ADVERTISEMENT

ತರಕಾರಿ ಬೆಳೆಯಲ್ಲಿ ಲಾಭ ಕಂಡ ರೈತ

1 ಕ್ವಿಂಟಲ್‌ ಕ್ಯಾಬೇಜ್‌ಗೆ ₹700 ದರ, 10 ಟನ್ ಮಾರಾಟ ಮಾಡಿದ ಚನ್ನಬಸಪ್ಪ ದಾನಿಗೊಂಡರ

ಶಂಕರ ಕೊಪ್ಪದ
Published 2 ಆಗಸ್ಟ್ 2024, 6:25 IST
Last Updated 2 ಆಗಸ್ಟ್ 2024, 6:25 IST
<div class="paragraphs"><p>ಹಿರೇಕೆರೂರು ತಾಲ್ಲೂಕಿನ ಭೋಗಾವಿ ಗ್ರಾಮದ ರೈತ ಚನ್ನಬಸಪ್ಪ ದಾನಿಗೊಂಡರ ಅವರು ಬೆಳೆದಿರುವ ಕ್ಯಾಬೇಜ್ ಬೆಳೆ </p></div>

ಹಿರೇಕೆರೂರು ತಾಲ್ಲೂಕಿನ ಭೋಗಾವಿ ಗ್ರಾಮದ ರೈತ ಚನ್ನಬಸಪ್ಪ ದಾನಿಗೊಂಡರ ಅವರು ಬೆಳೆದಿರುವ ಕ್ಯಾಬೇಜ್ ಬೆಳೆ

   

ಪ್ರಜಾವಾಣಿ ಚಿತ್ರ

ಹಿರೇಕೆರೂರು: ಕೃಷಿ ಎಂದರೆ ಮೂಗು ಮುರಿಯುವರೇ ಹೆಚ್ಚಿರುವ ಈಗಿನ ದಿನಮಾನಗಳಲ್ಲಿ ಇಲ್ಲೊಬ್ಬ ರೈತ ಬೇಸಾಯವನ್ನೇ ನಂಬಿ ತರಕಾರಿ ಬೆಳೆಯಲ್ಲಿ ಖುಷಿ ಕಂಡಿದ್ದಾರೆ.

ADVERTISEMENT

ಕಳೆದ 20 ವರ್ಷಗಳಿಂದ ತರಕಾರಿ ಬೆಳೆಯಲು ಆರಂಭಿಸಿರುವ ತಾಲ್ಲೂಕಿನ ಭೋಗಾವಿ ಗ್ರಾಮದ ರೈತ ಚನ್ನಬಸಪ್ಪ ದಾನಿಗೊಂಡರ ಅವರು, 9 ಏಕರೆ ಭೂಮಿಯಲ್ಲಿ 4 ಬೋರ್‌ವೆಲ್ ಮೂಲಕ ನೀರು ಹಾಯಿಸಿ 1 ಏಕರೆಯಲ್ಲಿ ಕ್ಯಾಬೇಜ್, 12 ಗುಂಟೆಯಲ್ಲಿ ಟೊಮೆಟೊ, 3 ಏಕರೆ ಶುಂಠಿ, 5 ಏಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಮೆಣಸಿನಕಾಯಿ, ಸೇವಂತಿ ಹೂ, ಚಂಡು ಹೂ, ಬೆಳೆ ಬೆಳೆದು ಲಾಭ ಮಾಡಿಕೊಂಡಿದ್ದಾರೆ.

ಅವರಲ್ಲಿ ನೀರಾವರಿ ವ್ಯವಸ್ಥೆ ಇರುವ ಕಾರಣ ಹಂಗಾಮು ಮಾತ್ರವಲ್ಲದೇ, ವರ್ಷಗಟ್ಟಲೇ ತರಕಾರಿ ಬೆಳೆಯಲು ಸಾಧ್ಯವಾಗಿದೆ. ತಮ್ಮ ಹೊಲದಲ್ಲಿ ವರ್ಷಪೂರ್ತಿ ಕೆಲಸ ಮಾಡುತ್ತ, ಸ್ವಾವಲಂಬನೆ ಸಾಧಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ಸದ್ಯ 1 ಕ್ವಿಂಟಲ್‌ ಕ್ಯಾಬೇಜ್‌ಗೆ ₹700 ದರವಿದೆ. ಸದ್ಯ 10 ಟನ್ ಮಾರಾಟ ಮಾಡಲಾಗಿದ್ದು, ₹80,000 ಲಾಭ ಬಂದಿದೆ. ಟೊಮೆಟೊ ಒಂದು ಬಾಕ್ಸ್‌ಗೆ ₹300 ದರವಿದ್ದು, ಈಗಾಗಲೇ 50 ಬಾಕ್ಸ್ ಟೊಮೆಟೊ ಮಾರಾಟ ಮಾಡಲಾಗಿದೆ’ ಎಂದು ತಿಳಿಸಿದರು.

ತರಕಾರಿ ಬೆಳೆಯುವುದು ಕಷ್ಟ: ‘ತರಕಾರಿ ಬೆಳೆ ಬೆಳೆಯುವುದು ಕಷ್ಟದ ಕೆಲಸ. ಮಳೆ ಹೆಚ್ಚಾದರೆ ಅದು ಹಾಳಾಗುತ್ತದೆ. ತರಕಾರಿ ಬೆಳೆಗಳನ್ನು ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಬಾರದು, ಸಾವಯವ ಗೊಬ್ಬರ ಹಾಗೂ ಸೆಗಣಿ ಗೊಬ್ಬರದಂತಹ ಪೋಷಕಾಂಶಗಳನ್ನು ನೀಡಬೇಕು. ಆಗ ಬೆಳೆ ಸಮೃದ್ಧಿಯಾಗಿ ಬೆಳೆಯಲು ಸಾಧ್ಯ’ ಎನ್ನುವುದು ಚನ್ನಬಸಪ್ಪ ಅವರ ಮಾತು.

ನಾವು ಒಂದೇ ಬೆಳೆಗೆ ಸೀಮಿತವಾಗಬಾರದು. ಆದಾಯ ತರುವ ವಿವಿಧ ಬೆಳೆಗಳನ್ನು ಬೆಳೆದಾಗ ಯಾವುದಾದರೂ ಒಂದರಲ್ಲಿ ಆದಾಯ ಗಳಿಸಬಹುದು. ಕಳೆದ ಬಾರಿ ಶುಂಠಿ ಬೆಳೆಯಿಂದ ನನಗೆ ಲಾಭವಾಗಿದೆ.
–ಚನ್ನಬಸಪ್ಪ ದಾನಿಗೊಂಡರ, ರೈತ

ಮಡಿ ಪದ್ಧತಿ: ‘ಕ್ಯಾಬೇಜ್ ಬೀಜಗಳ ಪಾಕೇಟ್‌ಗಳನ್ನು ತಂದು ಹೊಲದ ಒಂದು ಭಾಗದಲ್ಲಿ ಬೀಜಗಳನ್ನು 30 ದಿನಗಳ ಕಾಲ ಮಡಿ ಮಾಡಿಕೊಂಡು ಸಸಿಯಾದ ನಂತರ ನಾಟಿ ಮಾಡುತ್ತಾರೆ. ಸಾಲಿನಿಂದ ಸಾಲಿಗೆ ಒಂದರಿಂದ ಎರಡು ಅಡಿ ಅಂತರ ಹಾಗೂ ಸಸಿಯಿಂದ ಸಸಿಗೆ ಒಂದು ಅಡಿ ಅಂತರದಲ್ಲಿ ಕ್ಯಾಬೇಜ್‌ ಬೆಳೆಯಲಾಗುತ್ತದೆ. ಎರಡು ಬಾರಿ ಡಿಎಪಿ, ಅಮೋನಿಯಂ ಸಲ್ಫೇಟ್‌, ಇತರೆ ಅವಶ್ಯಕ ರಾಸಾಯನಿಕ ಗೊಬ್ಬರಗಳನ್ನು ನೀಡಲಾಗುತ್ತದೆ. 4 ರಿಂದ 5 ಬಾರಿ ಕೀಟ ನಾಶಕ ಸಿಂಪಡಣೆ ಮಾಡಲಾಗುತ್ತದೆ. ಕಳೆ ನಿರ್ಮೂಲನೆಗೆ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಕಳೆ ತೆಗೆಯಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

ಜಮೀನಿಗೇ ಬಂದು ಖರೀದಿ: ‘ಸಸಿ ನಾಟಿಯಿಂದ ಕಟಾವಿನವರೆಗೆ ಎಕರೆಗೆ ₹30 ಸಾವಿರದಿಂದ ₹40 ಸಾವಿರ ಖರ್ಚು ಬರುತ್ತದೆ. ಎರಡೂವರೆ ತಿಂಗಳ ಸೀಮಿತ ಅವಧಿಯ ಬೆಳೆ ಇದಾಗಿದೆ. ಕ್ಯಾಬೇಜ್ ಖರೀದಿದಾರರು ನೇರವಾಗಿ ರೈತರ ಜಮೀನಿಗೆ ಬಂದು ಖರೀದಿ ಮಾಡುತ್ತಾರೆ. ಈ ಭಾಗಗಳಲ್ಲಿ ಬೆಳೆದ ಕ್ಯಾಬೇಜ್ ಬೆಂಗಳೂರು, ಮಹಾರಾಷ್ಟ್ರದವರೆಗೆ ರಫ್ತಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ಮಾರಾಟ ಮಾಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.