ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ಹಾಗೂ ವರದಾ ನದಿಯಲ್ಲಿ ಬುಧವಾರ ನಸುಕಿನಿಂದಲೇ ನೀರಿನ ಹರಿಯುವಿಕೆ ಪ್ರಮಾಣ ಕ್ರಮೇಣ ಇಳಿಮುಖವಾಗುತ್ತಿದೆ. ಪ್ರವಾಹ ಭೀತಿ ಎದುರಿಸುತ್ತಿದ್ದ ಅಚ್ಚುಕಟ್ಟು ಪ್ರದೇಶದ ಜನರು ನಿಟ್ಟುಸಿರು ಬಿಡುತ್ತಿದ್ದಾರೆ.
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ, ವರದಾ ಹಾಗೂ ತುಂಗಭದ್ರಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಈಗ ಎಲ್ಲ ಕಡೆಯೂ ಮಳೆ ತುಸು ಕಡಿಮೆಯಾಗಿದ್ದು, ನದಿಯ ನೀರಿನ ಮಟ್ಟವೂ ಇಳಿಕೆಯಾಗುತ್ತಿದೆ.
ವರದಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಂಗೂರು, ನಾಗನೂರು, ಕೂಡಲ, ಕುಣಿಮೆಳ್ಳಿಹಳ್ಳಿ, ದೇವಗಿರಿ, ಕಲಕೋಟಿ, ಹಿರೇಮಗದೂರು, ಚಿಕ್ಕಮಗದೂರು, ನಂದಿ ನೀಲರಗಿ, ಮೇಲ್ಮುರಿ, ಹೊಸರಿತ್ತಿ ಹಾಗೂ ಸುತ್ತಮುತ್ತ ನೀರಿನ ಹರಿಯುವಿಕೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ, ಜಮೀನುಗಳಲ್ಲಿ ನಿಂತಿರುವ ನೀರು ಸದ್ಯಕ್ಕೆ ಕಡಿಮೆಯಾಗಿಲ್ಲ.
‘ಮಂಗಳವಾರ ಸಂಜೆ ಕಲಕೋಟಿ ಮೇಲ್ಸೇತುವೆಗೆ ಸಮವಾಗಿ ತಾಗಿಕೊಂಡು ನೀರು ಬಂದಿತ್ತು. ಬುಧವಾರ ಮೇಲ್ಸೇತುವೆ ಮುಳುಗಡೆ ಆಗಬಹುದೆಂದು ಅಂದುಕೊಂಡಿದ್ದೆವು. ಆದರೆ, ನೀರು ಕಡಿಮೆಯಾಗಿದೆ. ಮುಳುಗಡೆ ಭೀತಿ ಇಲ್ಲ’ ಎಂದು ಸ್ಥಳೀಯ ರಮೇಶ ಹೇಳಿದರು.
ನೀರು ಇಳಿಮುಖವಾದ ನಂತರ ಪರಿಶೀಲನೆ: ನದಿ ನೀರಿನಿಂದ ಆಗಿರುವ ಹಾನಿ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ತುಂಗಭದ್ರಾ ಹಾಗೂ ವರದಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. 1,650 ರೈತರಿಗೆ ಸೇರಿದ್ದ 1,255 ಹೆಕ್ಟೇರ್ ಕೃಷಿ ಬೆಳೆ ಪ್ರದೇಶ ಜಲಾವೃತಗೊಂಡಿದೆ. ನಿರಂತರವಾಗಿ ನೀರು ನಿಂತಿರುವುದರಿಂದ ಎಲ್ಲ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ನೀರು ಇಳಿಕೆಯಾದ ನಂತರ, ಪುನಃ ಪರಿಶೀಲನೆ ನಡೆಸಿದಾಗ ಹಾನಿ ಪ್ರಮಾಣ ಎಷ್ಟು ಎಂಬುದು ನಿಖರವಾಗಿ ತಿಳಿಯಲಿದೆ’ ಎಂದು ಹೇಳಿದರು.
‘665 ಹೆಕ್ಟೇರ್ ಪ್ರದೇಶದಲ್ಲಿದ್ದ ಮೆಕ್ಕೆ ಜೋಳ, 66 ಹೆಕ್ಟೇರ್ ಪ್ರದೇಶದಲ್ಲಿದ್ದ ಶೇಂಗಾ, 261 ಹೆಕ್ಟೇರ್ ಸೋಯಾಬಿನ್, 170 ಹೆಕ್ಟೇರ್ ಹತ್ತಿ, 20 ಹೆಕ್ಟೇರ್ ಹೆಸರು ಹಾಗೂ 73 ಹೆಕ್ಟೇರ್ ಅವರೆ–ಹುರುಳಿ ಬೆಳೆ ಜಲಾವೃತಗೊಂಡಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.
‘49 ರೈತರ 31.27 ಹೆಕ್ಟೇರ್ ತೋಟಗಾರಿಕೆ ಬೆಳೆಯೂ ಜಲಾವೃತಗೊಂಡಿದೆ. ಕೆಲವೆಡೆ ನೀರಿನೊಂದಿಗೆ ಬೆಳೆಯು ಕೊಚ್ಚಿಕೊಂಡು ಹೋಗಿರುವ ಸಂಭವವಿದೆ. ನೀರು ಇಳಿಕೆಯಾದ ನಂತರವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಅವರು ಹೇಳಿದರು.
ಮನೆ ಗೋಡೆ ಕುಸಿತ
ತಡಸ: ಕಳೆದ ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಗೆ ರಸ್ತೆಯ ಮೇಲೆ ನೀರು ನಿಂತು ಹಾಳಾಗಿದ್ದರೆ, ವಾಹನ ಸವಾರರು ನಿತ್ಯ ಪರದಾಡುವಂತೆ ಆಗಿದೆ.
ತಡಸ ಸುತ್ತಮುತ್ತಲಿನ ಗ್ರಾಮಗಳಾದ ಮಮದಾಪುರ, ಅಡವಿಸೋಮಾಪುರ, ಕುನ್ನೂರು, ದುಂಡಶಿ, ಹೊಸೂರು, ಯತ್ತಿನಹಳ್ಳಿ, ಶ್ಯಾಡಂಬಿ, ಮಡ್ಲಿ, ಹೊನ್ನಾಪುರ ಗ್ರಾಮಗಳಲ್ಲಿ ಮಳೆಯಿಂದ ಚರಂಡಿ, ಕಾಲುವೆಗಳಲ್ಲಿ ತುಂಬಿದ ತ್ಯಾಜ್ಯದಿಂದ ಮನೆಗಳಿಗೆ ನುಗ್ಗಿ ತೊಂದರೆ ಮಾಡಿದೆ. ಕುನ್ನೂರ ಗ್ರಾಮದಲ್ಲಿ ಭಾರಿ ಮಳೆ ಗಾಳಿಗೆ ಸುರೇಶ ಹಡಪದ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಭಾರಿ ಪ್ರಮಾಣದ ಗಾಳಿಗೆ ಶ್ಯಾಡಂಬಿ ಗ್ರಾಮದಲ್ಲಿ ಹುಣಸಿ ಮರ ಬಿದ್ದು ವಾಹನ ಸಂಚಾರ ಕೆಲ ಕಾಲ ಅಡ್ಡಿ ಆಗಿತ್ತು. ಗ್ರಾಮಸ್ಥರೆಲ್ಲ ಸೇರಿ ತೆರವುಗೊಳಿಸಿದರು. ಕೆಲವು ವಿದ್ಯುತ್ ಕಂಬಗಳು ಗಾಳಿಗೆ ಬಿದ್ದಿದ್ದು, ತಡಸ ಸುತ್ತ ಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಬ್ಯಾಡಗಿ: 33 ಮನೆಗಳಿಗೆ ಭಾಗಶ: ಹಾನಿ
ಬ್ಯಾಡಗಿ: ತಾಲ್ಲೂನಲ್ಲಿ ಕಳೆದ ಜು.11 ರಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮಂಗಳವಾರ 8 ಮನೆಗಳಿಗೆ ಹಾನಿಯಾಗಿದ್ದು ಇದುವರೆಗೆ ಒಟ್ಟಾರೆ 33 ಮನೆಗಳಿಗೆ ಭಾಗಶ: ಹಾನಿಯಾದಂತಾಗಿದೆ. ಕಾಗಿನೆಲೆ ಹೋಬಳಿಯ ಚಿನ್ನಿಕಟ್ಟಿ–4 ಸೂಡಂಬಿ–3 ಕಾಗಿನೆಲೆ–2 ನಾಗಲಾಪುರಕಳಗೊಂಡ ಗ್ರಾಮದಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಬ್ಯಾಡಗಿ ಹೋಬಳಿಯ ಶಿಡೇನೂರ–3ಬುಡಪನಹಳ್ಳಿ–2 ಬ್ಯಾಡಗಿಯಲ್ಲಿ ಒಂದು ಮನೆಗೆ ಭಾಗಶ: ಹಾನಿಯಾಗಿದೆ. ಯಾವುದೇ ಜೀವ ಹಾನಿಯ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಮಾಹಿತಿ ನೀಡಿದರು. ಗಾಳಿಗೆ ಎರಡು ಮನೆಗಳಿಗೆ ಹಾನಿ: ತಾಲ್ಲೂಕಿನ ತಡಸ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಬೀಸಿದ ಗಾಳಿಗೆ ಭದ್ರವ್ವ ಧರ್ಮಪ್ಪ ಲಮಾಣಿ ಮತ್ತು ಸುಶೀಲಾ ಸೋಮಪ್ಪ ಲಮಾಣಿ ಅವರಿಗೆ ಸೇರಿದ ಎರಡು ಹಂಚಿನ ಮನೆಗಳಿಗೆ ಹಾನಿಯಾಗಿದ್ದು ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಪಿಡಿಒ ರೆಹಮತಬಿ ಭೇಟಿ ನೀಡಿದ್ದು ಸೇವಾಲಾಲ್ ಸಭಾ ಭವನದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ. ವಾಡಿಕೆಗಿಂತ ಹೆಚ್ಚು ಮಳೆ: ತಾಲ್ಲೂಕಿನಲ್ಲಿ ಕಳೆದ ಜುಲೈ 11ರಿಂದ ಇದುವರೆಗೆ ಬ್ಯಾಡಗಿ 13.2 ಸೆಂ.ಮೀ ಕಾಗಿನೆಲೆ 12.8 ಸೆಂ.ಮೀ ಹಾಗೂ ಹೆಡಿಗ್ಗೊಂಡ 14.2 ಸೆಂ.ಮೀ ಮಳೆ ಸುರಿದಿರುವುದು ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ. ವಾಡಿಕೆಯಂತೆ ಜುಲೈ 22 ರವರೆಗೆ 9.2 ಸೆಂ.ಮೀ ಮಳೆಯಾಗಬೇಕಾಗಿತ್ತು. ಇದಕ್ಕೆ ಪ್ರತಿಯಾಗಿ 16.7 ಸೆಂ.ಮೀ ಮಳೆ ಸುರಿದಿದ್ದು ಶೇ 82ರಷ್ಟು ಹೆಚ್ಚಿಗೆ ಮಳೆಯಾದಂತಾಗಿದೆ.
ಯಡಗೋಡ ಸರ್ಕಾರಿ ಶಾಲೆ ಗೋಡೆ ಕುಸಿತ
ರಟ್ಟೀಹಳ್ಳಿ: ತಾಲ್ಲೂಕಿನ ಯಡಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಸೋಮವಾರ ತಡರಾತ್ರಿ ನಿರಂತರ ಮಳೆಯಿಂದಾಗಿ ನೆನೆದು ಕುಸಿದು ಬಿದ್ದಿದೆ. ಮಂಗಳವಾರ ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಡಗೋಡ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ‍್ಥೆ ತಲುಪಿವೆ. ಬಹಳಷ್ಟು ಹಳೆಯದಾದ ಕಟ್ಟಡಗಳಿದ್ದು ಕೊಠಡಿ ನಿರ್ಮಾಣಕ್ಕೆ ಹಾಕಿರುವ ಕಟ್ಟಿಗೆ ಹಾಳಾಗಿದ್ದು ಗೆದ್ದಿಲು ಹಿಡಿದಿವೆ. ಎಲ್ಲ ಕಟ್ಟಡಗಳು ಸೋರುತ್ತಿವೆ. ಅಧಿಕಾರಿಗಳು ಶಿಥಿಲಗೊಂಡ ಕೊಠಡಿ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ಹಾದ್ರಿಹಳ್ಳಿ ಆಗ್ರಹಿಸಿದರು. ಈ ವೇಳೆ ವಿದ್ಯಾರ್ಥಿಗಳ ಪೋಷಕರು ಗ್ರಾಮಸ್ಥರು ಶಿಕ್ಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.