ADVERTISEMENT

ಹಾವೇರಿ | ಶತಕ ಬಾರಿಸಿದ ಮೆಣಸಿನಕಾಯಿ, ಸಮಾಧಾನ ತಂದ ಬೀನ್ಸ್

ಮಾರುಕಟ್ಟೆಯಲ್ಲಿ ಕೆಲ ತರಕಾರಿ ಬೆಲೆ ಏರಿಕೆ, ಸೊಪ್ಪಿನ ದರ ಇಳಿಕೆ

ಸಂತೋಷ ಜಿಗಳಿಕೊಪ್ಪ
Published 12 ಜೂನ್ 2024, 5:30 IST
Last Updated 12 ಜೂನ್ 2024, 5:30 IST
ನಗರದ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ತರಕಾರಿ ಮಳಿಗೆಯೊಂದರಲ್ಲಿ ತರಕಾರಿಗಳನ್ನು ಹೊಂದಿಸಿಡಲಾಗಿತ್ತು - ಪ್ರಜಾವಾಣಿ ಚಿತ್ರ ಮಾಲತೇಶ ಇಚ್ಚಂಗಿ
ನಗರದ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ತರಕಾರಿ ಮಳಿಗೆಯೊಂದರಲ್ಲಿ ತರಕಾರಿಗಳನ್ನು ಹೊಂದಿಸಿಡಲಾಗಿತ್ತು - ಪ್ರಜಾವಾಣಿ ಚಿತ್ರ ಮಾಲತೇಶ ಇಚ್ಚಂಗಿ   

ಹಾವೇರಿ: ಮಳೆ ಅಭಾವ ಹಾಗೂ ಮಾನ್ಸೂನ್ ಆರಂಭದ ಮಳೆಯಿಂದಾಗಿ ತರಕಾರಿ ಬೆಳೆಯುವ ಪ್ರಮಾಣದಲ್ಲಿ ಏರಿಳಿತ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಸೊಪ್ಪುಗಳ ಬೆಲೆಯೂ ಏರಿಕೆ ಹಾಗೂ ಇಳಿಕೆ ಆಗಿದೆ.

ನಗರದ ಪ‍್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಲಾಲ್‌ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಹಾಗೂ ಸೊಪ್ಪಿನ ಮಾರಾಟ ಮಳಿಗೆಗಳಿವೆ. ಕೆಲ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಕಳೆದ ವಾರಕ್ಕೆ ಹೋಲಿಸಿದರೆ, ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಮಂಗಳವಾರ ಕಡಿಮೆಯಾಗಿತ್ತು.

ಎಂದಿನಂತೆ ಮಂಗಳವಾರ ಬೆಳಿಗ್ಗೆಯೂ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ತೆರೆದು ಗ್ರಾಹಕರಿಗಾಗಿ ಕಾದು ಕುಳಿತಿದ್ದರು. ಮಳಿಗೆಗಳಿಗೆ ಭೇಟಿ ನೀಡಿದ ಗ್ರಾಹಕರು, ಮೆಣಸಿನಕಾಯಿ, ಕ್ಯಾರೆಟ್, ಟೊಮೆಟೊ, ಸೌತೆಕಾಯಿ, ಬೀನ್ಸ್, ಕ್ಯಾಬಿಜ್, ಹಗಲಕಾಯಿ, ಬೆಂಡಿಕಾಯಿ, ಡೋಣಗಾಯಿ, ಚವಳೆಕಾಯಿ ಹಾಗೂ ಇತರೆ ತರಕಾರಿಗಳನ್ನು ಖರೀದಿಸಿದರು.

ADVERTISEMENT

ಮೆಂತೆ, ಸಬ್ಬಸ್ಕಿ, ಕೊತಂಬರಿ, ರಾಜಗಿರಿ, ಪಾಲಕ ಸೊಪ್ಪುಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೊಪ್ಪು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಹಸಿ ಮೆಣಸಿನಕಾಯಿ ದುಬಾರಿ: ‘ಈ ವಾರದ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಬೆಲೆ ದುಬಾರಿಯಾಗಿದೆ. ಕಳೆದ ವಾರ ಮೆಣಸಿನಕಾಯಿ ಪ್ರತಿ ಕೆ.ಜಿ.ಗೆ ಗರಿಷ್ಠ ₹ 60 ಬೆಲೆ ಇತ್ತು. ಈ ವಾರದ ಗರಿಷ್ಠ ₹ 100 ಆಗಿದೆ. ಬೆಲೆಯಲ್ಲಿ ಶೇ 40 ರಷ್ಟು ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಜಾಫರಸಾಬ ಜಮಾಲಸಾಬನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಅಭಾವದಿಂದ ಬೆಳೆ ಬಂದಿಲ್ಲ. ಇತ್ತೀಚೆಗೆ ಮಾನ್ಸೂನ್ ಮಳೆಯಿಂದಲೂ ಕೆಲವೆಡೆ ತರಕಾರಿ ಬೆಳೆ ಹಾನಿಯಾಗಿದೆ. ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಅಭಾವವಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮೆಣಸಿನಕಾಯಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ತರಕಾರಿಗಳನ್ನು ಹೋಲ್‌ಸೇಲ್ ಖರೀದಿಸಿ ಬಿಡಿಯಾಗಿ ಮಾರುವ ವ್ಯಾಪಾರಿಗಳಿದ್ದಾರೆ. ಮಾರುಕಟ್ಟೆ ಬೆಲೆಗೂ ಅಂಗಡಿಗಳಲ್ಲಿ ತರಕಾರಿ ಬೆಲೆಗೂ ಸ್ವಲ್ಪ ವ್ಯತ್ಯಾಸವಿರುತ್ತದೆ.
ಜಾಫರಸಾಬ ಜಮಾಲಸಾಬನವರ, ತರಕಾರಿ ವ್ಯಾಪಾರಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ

‘ಬೀನ್ಸ್ ಬೆಲೆಯೂ ಈ ವಾರ ಶೇ 75ರಷ್ಟು ಇಳಿಕೆ ಕಂಡಿದೆ. ಕಳೆದ ವಾರ ಪ್ರತಿ ಕೆ.ಜಿ ಬೀನ್ಸ್‌ಗೆ ₹ 350ರಿಂದ ₹ 400 ಇತ್ತು. ಈ ವಾರ ₹ 100 ಆಗಿದೆ. ಬೀನ್ಸ್ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿದೆ. ಬೀನ್ಸ್ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಈರುಳ್ಳಿ, ಮೊಳಗಾಯಿ, ಸೌತೆಕಾಯಿ ಹಾಗೂ ಕೆಲ ತರಕಾರಿಗಳ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಜವಾರಿ ಡೋಣಗಾಯಿ, ಹಾಗಲಕಾಯಿ, ಕ್ಯಾಬಿಜ, ಕ್ಯಾರೆಟ್ ಹಾಗೂ ಕ್ಯಾಪ್ಸಿಕಂ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ’ ಎಂದರು.

ಮೂಲಂಗಿ ಕೊರತೆ: ‘ಮಾರುಕಟ್ಟೆಯಲ್ಲಿ ಈ ವಾರ ಸೊಪ್ಪಿನ ಬೆಲೆ ಶೇ 50ರಷ್ಟು ಕಡಿಮೆಯಾಗಿದೆ. ಇದು ಗ್ರಾಹಕರಿಗೂ ಸಮಾಧಾನ ತಂದಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಮೂಲಂಗಿ ಸಿಗುತ್ತಿಲ್ಲ. ಸಿಕ್ಕರೂ ಒಂದು ಮೂಲಂಗಿ ಬೆಲೆ ₹ 10 ಆಗಿದೆ’ ಎಂದು ಸೊಪ್ಪಿನ ವ್ಯಾಪಾರಿ ಅಶ್ರಫ್ ನದಾಫ್ ಹೇಳಿದರು.

‘ಬಳ್ಳಾರಿ ಬೆಳಗಾವಿ ಮಹಾರಾಷ್ಟ್ರದಿಂದ ಆಮದು’

‘ಮಳೆ ಅಭಾವದಿಂದಾಗಿ ಹಾವೇರಿ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ತರಕಾರಿ ಬೆಳೆ ಬಂದಿಲ್ಲ. ಸ್ಥಳೀಯವಾಗಿ ತರಕಾರಿ ಸಿಗುತ್ತಿಲ್ಲ. ಹೀಗಾಗಿ ಬಳ್ಳಾರಿ ಬೆಳಗಾವಿ ಹಾಗೂ ಮಹಾರಾಷ್ಟ್ರದ ಜಿಲ್ಲೆಗಳಿಂದ ಹಾವೇರಿಗೆ ತರಕಾರಿ ಬರುತ್ತಿದೆ. ಇದು ಸಹ ದರ ಏರಿಕೆಗೆ ಪ್ರಮುಖ ಕಾರಣ’ ಎಂದು ವ್ಯಾಪಾರಿ ಅಕ್ಬರ್ ಅಲಿ ಹೇಳಿದರು. ‘ಬಳ್ಳಾರಿಯಿಂದ ಮೆಣಸಿನಕಾಯಿ ಮಹಾರಾಷ್ಟ್ರದಿಂದ ಟೊಮೆಟೊ ಹಾಗೂ ಇತರೆ ತರಕಾರಿಗಳು ಬೆಳಗಾವಿಯಿಂದ ನಗರಕ್ಕೆ ಪೂರೈಕೆಯಾಗುತ್ತಿವೆ. ಅಗತ್ಯಕ್ಕೆ ತಕ್ಕಷ್ಟು ತರಕಾರಿ ಬರುತ್ತಿಲ್ಲ. ಹೀಗಾಗಿ ಬಂದ ತರಕಾರಿ ಖರೀದಿಸಲು ವ್ಯಾಪಾರಿಗಳು ಮುಗಿಬೀಳುತ್ತಿದ್ದಾರೆ. ಅನಿವಾರ್ಯವಾಗಿ ಹೆಚ್ಚಿನ ದರ ನೀಡಿ ತರಕಾರಿ ಖರೀದಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.