ADVERTISEMENT

ವಕ್ಫ್ ಆಸ್ತಿ ವಿಷಯಕ್ಕೆ ಗಲಾಟೆ: ಕಲ್ಲು ತೂರಾಟ

ವದಂತಿಯಿಂದ ಮನಸ್ತಾಪ; ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 18:10 IST
Last Updated 31 ಅಕ್ಟೋಬರ್ 2024, 18:10 IST
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಕಲ್ಲು ತೂರಾಟದಿಂದ ಮನೆಯೊಂದರ ಕಿಟಕಿ ಗಾಜು ಒಡೆದಿರುವುದು
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಕಲ್ಲು ತೂರಾಟದಿಂದ ಮನೆಯೊಂದರ ಕಿಟಕಿ ಗಾಜು ಒಡೆದಿರುವುದು   

ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್‌ ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಗಲಾಟೆಯಾಗಿದ್ದು, ಮುಸ್ಲಿಂ ಸಮುದಾಯದ 8 ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಬುಧವಾರ ರಾತ್ರಿ ನಡೆದ ಗಲಾಟೆಯಿಂದ ಗ್ರಾಮದಲ್ಲಿ ಗುರುವಾರ ಪ್ರಕ್ಷುಬ್ಧ ವಾತಾವರಣವಿತ್ತು. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಂಜೆ ಮುಖಂಡರ ಸಭೆ ನಡೆಸಿದ ಪೊಲೀಸರು, ಪರಸ್ಪರ ಸಂಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

‘ವಕ್ಫ್ ಆಸ್ತಿಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸುವಾಗ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಗಲಾಟೆ ಶುರುವಾಗಿತ್ತು. ಆಗ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ತಡೆಯಲು ಬಂದವರ ಮೇಲೂ ಹಲ್ಲೆ ಆಗಿತ್ತು. ಗಲಾಟೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, 32 ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಪರಿಸ್ಥಿತಿ ತಿಳಿಯಾಗಿದೆ. ಮುಸ್ಲಿಂ ಮುಖಂಡರು ಪ್ರಕರಣ ಬೇಡ ಎಂದರು. ಹೀಗಾಗಿ, 32 ಮಂದಿಯನ್ನು ವಿಚಾರಣೆ ಮಾಡಿ, ಬಿಟ್ಟು ಕಳುಹಿಸಿದ್ದೇವೆ’ ಎಂದು ಅವರು ಹೇಳಿದರು.

ವಕ್ಫ್‌ ಆಸ್ತಿ ಪಟ್ಟಿ ತಯಾರಿ ವದಂತಿ:

‘ಕಡಕೋಳ ಗ್ರಾಮದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಅನ್ಯೋನ್ಯವಾಗಿದ್ದಾರೆ. ಆರೋಪಿಗಳು, ಮುಸ್ಲಿಂ ಮುಖಂಡರು ಮತ್ತು ಇತರರ ಹೊಲಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ವಕ್ಫ್ ಆಸ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಡಕೋಳದಲ್ಲೂ ವಕ್ಫ್‌ ಆಸ್ತಿಗಳಿದ್ದು, ಅದರ ಪಟ್ಟಿ ಮಾಡುತ್ತಿರುವ ಬಗ್ಗೆ ಗ್ರಾಮದಲ್ಲಿ ವದಂತಿ ಹರಡಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಊರು ತೊರೆದ ಕುಟುಂಬಗಳು: ಗಲಾಟೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಾಳಿ ಭಯದಲ್ಲಿ ಮುಸ್ಲಿಂ ಹಾಗೂ ಹಿಂದೂಗಳ ಕೆಲವು ಕುಟುಂಬಗಳು ಊರು ತೊರೆದಿವೆ.

ಗ್ರಾಮದಲ್ಲಿರುವ ದೇವಸ್ಥಾನ, ಮಸೀದಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಇದೆ. ದಾವಣಗೆರೆ ಐಜಿಪಿ ರಮೇಶ ಬಾನೂತ ಬುಧವಾರ ರಾತ್ರಿಯೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದ ಕೆಲ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ದೂರು ಕೊಡಲು ಯಾರೂ ಸಿದ್ಧರಿರಲಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದೇವೆ.
ಅಂಶುಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾವೇರಿ

- ‘ವಕ್ಪ್ ಕಾನೂನು ದುರ್ಬಳಕೆ; ಗಲಾಟೆಗೆ ಸರ್ಕಾರವೇ ಹೊಣೆ’

ಶಿಗ್ಗಾವಿ: ‘ರಾಜ್ಯದಲ್ಲಿ ವಕ್ಫ್ ಕಾನೂನು ದುರ್ಬಳಕೆ ಆಗುತ್ತಿದೆ. ಕಂದಾಯ ದಾಖಲೆ ಕಡೆಗಣಿಸಿ ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್‌ ಆಸ್ತಿಯೆಂದು ನಮೂದು ಮಾಡಲಾಗುತ್ತಿದೆ. ರೈತರಿಗೆ ನೀಡಿದ ನೋಟಿಸ್‌ಗಳನ್ನು ಸರ್ಕಾರ ಹಿಂಪಡೆಯಬೇಕು. ದಾಖಲೆ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಆದ ಗಲಾಟೆಗೆ ಸರ್ಕಾರವೇ ಹೊಣೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸೌಹಾರ್ದದಿಂದ ಜೀವನ ನಡೆಸಿದ್ದಾರೆ. ಸೌಹಾರ್ದತೆ ಕದಡುವ ಕೆಲಸ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.