ADVERTISEMENT

ಹಾವೇರಿ | ತುಂಗಭದ್ರಾ ತಟದ ‘ಹರಳಹಳ್ಳಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 4:29 IST
Last Updated 17 ಡಿಸೆಂಬರ್ 2023, 4:29 IST
ಹರಳಹಳ್ಳಿ ಗ್ರಾಮದ ಸೋಮೇಶ್ವರ ದೇವಸ್ಥಾನ
ಹರಳಹಳ್ಳಿ ಗ್ರಾಮದ ಸೋಮೇಶ್ವರ ದೇವಸ್ಥಾನ   

ಗುತ್ತಲ: ಇಲ್ಲಿನ ತುಂಗಭದ್ರಾ ನದಿ‌ ತಟದಲ್ಲಿರುವ ಹರಳಹಳ್ಳಿ ಗ್ರಾಮವು ಕ್ರಿ.ಶ.12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಳ್ವಿಕೆಗೆ ಒಳಪಟ್ಟ ವಿಕ್ರಮಪುರ ಎಂದು ಶಾಸನಗಳಲ್ಲಿ ಉಲ್ಲೇಖವಿದೆ.

ವಿಕ್ರಮಾದಿತ್ಯನ ಮಗಳಾದ ತುಳುವಲದೇವಿಯ ನೆನಪಿಗೊಸ್ಕರ ತುಳುವಲೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಇಲ್ಲಿರುವ ಕ್ರಿ.ಶ. 1188ರ ಶಾಸನದಲ್ಲಿ ಉಲ್ಲೇಖವಿದೆ.

ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡ ತ್ರಿಕೂಟಾಲವಿರುವ ಈಶ್ವರ ದೇವಾಲಯವೂ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಇದೆ.

ADVERTISEMENT

ಹರಳಹಳ್ಳಿ ಗ್ರಾಮದಲ್ಲಿ 5 ಶಾಸನಗಳಿವೆ. ಗ್ರಾಮವು 1,011 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಪೈಕಿ 697 ಹೆಕ್ಟೇರ್‌ ಕೃಷಿ ಭೂಮಿ ಇದೆ. ಇಲ್ಲಿನ ಸೋಮೇಶ್ವರ ದೇವಸ್ಥಾನದ ಆಸುಪಾಸು ಸ್ಥಳವೆಲ್ಲ 1992ರ ನೆರೆಹಾವಳಿಯಿಂದ ಮುಳುಗಿತ್ತು. ಬಳಿಕ ಸರ್ಕಾರವು ಗ್ರಾಮವನ್ನು ನದಿಯ ದಡದಿಂದ 1 ಕಿ.ಮೀ.ದೂರಕ್ಕೆ ಸ್ಥಳಾಂತರಿಸಿತ್ತು. ನದಿಯ ದಡದಲ್ಲಿ ಕೇಂದ್ರೀಯ ಜಲ ಆಯೋಗದ ಕೇಂದ್ರ ಸಹ ಇದೆ.

ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕೆಂಪು, ಯರಿ ಮಣ್ಣು ಮತ್ತು ಕಲ್ಲುಮಿಶ್ರಿತ ಕೆಂಪು ಮಣ್ಣು ಹೊಂದಿದೆ. ಭತ್ತ, ಕಬ್ಬು, ಬಾಳೆ, ಅಡಿಕೆ, ಗೊವಿನಜೋಳ ಗ್ರಾಮದ ಪ್ರಮುಖ ಬೆಳೆಗಳಾಗಿವೆ.

ಇಲ್ಲಿ ಪ್ರತಿವರ್ಷ ದುರ್ಗಾದೇವಿ ಜಾತ್ರೆ ನಡೆಯುತ್ತದೆ. ಜೈನಲಿಂಗೇಶ್ವರ, ಕೋಡಿಹನಮಪ್ಪ, ಉಡಚಮ್ಮ, ಕೆರೆಹನಮಪ್ಪ, ಕುಮಾರೇಶ್ವರ ದೇವಸ್ಥಾನ, ನಾಲ್ಕು ಮುಖವುಳ್ಳ ಬ್ರಹ್ಮದೇವರುಗಳು ಗ್ರಾಮದ ಪ್ರಮುಖ ಆಕರ್ಷಣೆ ಆಗಿದೆ.

ಕಲ್ಯಾಣ ಚಾಲುಕ್ಯ ಅರಸರು ಇಲ್ಲಿನ ಗುಡ್ಡಹಾಳಪಳ್ಳಿ ದತ್ತು ನೀಡಿದ್ದು ಅದು ಕ್ರಮೇಣ ಹಾಳಪಳ್ಳಿ ಎಂದಾಯಿತು. ಹಾಳಪಳ್ಳಿ ಹೋಗಿ ಹರಳಹಳ್ಳಿ ಎಂದು ಕರೆಯಲ್ಪಟ್ಟಿದೆ ಎಂದು ಗ್ರಾಮ ಚರಿತ್ರೆ ಕೋಶದಲ್ಲಿ ಉಲ್ಲೇಖವಾಗಿದೆ.
ಲಿಂಗನಗೌಡ ಹೋಸಗೌಡ್ರ, ಗ್ರಾಮದ ಹಿರಿಯರು
ಹರಳಹಳ್ಳಿ ಗ್ರಾಮದ ಸೋಮೇಶ್ವರ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.