ADVERTISEMENT

ಹಾನಗಲ್‌: 4 ದಿನ ರಂಗಿನ ಹೋಳಿ ಹಬ್ಬ

25ನೇ ಕಾಮನಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 16:26 IST
Last Updated 24 ಮಾರ್ಚ್ 2024, 16:26 IST
ಹಾನಗಲ್ ಹೋಳಿ ಆಚರಣೆಯ ರಂಗಿನ ಬಿತ್ತಿಪತ್ರಗಳನ್ನು ಭಾನುವಾರ ತಾರಕೇಶ್ವರ ದೇವಸ್ಥಾನದಲ್ಲಿ ಕದಂಬ ಯುವಶಕ್ತಿಯ ಸದಸ್ಯರು ಬಿಡುಗಡೆ ಮಾಡಿದರು
ಹಾನಗಲ್ ಹೋಳಿ ಆಚರಣೆಯ ರಂಗಿನ ಬಿತ್ತಿಪತ್ರಗಳನ್ನು ಭಾನುವಾರ ತಾರಕೇಶ್ವರ ದೇವಸ್ಥಾನದಲ್ಲಿ ಕದಂಬ ಯುವಶಕ್ತಿಯ ಸದಸ್ಯರು ಬಿಡುಗಡೆ ಮಾಡಿದರು   

ಹಾನಗಲ್: ಕದಂಬ ಯುವಶಕ್ತಿಯ 25 ನೇ ವರ್ಷದ ಹಾನಗಲ್ ಹೋಳಿಯ ರಂಗಿನಾಟದ ಹಬ್ಬಕ್ಕೆ ಬುಧವಾರದಿಂದ ಚಾಲನೆ ಸಿಗಲಿದ್ದು, ಮಾರ್ಚ್‌ 31 ರಂದು ಬಣ್ಣ ಎರಚಾಟದ ಮೂಲಕ ಹೋಳಿಗೆ ತೆರೆ ಬೀಳಲಿದೆ ಎಂದು ಕದಂಬ ಯುವಶಕ್ತಿ ಅಧ್ಯಕ್ಷ ಗುರುರಾಜ ನಿಂಗೋಜಿ ಹೇಳಿದರು.

ಭಾನುವಾರ ಇಲ್ಲಿನ ತಾರಕೇಶ್ವರ ದೇವಸ್ಥಾನದಲ್ಲಿ ಹೋಳಿ ಆಚರಣೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು. 25 ನೇ ಕಾಮನಹಬ್ಬವನ್ನು ವಿಜೃಂಭಣೆಯಿಂದ ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತಿದೆ, ಹಲಗೆ ಬಾರಿಸುವುದು, ಮಿಮಿಕ್ರಿ, ನೃತ್ಯ ವೈಭವ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಅರ್ಥಪೂರ್ಣಗೊಳಿಸುವುದಾಗಿ ಹೇಳಿದರು.

ಕಾಮನ ಹಬ್ಬವನ್ನು ಕೇವಲ ಓಕಳಿಗೆ ಸೀಮಿತಗೊಳಿಸದೇ ನಮ್ಮ ಸಾಂಸ್ಕೃತಿಕ ವೈಭವವನ್ನು ಉಳಿಸುವ ಹಾಗೂ ಅದಕ್ಕೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು 1999 ರಿಂದ ಕದಂಬ ಯುವಶಕ್ತಿ ನಡೆಸಿಕೊಂಡು ಬಂದಿದೆ. ಈ ಬಾರಿ 25 ನೇ ವರ್ಷದ ಆಚರಣೆಯನ್ನು ವಿಶೇಷವಾಗಿ ಅಚರಿಸಲು ಸಮೀತಿ ಮುಂದಾಗಿದೆ ಎಂದರು.

ADVERTISEMENT

ಮಾರ್ಚ್‌ 27 ರಂದು ಬುಧವಾರ ಸಂಜೆ ಸಾಮೂಹಿಕ ಹಲಗೆ ಬಾರಿಸುವ ಕಾರ್ಯಕ್ರಮ ನಡೆಯಲಿದೆ. ಇಡೀ ಊರಿನ ಹಿರಿಯರು ಮಕ್ಕಳು ಕೂಡಿ ಹಲಗೆ ಬಾರಿಸುವರು. 28 ರಂದು ರಾತ್ರಿ 8ಕ್ಕೆ ಶಿರಸಿಯ ಸ್ಮಾರ್ಟ್‌ ಡ್ಯಾನ್ಸ್‌ ಅಕಾಡೆಮಿ ವತಿಯಿಂದ ಆರ್ಕೆಸ್ಟ್ರಾ ಹಾಗೂ ಮಿಮಿಕ್ರಿ ಕಾರ್ಯಕ್ರಮ ನಡೆಯಲಿವೆ.

29 ರಂದು ಶುಕ್ರವಾರ ಜೀವಂತ ರತಿ-ಕಾಮರನ್ನು ನಗಿಸುವ ಸ್ಪರ್ಧೆ ಇಲ್ಲಿನ ಗಾಂಧಿ ವೃತ್ತದಲ್ಲಿ ಆಯೋಜಿಸಲಾಗಿದೆ. ನಗಿಸಿದವರಿಗೆ ವಿಶೇಷ ಬಹುಮಾನವಿದೆ. ರಾತ್ರಿ 8ಕ್ಕೆ ಹರಿಹರದ ಎಸ್ಎಸ್‌ವಿ ಡ್ಯಾನ್ಸ್‌ ಕ್ಲಬ್ ಹಾಗೂ ಹಾನಗಲ್‌ದ ಸಮರ್ಥ ಮೆಲೋಡಿಸ್ ಅವರಿಂದ ಆರ್ಕೆಸ್ಟ್ರಾ ಹಾಗೂ ಮಿಮಿಕ್ರಿ ನಡೆಯಲಿವೆ.

30 ರಂದು  ಬೆಳಿಗ್ಗೆ 10ರಿಂದ ಪ್ರಸನ್ನ ಮಾರುತಿ ದೇವಸ್ಥಾನದ ಬಳಿ ಮಹಿಳೆಯರಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ, ವಾಟರ್‌ಬಾಲ್ ಗೇಮ್, ಸಂಗೀತ ಕುರ್ಚಿ, ರೈಸ್‌ಗೆನ್ ಮತ್ತು ಸ್ಪೂನ್ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ರಾತ್ರಿ 8 ಕ್ಕೆ ತಾರಕೇಶ್ವರ ದೇವಸ್ಥಾನದ ಎದುರಿನಲ್ಲಿ ವೇಷಭೂಷಣ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಂತರ ಹುಬ್ಬಳ್ಳಿಯ ಸುರೇಂದ್ರ ಜಾದೂಗಾರ ಅವರಿಂದ ಕಾರ್ಯಕ್ರಮ ಹಾಗೂ ಸ್ಥಳೀಯ ಕಲಾವಿದರಿಂದ ರಸಮಂಜರಿ ನೃತ್ಯ ಕಾರ್ಯಕ್ರಮ ನಡೆಯಲಿವೆ ಎಂದರು.

ಅದೇ ದಿನ ಸಂಜೆ ರಂಗಿನ ರಾತ್ರಿ ಅಂಗವಾಗಿ ಗಾಂಧಿ ವೃತ್ತದ ಸಿದ್ದಿವಿನಾಯಕ ದೇವಸ್ಥಾನದಿಂದ ವಿಶೇಷ ಟ್ಯಾಬ್ಲೊ ಪ್ರದರ್ಶನ ಹಾಗೂ ಆಕರ್ಷಕ ರಥೋತ್ಸವವನ್ನು ಒಳಗೊಂಡು ಮೆರವಣಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾರಕೇಶ್ವರ ದೇವಸ್ಥಾನ ತಲುಪುಲಿದೆ. ಭಾನುವಾರ ಇಡೀ ದಿನ ಬಣ್ಣ ಎರೆಚಾಟದ ಓಕುಳಿ ಹಬ್ಬ ನಡೆಯಲಿದೆ ಎಂದು ಗುರುರಾಜ ನಿಂಗೋಜಿ
ಹೇಳಿದರು.

ಕದಂಬ ಯುವಶಕ್ತಿಯ ಮೇಕಾಜಿ ಕಲಾಲ, ಕೃಷ್ಣ ಪೂಜಾರ, ದೀಪಕ ಕಲಾಲ, ಸುರೇಶ ನಾಗಣ್ಣನವರ, ಸಂತೋಷ ಸುಣಗಾರ, ಪರಶುರಾಮ ಖಂಡೂನವರ, ಗಜಾನನ ಕಾಟೇಕರ, ಪ್ರಕಾಶ ದಾಮೋದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.