ರಟ್ಟೀಹಳ್ಳಿ: ತಾಲ್ಲೂಕಿಗೆ ಸೇರಿದ ಐತಿಹಾಸಿಕ ಬಹುದೊಡ್ಡ ಗ್ರಾಮ ಮಾಸೂರು. ಅನೇಕ ರಾಜ, ಮಹಾರಾಜರು, ಖಾನರು, ವಿಜಯನಗರದ ಅರಸರು, ಕೆಳದಿ ಅರಸರು ಆಳ್ವಿಕೆ ಮಾಡಿದ ನಾಡು ಈ ಮಾಸೂರು.
ಈ ಊರನ್ನು ಕುಮದ್ವತಿ ನದಿಯು ಶೇ 75ರಷ್ಟು ಭಾಗ ಸುತ್ತುವರಿದಿದೆ. 2018ರಿಂದ ನೂತನ ರಟ್ಟೀಹಳ್ಳಿ ತಾಲ್ಲೂಕಿಗೆ ಈ ಗ್ರಾಮ ಸೇರ್ಪಡೆಗೊಂಡಿದೆ. ಈ ಗ್ರಾಮದ ಜನರ ಮುಖ್ಯ ಕಸಬು ವ್ಯವಸಾಯ ಹಾಗೂ ವ್ಯಾಪಾರ. ಈ ಗ್ರಾಮ ಮಲೆನಾಡಿಗೆ ಹೊಂದಿಕೊಂಡಿದ್ದು, ನೀರಾವರಿಗೆ ಯೋಗ್ಯವಾಗಿದೆ. ಹೀಗಾಗಿ ಇಲ್ಲಿ ಭತ್ತವನ್ನು ಸಮೃದ್ಧಿಯಾಗಿ ಬೆಳೆಯುತ್ತಾರೆ.
ಸುಮಾರು 12,000 ಜನಸಂಖ್ಯೆ ಹೊಂದಿರುವ ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಹಲವಾರು ಶಾಲಾ ಕಾಲೇಜುಗಳು, ಪದವಿ ಕಾಲೇಜು, ಬ್ಯಾಂಕು, ಸಂಘ-ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಜಯನಗರದ ಅರಸರ ಸಾಮಂತ ಅರಸರಾಗಿದ್ದ ಕೆಳದಿ ನಾಯಕರ ಆಳ್ವಿಕೆಗೆ ಒಳಪಟ್ಟ ಕೋಟೆ ಇದ್ದು, ಕೋಟೆಯ ಮೂರು ಭಾಗಗಳನ್ನು ಕುಮದ್ವತಿ ನದಿ ಸುತ್ತುವರಿದಿದೆ.
ಉತ್ತರ ದಿಕ್ಕಿಗೆ ಕಂದಕಗಳು ಇದ್ದು ಇವುಗಳಿಗೆ ಅಗಳಗಳು ಎನ್ನುತ್ತಿದ್ದರು. ಅಂದು ಯಾರಾದರೂ ಕೋಟೆ ಪ್ರವೇಶ ಮಾಡಬೇಕಾದರೆ ಅಗಳಗಳನ್ನು ದಾಟಿಯೇ ಪ್ರವೇಶಿಸಬೇಕಿತ್ತು. ಆ ಕೋಟೆಯ ಮೇಲೆ ಪಿರಂಗಿ ಇದ್ದ ಜಾಗವಿದೆ.
ಸರ್ವಜ್ಞನ ಕುರುಹುಗಳು:
ವಿಶ್ವೇಶ್ವರ ದೇವಸ್ಥಾನವು 16ನೇ ಶತಮಾನದಲ್ಲಿ ನಿರ್ಮಿಸಲಾದ ವಿಜಯನಗರ ಕೆಳದಿ ಅರಸರ ಕಾಲದ ದೇವಸ್ಥಾನ ಇದಾಗಿದ್ದು, ಸರ್ವಜ್ಞನ ತಂದೆ ಬಸವರಸ ಈ ಕಾಶಿ ವಿಶ್ವೇಶ್ವರ ದೇವರ ಆರಾಧಕನಾಗಿದ್ದ ಎಂದು ಸರ್ವಜ್ಞನ ವಚನಗಳಲ್ಲಿ ಉಲ್ಲೇಖವಿದೆ. ಇದು ಕುಮದ್ವತಿ ನದಿ ದಂಡೆಯ ಮೇಲಿದೆ. ಇದರ ಬಳಿಯಲ್ಲಿಯೇ ಸರ್ವಜ್ಞ ಸಮಾಧಿ ಇದೆ.
ಮಾಸೂರಿನಲ್ಲಿ ಪುರಾತನ ಕಾಲದ ವಿಶ್ವೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಸಿದ್ಧೇಶ್ವರ ಬೆಟ್ಟದ ಗವಿಯಲ್ಲಿನ ಸಿದ್ಧೇಶ್ವರ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನಗಳಿವೆ. ಮಾಸೂರಿನಲ್ಲಿ ಸರ್ವಜ್ಞ ಹೈಸ್ಕೂಲ್, ಸರ್ವಜ್ಞ ವಿದ್ಯಾಪೀಠ, ಸರ್ವಜ್ಞ ವಾಚನಾಲಯ, 2017ರಲ್ಲಿ ಸರ್ವಜ್ಞ ಫೌಂಡೇಷನ್ ಸಂಸ್ಥೆಯನ್ನು ಸ್ಥಾಪಿಸಿ ಹತ್ತು ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.