ADVERTISEMENT

ಐತಿಹಾಸಿಕ ಗ್ರಾಮ ‘ಕಲಗುಡ್ಡಿ’

ಪುರಾಣ ಪ್ರಸಿದ್ಧ ಕೆಂಚಮ್ಮದೇವಿ ದೇವಸ್ಥಾನ; ಭಕ್ತರ ಇಷ್ಟಾರ್ಥ ಈಡೇರಿಸುವ ದೇವಿ

ಮಾಲತೇಶ ಆರ್
Published 15 ಅಕ್ಟೋಬರ್ 2023, 6:13 IST
Last Updated 15 ಅಕ್ಟೋಬರ್ 2023, 6:13 IST
ತಿಳವಳ್ಳಿ ಸಮೀಪದ ಕಲಗುಡ್ಡಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಕೆಂಚಮ್ಮದೇವಿ ದೇವಾಲಯ
ತಿಳವಳ್ಳಿ ಸಮೀಪದ ಕಲಗುಡ್ಡಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಕೆಂಚಮ್ಮದೇವಿ ದೇವಾಲಯ   

ತಿಳವಳ್ಳಿ: ಹಾನಗಲ್ಲ ತಾಲ್ಲೂಕು ತಿಳವಳ್ಳಿ ಸಮೀಪದ ಕಿರವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲಗುಡ್ಡಿ ಗ್ರಾಮ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆ ಹೊಂದಿದೆ. ಗ್ರಾಮದ ಹೊರಗಡೆ ಸಣ್ಣ ಸಣ್ಣ ಕಲ್ಲಿನ ಗುಡ್ಡೆಗಳು ಕಂಡು ಬರುತ್ತವೆ. ಆದ್ದರಿಂದಲೇ ಈ ಗ್ರಾಮಕ್ಕೆ ‘ಕಲಗುಡ್ಡಿ’ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಕಲಗುಡ್ಡಿ ಗ್ರಾಮಕ್ಕೂ ಮಹಾಭಾರತಕ್ಕೂ ನಂಟಿದೆ. ಪಾಂಡವರು ಅಜ್ಞಾತವಾಸದ ವೇಳೆ ಮಾರುವೇಷದಲ್ಲಿ ವಿರಾಟರಾಜನ ವಿರಾಟನಗರ ಆಸ್ಥಾನದಲ್ಲಿ ತಂಗಿದ್ದರು. ವಿರಾಟನಗರ ಎಂದರೆ ಈಗೀನ ಹಾನಗಲ್ಲ. ನಕುಲ ಮತ್ತು ಸಹದೇವರು ದನಗಳನ್ನು ಮೇಯಿಸಲು ತುರಬಿಗುಡ್ಡದಿಂದ ಹುಲಗಡ್ಡಿ ಮತ್ತು ಕಲಗುಡ್ಡಿಗಳಲ್ಲಿ ದನಗಳನ್ನು ಮೇಯಿಸಿಕೊಂಡು ಕಿರುವಾಡಿಯ ಕಿರುಹಳ್ಳದಲ್ಲಿ ನೀರು ಕುಡಿಸಿಕೊಂಡು ಹೋಗುತ್ತಿದ್ದರು ಎಂಬ ಇತಿಹಾಸ ಇದೆ.

ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಕಲಗುಡ್ಡಿ ಗ್ರಾಮದಲ್ಲಿ ಸುಮಾರು ನೂರಾರು ವರ್ಷಗಳ ಹಳೆಯದಾದ ಪುರಾಣ ಪ್ರಸಿದ್ಧ ಕೆಂಚಮ್ಮದೇವಿ ದೇವಾಲಯವಿದೆ. ಈ ದೇವಾಲಯವನ್ನು ಹೊಸದಾಗಿ ಕಲ್ಲಿನಿಂದ ಕಟ್ಟಲಾಗುತ್ತಿದೆ. ಕಲ್ಲಿನ ಗುಡ್ಡದ ಮೇಲೆ ಗದಿಗೆಮ್ಮ ದೇವಾಲಯ ಇದೆ. ಬಸವಣ್ಣ ದೇವಾಲಯ, ಮಾತಂಗಿ, ಹನುಮಂತ ದೇವಾಲಯಗಳಿವೆ. ಈ ಗ್ರಾಮದಲ್ಲಿ ಅನೇಕ ಮಾಸ್ತಿಕಲ್ಲುಗಳು ಹಾಗೂ ವೀರಗಲ್ಲುಗಳಿವೆ.

ADVERTISEMENT

ಭಕ್ತರ ಇಷ್ಟಾರ್ಥ ಈಡೇರಿಸುವ ಕೆಂಚಮ್ಮದೇವಿ:  ಪ್ರತಿ ವರ್ಷ ಭರತ ಹುಣ್ಣಿಮೆ ಸಂದರ್ಭದಲ್ಲಿ ಕೆಂಚಮ್ಮದೇವಿ ಜಾತ್ರಾ ಮಹೋತ್ಸವ ಜರುಗುತ್ತದೆ. ರಾಜ್ಯದ ಹಲವು ಭಾಗಗಳಿಂದ ಭಕ್ತರು ದೇವಿಗೆ ಹರಕೆ ತೀರಿಸುತ್ತಾರೆ. ಆದರೆ, ಭಕ್ತರು ದೇವಿ ಮೂರ್ತಿಯ ಮುಖದ ದರ್ಶನವಾಗುವುದಿಲ್ಲ. ಪುರಕೊಂಡಿಕೊಪ್ಪದ ಗೌಡರ ಮಗಳು ಎಂದು ಕರೆಯುವ ಕೆಂಚಮ್ಮ ದೇವಿಯು, ಶಕ್ತಿರೂಪದಲ್ಲಿ ಕಲಗುಡ್ಡಿಯಲ್ಲಿ ನೆಲೆಸಿರುವುದರಿಂದ ಆ ತಾಯಿಯ ಅವಕೃಪೆಗೆ ತುತ್ತಾಗಬಾರದೆಂದು ದೇವಸ್ಥಾನದ ಪೂಜಾರಿ ಕೂಡ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ಮಾಡುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಪುರಕೊಂಡಿಕೊಪ್ಪದ ಗೌಡರ ಮನೆಯವರು ಇಂದಿಗೂ ದೇವಿಗೆ ಮೊದಲು ಉಡಿ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ.

ವ್ಯಾಪಾರಿಯೊಬ್ಬರು ದೇವಿಯ ಮೂರ್ತಿಯನ್ನು ನೋಡಲು ದೇವಸ್ಥಾನದ ಮೇಲ್ಛಾವಣಿಯಿಂದ ಗರ್ಭಗುಡಿಗೆ ಹೋದಾಗ, ದೇವಿಯ ಪಾದದ ಬಳಿ ಮರಣ ಹೊಂದಿದ ಎನ್ನುತ್ತಾರೆ ಗ್ರಾಮದ ಮುಖಂಡರಾದ ಹನುಮಂತಪ್ಪ ಕಲ್ಲೇರ.

ಕಲಗುಡ್ಡಿ ಗ್ರಾಮದ ಪಕ್ಕದಲ್ಲಿರುವ ಕಲ್ಲಿನ ಗುಡ್ಡ

ಕಲೆಗಳ ತವರೂರು! ಕಲಗುಡ್ಡಿ ಗ್ರಾಮದ ಜನರು ಕಲಾ ಪ್ರೇಮಿಗಳಾಗಿದ್ದಾರೆ. ದೊಡ್ಡಾಟದ ಭಾಗವತರು ಹಾಡುಗಾರರು ಹವ್ಯಾಸಿ ನಾಟಕ ಕಲಾವಿದರಿದ್ದಾರೆ. ಜಾನಪದ ಕಲಾ ಪ್ರದರ್ಶನದಲ್ಲಿ ಬೇಡರವೇಷ ಸೋಗು ಎಂಬುದು ಇಲ್ಲಿಯ ವಿಶೇಷ. ಡೊಳ್ಳು ಭಜನಾ ಮೇಳಗಳ ಕಲಾವಿದರು ಕರಕುಶಲ ಕಲಾವಿದರನ್ನು ಈ ಗ್ರಾಮ ಒಳಗೊಂಡಿದೆ. ಕಲೆಗಳ ತವರೂರು ಅಂತಲೇ ಹೆಸರುವಾಸಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.