸ್ವಾದಿ ಅವರು ಅನಾರೋಗ್ಯದ ನಿಮಿತ್ತ ಒಂದು ತಿಂಗಳು ರಜೆ ಮೇಲೆ ತೆರಳಿದ್ದಾರೆ. ಈ ಬಗ್ಗೆ ಕಚೇರಿಗೆ ಮಾಹಿತಿ ನೀಡಿದ್ದಾರೆ’ ಎಂದು ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೇಗಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.