ADVERTISEMENT

ಹೋಳಿ ಹಬ್ಬಕ್ಕೆ ಸಂಭ್ರಮದ ತೆರೆ: ಬಣ್ಣದಲ್ಲಿ ಮಿಂದೆದ್ದ ಹಾನಗಲ್ ಜನ

ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 7:01 IST
Last Updated 1 ಏಪ್ರಿಲ್ 2024, 7:01 IST
ಹಾನಗಲ್‌ನಲ್ಲಿ ಭಾನುವಾರ ನಡೆದ ಹೋಳಿ ಆಚರಣೆಯಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಯುವಕರು ಸಂಭ್ರಮಿಸಿದರು
ಹಾನಗಲ್‌ನಲ್ಲಿ ಭಾನುವಾರ ನಡೆದ ಹೋಳಿ ಆಚರಣೆಯಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಯುವಕರು ಸಂಭ್ರಮಿಸಿದರು   

ಹಾನಗಲ್: ನಾಲ್ಕು ದಿನಗಳ ಹಾನಗಲ್ ಹೋಳಿ ಆಚರಣೆಗೆ ಭಾನುವಾರ ತೆರೆ ಬಿದ್ದಿತು. ಇಲ್ಲಿನ ಚಾವಡಿ ಕ್ರಾಸ್‌ನಲ್ಲಿ ದೈವದ ಕಾಮಣ್ಣ ದಹನದ ಮೂಲಕ ಭಾನುವಾರ ಬೆಳಿಗ್ಗೆ ಪಟ್ಟಣದಲ್ಲಿ ಬಣ್ಣ ಎರಚಾಟದ ರಂಗಿನ ಹಬ್ಬ ಚಾಲನೆ ಪಡೆಯಿತು.

ಪಟ್ಟಣದ 18 ಸ್ಥಳಗಳಲ್ಲಿ ಪ್ರತಿಷ್ಠಾಪಿತ ಕಾಮಣ್ಣನನ್ನು ಒಂದೊಂದಾಗಿ ಹೋಳಿ ಹುಣ್ಣಿಮೆ ಸಮಿತಿಯವರು ದಹನ ಮಾಡಿದರು. ಹಲಗೆ ಬಾರಿಸುತ್ತ ಎಲ್ಲ ಸ್ಥಳಗಳಿಗೆ ಹೋದ ಯುವಕರ ಗುಂಪು ಕಾಮಣ್ಣ ದಹನ ಪ್ರಕ್ರಿಯೆ ಪೂರ್ಣಗೊಳಿಸಿದರು.

ಹಾನಗಲ್ ವಿವೇಕಾನಂದ ನಗರದ ಉದ್ಯಾನದಲ್ಲಿ ಅಳವಡಿಸಲಾಗಿದ್ದ ವಾಟರ್ ಫಾಲ್ಸ್‌ನಲ್ಲಿ ಮಹಿಳೆಯರು ಮಕ್ಕಳು ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು

ಬಣ್ಣದ ಹಬ್ಬಕ್ಕೂ ಮುನ್ನ ಬುಧವಾರದಿಂದಲೇ ಹೋಳಿ ಆಚರಣೆಗಳು ಪಟ್ಟಣದಲ್ಲಿ ಮೇಳೈಸಿದ್ದವು. ಭಾನುವಾರ ಬೆಳಿಗ್ಗೆಯಿಂದಲೇ ಬಣ್ಣ ಎರಚಾಟ ಆರಂಭವಾಗಿತ್ತು. ಬಣ್ಣದಲ್ಲಿ ಮಿಂದೆದ್ದ ಚಿಣ್ಣರು ಸಂಭ್ರಮಿಸಿದರು. ಯುವಕರು ಗುಂಪುಗುಂಪಾಗಿ ಹಲಗೆ ಬಾರಿಸಿ ನೃತ್ಯ ಮಾಡಿದರು. ಮಹಿಳೆಯರು ತಮ್ಮ ಬಡಾವಣೆಗಳಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಸಮಾನತೆ ಸಾರಿದರು. ಅಲ್ಲಲ್ಲಿ ಅಳವಡಿಸಲಾಗಿದ್ದ ನೀರಿನ ಕಾರಂಜಿಯಲ್ಲಿ ಕುಣಿದ ಜನರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟರು.

ADVERTISEMENT

ಹಾನಗಲ್ ಹೋಳಿ ನಾಲ್ಕು ದಿನ ನಡೆಯುವುದು ವಿಶೇಷ. ಇಲ್ಲಿನ ತಾರಕೇಶ್ವರ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳು ಸಂಜೆ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಮತ್ತು ವಿವಿಧ ಸ್ಪರ್ಧೆಗಳು ನಡೆದಿದ್ದವು.

ಹಾನಗಲ್‌ನಲ್ಲಿ ಶನಿವಾರ ಸಂಜೆ ರಂಗಿನರಾತ್ರಿಯ ಭವ್ಯ ಮೆರವಣಿಗೆಯಲ್ಲಿ ಶಿವನ ಬೃಹತ್ ವಿಗ್ರಹ ಗಮನಸೆಳೆಯಿತು.

ಶನಿವಾರ ಸಂಜೆ ಇಲ್ಲಿನ ಗಾಂಧಿ ವೃತ್ತದಿಂದ ಆರಂಭಗೊಂಡ ಭವ್ಯ ಮೆರವಣಿಗೆಯಲ್ಲಿ ವಿವಿಧ ಸೋಗು ಹಾಕಿದ್ದ ಯುವಕರು ತಮ್ಮ ಕಲೆ ಪ್ರದರ್ಶಿಸಿದರು. ರಾಣಿಗ್ಯಾ ನೃತ್ಯ ನೋಡುಗರ ಮನಗೆದ್ದಿತು.

ಹಾನಗಲ್‌ನಲ್ಲಿ ಶನಿವಾರ ಸಂಜೆಯ ಮೆರವಣಿಗೆಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಆಕರ್ಷಕವಾಗಿತ್ತು.

ಬೃಹತ್ ಶಿವನ ಪ್ರತಿಮೆ, ರಾಮ-ಲಕ್ಷ್ಮಣರ ರಕ್ಷಣೆಗಾಗಿ ಸಂಜೀವಿನಿ ಪರ್ವತ ಹೊತ್ತು ತರುವ ಹನುಮ, ಜಗ್ಗಿ ವಾಸುದೇವ ಗುರೂಜೀ ಕಲ್ಪನೆಯ ಶಿವದ ಮೂರ್ತಿ, ಬಾಲ ಕೃಷ್ಣ-ರಾಧೆ ತೂಗುವ ಉಯ್ಯಾಲೆ, ಅಯೋಧ್ಯೆ ರಾಮ ಮಂದಿರದ ಪ್ರತಿಮೆಗಳು ಮೆರವಣಿಗೆಯಲ್ಲಿ ಕಂಗೊಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.