ADVERTISEMENT

ಹಾವೇರಿ: ಪ್ರವಾಸಿಗರ ನೆಚ್ಚಿನ ತಾಣ ಬಾಳಂಬೀಡು

ಐತಿಹಾಸಿಕ ಹಿನ್ನೆಲೆಯ ಗ್ರಾಮ; ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾದ ಕಲ್ಮೇಶ್ವರ ದೇವಸ್ಥಾನ

ಸುರೇಖಾ ಪೂಜಾರ
Published 26 ನವೆಂಬರ್ 2023, 5:55 IST
Last Updated 26 ನವೆಂಬರ್ 2023, 5:55 IST
ಬಾಳಂಬೀಡ ಗ್ರಾಮದಲ್ಲಿರುವ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನ
ಬಾಳಂಬೀಡ ಗ್ರಾಮದಲ್ಲಿರುವ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನ   

ಅಕ್ಕಿಆಲೂರ: ತಾಲ್ಲೂಕು ಕೇಂದ್ರ ಹಾನಗಲ್‍ನಿಂದ 15 ಕಿ.ಮೀ. ದೂರದಲ್ಲಿನ, ಶಿರಸಿ-ಮೊಣಕಾಲ್ಮೂರು ರಾಜ್ಯ ಹೆದ್ದಾರಿ ಬಳಿಯ ಪ್ರಾಕೃತಿಕ ಸೊಬಗಿನ ಬಾಳಂಬೀಡ ಗ್ರಾಮ ಪ್ರಾಚೀನ ಇತಿಹಾಸ ಹೊಂದಿದೆ. ಗ್ರಾಮವು ದೇವಸ್ಥಾನಗಳ ತವರು, ಜೈನ ಧರ್ಮೀಯರ ಬೀಡು ಎಂದೇ ಹೆಸರಾಗಿದೆ.

ವರದಾ ನದಿ ತೀರದಲ್ಲಿರುವ ಈ ಗ್ರಾಮಕ್ಕೆ ಜೈನ ಧರ್ಮದ ತೀರ್ಥಂಕರ ಮಹಾವೀರರ ‘ವಾಣಿ ಬಾಳು, ಬಾಳಲು ಬಿಡು’ ಎಂಬ ಸಂದೇಶದ ಆಧಾರದ ಮೇಲೆ ಬಾಳಂಬೀಡು ಹೆಸರು ಬಂದಿದೆ ಎನ್ನಲಾಗಿದೆ.

6 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ, ಸೌಹಾರ್ದತೆಗೆ ಹೆಸರಾಗಿದೆ. ಹಿಂದೂ, ಜೈನ, ಮುಸ್ಲಿಂ ಸೇರಿದಂತೆ ಹಲವು ಜಾತಿ, ಮತ, ಪಂಥದವರು ಇಲ್ಲಿ ನೆಲೆಸಿದ್ದು, ಪ್ರತಿಯೊಬ್ಬರ ಧಾರ್ಮಿಕ ಪದ್ಧತಿ ಆಚರಣೆಗಳನ್ನು ಗೌರವಿಸಿ, ಬೆಂಬಲಿಸುತ್ತಾ ಬಂದಿದ್ದಾರೆ.

ADVERTISEMENT

ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ಕಾಲದ ಬ್ರಹ್ಮೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನಗಳು ಅದ್ಭುತ ಕಲಾಕೃತಿ ಹೊಂದಿದ್ದು, ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಂತಿವೆ. ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ.

ಕ್ರಿ.ಶ. 11ನೇ ಶತಮಾನದಲ್ಲಿ ನಿರ್ಮಾಣಗೊಂಡ, ಹೊಯ್ಸಳರ ಕಾಲಕ್ಕೆ ಸೇರಿದ್ದೆನ್ನಲಾದ ಕಲ್ಮೇಶ್ವರ ದೇವಸ್ಥಾನ ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಉತ್ತರಾಳ, ನವರಂಗ, ಸಭಾ ಮಂಟಪ ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ನವರಂಗದಲ್ಲಿ ಹೊಳಪಿನಿಂದ ಕೂಡಿದ ತಿರುಗುಣಿ ಯಂತ್ರದ ಕಂಬಗಳಿವೆ.

ದೇವಸ್ಥಾನದಲ್ಲಿರುವ ನಾಲ್ಕು ಕಂಬಗಳಲ್ಲಿನ ಕೆತ್ತನೆ ಸುಂದರವಾಗಿ ಮೂಡಿಬಂದಿದೆ. ಬ್ರಹ್ಮ, ವಿಷ್ಣು, ಮಹೇಶ್ವರ, ಷಣ್ಮುಖ, ಗಣೇಶ, ನಂದಿ, ಐರಾವತ, ಮೂರ್ತಿಗಳು ಅತೀ ಸೂಕ್ಷವಾದ ಶಿಲ್ಪಕಲಾ ಕೆತ್ತನೆಯನ್ನು ಬಿಂಬಿಸುತ್ತವೆ.

ಬಾಳಂಬೀಡ ಗ್ರಾಮದಲ್ಲಿರುವ ಐತಿಹಾಸಿಕ ಬ್ರಹ್ಮೇಶ್ವರ ದೇವಸ್ಥಾನ
ಶಿವಲಿಂಗಕ್ಕೆ ಸೂರ್ಯ ಕಿರಣ ಸ್ವರ್ಶ:
ಯುಗಾದಿ ಹಬ್ಬದಂದು ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುವುದು ದೇವಸ್ಥಾನದ ವಿಶೇಷತೆ. ಇಂತಹ ಅಪರೂಪದ ದೃಶ್ಯ ಕಾಣಲು ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬಾಳಂಬೀಡ ಗ್ರಾಮದತ್ತ ದೌಡಾಯಿಸುತ್ತಾರೆ. ಕಲ್ಮೇಶ್ವರ ದೇವಸ್ಥಾನವು ಕೇಂದ್ರದ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು ಜೀರ್ಣೋದ್ಧಾರಗೊಳಿಸಲಾಗಿದೆ. ದೇವಸ್ಥಾನದ ಮೂಲ ಸ್ವರೂಪಕ್ಕೆ ಧಕ್ಕೆಯನ್ನುಂಟು ಮಾಡದಂತೆ ಜೀರ್ಣೋದ್ಧಾರ ಕೈಗೊಂಡಿರುವುದು ವಿಶೇಷ.

ಜೈನರ ಶ್ರದ್ಧಾಭಕ್ತಿಯ ಕೇಂದ್ರ:

ವರದಾ ನದಿಯ ದಡದಲ್ಲಿ ವೆಂಕಟೇಶ್ವರ ಬಾಳಂಬೀಡ ಗ್ರಾಮದ ಪಶ್ಚಿಮಕ್ಕೆ ತಿಮ್ಮಪ್ಪ ಮಧ್ಯಭಾಗದಲ್ಲಿ ಕ್ರಿ.ಶ. 8ನೇ ಶತಮಾನದ ಶಂಭವನಾಥ ಜಿನಮಂದಿರ ಇದೆ. ಸಾವಿರಕ್ಕೂ ಹೆಚ್ಚು ಶ್ರಾವಕ ಶ್ರಾವಕಿಯರ ಶ್ರದ್ಧೆಯ ಕೇಂದ್ರವಾಗಿದೆ. ಜೈನರ 24 ತೀರ್ಥಂಕರರಲ್ಲಿ 3ನೇಯವರಾದ 1008 ಶಂಭವನಾಥ ತೀರ್ಥಂಕರರ ಭವ್ಯ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿದೆ. ಜಿನಮಂದಿರದ ಎಡಭಾಗದಲ್ಲಿ ಎರಡು ನಿಷಿಧಿ ಕಲ್ಲುಗಳ ಶಿಲಾಶಾಸನವಿದೆ. ಇದರಲ್ಲಿ ಯಾದವ ಚಕ್ರವರ್ತಿ ವೀರಮಹಾದೇವರಾಯರ ಕಾಲದ ಸೂರಸ್ತಗಣದ ಮಾಧವಚಂದ್ರ ಭಟ್ಟಾರಕ ದೇವರ ಶಿಷ್ಯೆ ಗುಣಮತೌವ್ವೆ ಅವರು ಸಲ್ಲೇಖನ ಸ್ವೀಕರಿಸಿ ದೇಹತ್ಯಾಗ ಮಾಡಿರುವುದು ಉಲ್ಲೇಖವಾಗಿದೆ ಎನ್ನುತ್ತಾರೆ ಜೈನಮಿಲನದ ಅಹಿರಂತ ದುಂಡಣ್ಣನವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.