ADVERTISEMENT

1.40 ಲಕ್ಷ ಪಂಪ್‌ಸೆಟ್: ಆಧಾರ್ ಜೋಡಣೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:41 IST
Last Updated 10 ಜುಲೈ 2024, 14:41 IST

ಹಾವೇರಿ: ಕೃಷಿ ನೀರಾವರಿ ಪಂಪ್‌ಸೆಟ್‌ಗಳ (ಐ.ಪಿ) ಆರ್‌.ಆರ್. ನಂಬರ್‌ಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದ್ದು, ಜುಲೈ 15ರೊಳಗೆ ಜೋಡಣೆ ಮಾಡಲು ಹೆಸ್ಕಾಂ ಗಡುವು ನೀಡಿದೆ.

ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರು ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 1.40 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿವೆ. ಈ ಪೈಕಿ ಶೇ 25ರಷ್ಟು ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯಾಗಿದ್ದು, ಉಳಿದ ಶೇ 75ರಷ್ಟು ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಿಸಲು ಹೆಸ್ಕಾಂ ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ಬೋಗಸ್ ಹೆಸರಿನಲ್ಲಿ ಆರ್.ಆರ್. ಸಂಖ್ಯೆಗಳಿವೆ. ಜೊತೆಗೆ, ಮರಣ ಹೊಂದಿರುವವರ ಹೆಸರಿನಲ್ಲಿಯೂ ಸಂಪರ್ಕಗಳಿವೆ. ರೈತರ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳ ಬಿಲ್‌ಗಳನ್ನು ಸರ್ಕಾರವೇ ಪಾವತಿಸುತ್ತಿದೆ. ಆದರೆ, ಬಿಲ್ ದುರುಪಯೋಗವಾಗುತ್ತಿರುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಪ್ರತಿಯೊಂದು ಆರ್‌.ಆರ್. ನಂಬರ್‌ಗೂ ಆಧಾರ್ ಕಡ್ಡಾಯಗೊಳಿಸಲಾಗಿದೆ.

ADVERTISEMENT

‘ರೈತರಿಗೆ ಹೆಸ್ಕಾಂನಿಂದ 10 ಎಚ್‌ಪಿ ಸಾಮರ್ಥ್ಯದ ಹಾಗೂ ಅದಕ್ಕಿಂತ ಕಡಿಮೆ ಇರುವ ಎಲ್ಲಾ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ರೈತರು ತಮ್ಮ ಎಲ್ಲ ನೀರಾವರಿ ಪಂಪ್ ಸೆಟ್‌ಗಳ ಆರ್‌.ಆರ್‌ ನಂಬರ್‌ಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು’ ಎಂದು ಹಾವೇರಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಪ್ಪ ಎಚ್‌. ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಸ್ಕಾಂನ ಉಪ ವಿಭಾಗದ ಕಚೇರಿ, ಶಾಖಾ ಕಚೇರಿ, ಗ್ರಾಮ ವಿದ್ಯುತ್ ಪ್ರತಿನಿಧಿಗಳನನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಬಹುದು’ ಎಂದು ಹೇಳಿದರು.

‘ಮರಣ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲಿ ಆರ್‌.ಆರ್. ನಂಬರ್‌ಗಳಿವೆ. ಇಂಥ ಪ್ರಕರಣಗಳಲ್ಲಿ ಸಂಬಂಧಪಟ್ಟ ರೈತರು, ಬಾಂಡ್‌ ಮೂಲಕ ಘೋಷಣೆ ಮಾಡಿಕೊಂಡು ಹೆಸರು ತಿದ್ದುಪಡಿ ಮಾಡಿಸಲು ಹಾಗೂ ಆಧಾರ್ ಜೋಡಣೆ ಮಾಡಲು ಅವಕಾಶವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.