ಹಾವೇರಿ: ಮಾತು ಬಾರದ ಹಾಗೂ ಕಿವಿ ಕೇಳದ ಅಂಗವಿಕಲರು ವಿಶಿಷ್ಟ ಗುರುತಿನ ಚೀಟಿಗಳನ್ನು (ಯುಡಿಐಡಿ) ಪಡೆಯಲು ಜಿಲ್ಲೆಯಲ್ಲಿಶ್ರವಣ ಹಾಗೂ ಧ್ವನಿ ಪರೀಕ್ಷಾ ಕೇಂದ್ರವೇ ಇಲ್ಲ!
ಹಾವೇರಿಯು ಜಿಲ್ಲಾ ಕೇಂದ್ರವಾಗಿ ಎರಡು ದಶಕಗಳೇ ಕಳೆದಿವೆ. ಆದರೂ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರವಣ, ಧ್ವನಿ ತಪಾಸಣಾ ಕೇಂದ್ರವಿಲ್ಲ. ಇದರಿಂದಾಗಿ ಅಂಗವಿಕಲರು ಗುರುತಿನ ಚೀಟಿಗಾಗಿ ಊರೂರು ಅಲೆದು ಯುಡಿಐಡಿ ಸೌಲಭ್ಯವಿರುವ ಆಸ್ಪತ್ರೆಗಳನ್ನು ಹುಡುಕುವಂತಾಗಿದೆ.
ಯುಡಿಐಡಿಯಲ್ಲಿ ಅಂಗವಿಕಲ ವ್ಯಕ್ತಿಗಳ ಗುರುತು, ಅಂಗವೈಕಲ್ಯತೆಯ ಪ್ರಮಾಣ ಹಾಗೂ ಎಲ್ಲ ಅಗತ್ಯ ವಿವರಗಳೂ ದಾಖಲಾಗಿರುತ್ತವೆ. ಅಂಗವಿಕಲ ವ್ಯಕ್ತಿಯ ಏಕೈಕ ದಾಖಲೆಯಾಗುವ ಈ ಕಾರ್ಡನ್ನು ದೇಶದಾದ್ಯಂತ ಪರಿಗಣಿಸಲಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೂ ಇದು ಕಡ್ಡಾಯ ಆಗಿದೆ. ಹೀಗಾಗಿ, ಅಂಗವಿಕಲರಿಗೆ ಕಾರ್ಡ್ ಪಡೆಯುವುದು ಅನಿವಾರ್ಯವಾಗಿದೆ.
ಕಾರ್ಡ್ ನೀಡುವ ಹಾಗೂ ತಿರಸ್ಕರಿಸುವ ಅಧಿಕಾರವನ್ನುಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ನೀಡಲಾಗಿದೆ. ಬುದ್ಧಿಮಾಂದ್ಯ, ಕೈ–ಕಾಲು ಊನವಿರುವ, ದೃಷ್ಟಿ ಕಳೆದುಕೊಂಡ ವ್ಯಕ್ತಿಗಳಿಗೆ ಜಿಲ್ಲೆಯಲ್ಲೇ ತಪಾಸಣೆ ನಡೆಯುತ್ತಿದೆ. ಆದರೆ, ಮಾತು ಬಾರದವರು ಹಾಗೂ ಕಿವಿ ಕೇಳದವರು ಪಡಿಪಾಟಲು ಅನುಭವಿಸುತ್ತಿದ್ದಾರೆ. ಹೊಸದಾಗಿ ಕಾರ್ಡ್ ಮಾಡಿಸಲು ದೈಹಿಕ ಪರೀಕ್ಷೆಗಾಗಿ ದಾವಣಗೆರೆ, ಹುಬ್ಬಳ್ಳಿ, ಮೈಸೂರು ಸೇರಿದಂತೆ ಬೇರೆ ಬೇರೆ ಊರುಗಳಿಗೆ ಹೊಗುತ್ತಿದ್ದಾರೆ.
‘ಜಿಲ್ಲಾ ಆಸ್ಪತ್ರೆಯಿಂದ ಆನ್‌ಲೈನ್‌ನಲ್ಲಿ ಈವರೆಗೆ 1,260 ಅರ್ಜಿಗಳು ಮಂಜೂರಾಗಿದ್ದು, ಇನ್ನೂ 500ಕ್ಕೂ ಹೆಚ್ಚು ಅರ್ಜಿಗಳ ಮಂಜೂರಾತಿ ಬಾಕಿ ಇದೆ. ನಿತ್ಯ ಸುಮಾರು 50 ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ. ಈವರೆಗೆ 600 ಕಾರ್ಡ್‌ಗಳು ಅಂಗವಿಲಕರ ಕೈಸೇರಿವೆ. ಅರ್ಜಿ ಆಹ್ವಾನಕ್ಕಾಗಿ ನ.2ರವರೆಗೆ ದಿನಾಂಕ ನಿಗದಿಪಡಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಗುರುತಿನ ಚೀಟಿಗಾಗಿ www.swavlambancard.gov.in ವೆಬ್‌ಸೈಟ್ ಮೂಲಕ ನೋಂದಣಿ ಮಾಡಬಹುದು. ಅರ್ಜಿ ಅಂಗೀಕಾರವಾದ 40 ದಿನದೊಳಗಾಗಿ ಫಲಾನುಭವಿ ವಿಳಾಸಕ್ಕೆ ಅಂಚೆ ಮೂಲಕ ಸ್ಮಾರ್ಟ್‌ಕಾರ್ಡ್ ತಲುಪುತ್ತದೆ. ಇದಕ್ಕೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮೂರು ಫೋಟೊ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಅಂಗವೈಕಲ್ಯತೆ ಪ್ರಮಾಣ ಪತ್ರ ನೀಡಬೇಕು’ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ತಿಳಿಸಿದರು.
ತಪಾಸಣಾ ಕೇಂದ್ರಕ್ಕೆ ಮನವಿ: ‘ಎಲ್ಲ ಅಂಗಾಂಗ ಸರಿ ಇರುವವರೇ ಸರ್ಕಾರಿ ಕಚೇರಿಗಳಿಗೆ ಹೋಗಿ ಸವಲತ್ತುಗಳನ್ನು ಪಡೆಯುವುದು ಕಷ್ಟ. ಹೀಗಿರುವಾಗ ಮಾತು ಬಾರದ ಹಾಗೂ ಕಿವಿ ಕೇಳದ ಅಂಗವಿಕಲರು ಬೇರೆ ಊರುಗಳಿಗೆ ಹೋಗಿ ಸೌಲಭ್ಯ ಹೇಗೆ ಪಡೆಯುತ್ತಾರೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಾವೇರಿಯಲ್ಲೇ ತಪಾಸಣೆ ಕೇಂದ್ರ ಸ್ಥಾಪಿಸಬೇಕು’ ಎಂದು ಸಾಮಾಜಿಕ ಪರಿವರ್ತನಾ ಆಂದೋಲನ ಜಿಲ್ಲಾ ಸಂಚಾಲಕಿ ಹಸೀನಾ ಹೆಡಿಯಾಲ ಮನವಿ ಮಾಡಿದರು.
*
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 37 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಯುಡಿಐಡಿ ಪ್ರಯೋಜನದ ಕುರಿತು ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ.
-ಮಲ್ಲಿಕಾರ್ಜುನ ಮಠದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.