ಹಾನಗಲ್: ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹೆಚ್ಚಿದ್ದು, ಇರುವ ವೈದರಷ್ಟೇ ಒತ್ತಡದಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತಪಾಸಣೆ ಹಾಗೂ ಚಿಕಿತ್ಸೆ ಪಡೆಯಲು ಜನರು ಗಂಟೆಗಟ್ಟಲೇ ಸರದಿಯಲ್ಲಿ ನಿಂತು ಸುಸ್ತಾಗುತ್ತಿದ್ದಾರೆ. ಮಕ್ಕಳು ಹಾಗೂ ವೃದ್ಧರ ಪಾಡು ಹೇಳತೀರದ್ದಾಗಿದೆ.
ಆಸ್ಪತ್ರೆಯಲ್ಲಿ 4 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹುದ್ದೆ ಮಂಜೂರಾಗಿದೆ. ಆದರೆ, ಸದ್ಯ ಒಬ್ಬ ವೈದ್ಯರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ 14 ವೈದ್ಯರ ಹುದ್ದೆಗಳು ಮಂಜೂರಾಗಿದ್ದು, 9 ವೈದ್ಯರಷ್ಟೇ ಕೆಲಸ ಮಾಡುತ್ತಿದ್ದಾರೆ. ಐವರು ವೈದ್ಯರ ಕೊರತೆ ಆರೋಗ್ಯ ಸೇವೆ ಮೇಲೆ ಪರಿಣಾಮ ಬೀರಿದೆ.
ಮಳೆಗಾಲ, ಚಳಿಗಾಳ ಹಾಗೂ ಬೇಸಿಗೆ ಕಾಲದಲ್ಲಿ ಚರ್ಮರೋಗ ಸಮಸ್ಯೆಗಳು ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಜನರು ಆಸ್ಪತ್ರೆಗೆ ಬರುತ್ತಿದ್ದು, ಚರ್ಮ ರೋಗ ತಜ್ಞರು ಇಲ್ಲದಿದ್ದರಿಂದ ಜನರು ಪರದಾಡುತ್ತಿದ್ದಾರೆ. ಬೇರೆ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.
ಎಲುಬು ಹಾಗೂ ಕೀಲು ವೈದ್ಯರ ಕೊರತೆಯೂ ಇದೆ. ಕೈ, ಕಾಲಿಗೆ ಪೆಟ್ಟಾದವರು ಹಾಗೂ ಎಲುಬು–ಕೀಲು ಸಮಸ್ಯೆಯಿಂದ ಬಳಲುತ್ತಿರುವವರು ಖಾಸಗಿ ಆಸ್ಪತ್ರೆಗೆ ಹೋಗುವ ಸ್ಥಿತಿ ಇದೆ.
ಆಸ್ಪತ್ರೆಯಲ್ಲಿ ಕಚೇರಿ ಸೂಪರಿಂಟೆಂಡೆಂಟ್ ಹುದ್ದೆ ಖಾಲಿ ಇದ್ದು, ಹಲವು ಕೆಲಸಗಳಿಗೆ ಹಿನ್ನೆಡೆ ಆಗಿದೆ. ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳೂ ಖಾಲಿ ಇವೆ.
ಶುಶ್ರೂಷಕ ವಿಭಾಗದ ಸೂಪರಿಂಟೆಂಡೆಂಟ್ ಹುದ್ದೆಯೂ ಖಾಲಿ ಇದೆ. ಪ್ರಯೋಗಾಲಯದ ಟೆಕ್ನಾಲಜಿಸ್ಟ್ ಹುದ್ದೆಯೂ ಖಾಲಿಯಿದೆ. 33 ಸಹಾಯಕ ಹುದ್ದೆಗಳಲ್ಲಿ 31 ಹುದ್ದೆ ಖಾಲಿ ಇರುವುದು ಆಸ್ಪತ್ರೆಯ ಸ್ವಚ್ಛತೆ ಹಾಗೂ ಇತರೆ ಕೆಲಸಗಳ ಮೇಲೆ ಪರಿಣಾಮ ಬೀರಿದೆ.
ಆಸ್ಪತ್ರೆಯಲ್ಲಿ ಒಟ್ಟು 85 ಹುದ್ದೆಗಳು ಮಂಜೂರಾಗಿವೆ. 33 ಹುದ್ದೆಗಳಲ್ಲಿ ಮಾತ್ರ ಕಾಯಂ ನೌಕರರಿದ್ದಾರೆ. 52 ಹುದ್ದೆಗಳು ಖಾಲಿ ಇವೆ. ನೌಕರರ ಕೊರತೆಯಿಂದ ಆಸ್ಪತ್ರೆಯಲ್ಲಿ ನೈರ್ಮಲ್ಯ ಹಾಗೂ ಇತರೆ ಸೌಕರ್ಯಗಳ ಕೊರತೆ ಕಾಡುತ್ತಿದೆ.
ತಿಂಗಳಲ್ಲಿ 25 ಸಾವಿರ ಜನರ ಭೇಟಿ: ಹಾನಗಲ್ ತಾಲ್ಲೂಕಿನಲ್ಲಿ ಡೆಂಗಿ, ತೀವ್ರ ಜ್ವರ ಹಾಗೂ ಇತರೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಒಂದೇ ತಿಂಗಳಿನಲ್ಲಿ ಆಸ್ಪತ್ರೆಗೆ 25 ಸಾವಿರ ಜನ ಭೇಟಿ ನೀಡಿ, ಚೀಟಿ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.
100 ಬೆಡ್ ಸಾಮರ್ಥ್ಯದ ಆಸ್ಪತ್ರೆಗೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಿದ್ದಾರೆ. ಈಗಿರುವ 100 ಬೆಡ್‌ಗಳ ವ್ಯವಸ್ಥೆ ಸಾಕಾಗುತ್ತಿಲ್ಲ. ಆಸ್ಪತ್ರೆಯನ್ನು 250 ಬೆಡ್ ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ, ಈ ಕನಸು ನನಸಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಡಿಕೆ ಈಡೇರುತ್ತಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ.
ನಿತ್ಯ 600ರಿಂದ 700 ರೋಗಿಗಳ ಭೇಟಿ ಸಾಮಾನ್ಯವಾಗಿದೆ. ಆಸ್ಪತ್ರೆಯ ಕಟ್ಟಡ ಉತ್ತಮ ಸ್ಥಿತಿಯಲ್ಲಿದೆ. ಬಹುತೇಕ ವೈದ್ಯಕೀಯ ಉಪಕರಣಗಳು ಲಭ್ಯವಿವೆ. ಆದರೆ, ವೈದ್ಯರು ಸೇರಿ ಸಿಬ್ಬಂದಿ ಕೊರತೆ ಹೆಚ್ಚು ಕಾಡುತ್ತಿದೆ.
ಶಸ್ತ್ರ ಚಿಕಿತ್ಸೆ ವಿಭಾಗ, ಅರವಳಿಕೆ ವ್ಯವಸ್ಥೆ, ರಕ್ತ ಪರೀಕ್ಷಾ ಘಟಕ, ಎಕ್ಸ್‌ರೇ ಘಟಕ, ಡಯಾಲಿಸೀಸ್ ಘಟಕ, ತುರ್ತು ಚಿಕಿತ್ಸಾ ಘಟಕಗಳಿವೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಪ್ರತಿಯೊಂದು ಘಟಕದಲ್ಲೂ ಕೆಲಸದಲ್ಲಿ ಹಿನ್ನೆಡೆ ಉಂಟಾಗುತ್ತಿದೆ. ಕೆಲ ಬಾರಿ ಉಪಕರಣಗಳು ಲಭ್ಯವಿದ್ದರೂ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ.
ರೋಗಿಗಳಿಗೆ ಔಷಧಿ ಉಚಿತವಾಗಿ ವಿತರಿಸುವ ಘಟಕದಲ್ಲಿ ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರು ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದಾರೆ. ಮೂರು ಹುದ್ದೆಗಳು ಖಾಲಿ ಇವೆ.
ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಇರುವ ಆಂಬುಲೆನ್ಸ್‌ಗಳು ಹಳೆಯದ್ದಾಗಿವೆ. ಪದೇ ಪದೇ ದುರಸ್ತಿ ಮಾಡಬೇಕಾದ ಸ್ಥಿತಿ ಇದೆ. ಇವುಗಳನ್ನು ಬದಲಾಯಿಸಿ ಹೊಸ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆಯೂ ಜನರು ಆಗ್ರಹಿಸುತ್ತಿದ್ದಾರೆ.
ಆಸ್ಪತ್ರೆಗೆ ಬರುವ ಜನರ ಸಂಖ್ಯೆ ಹೆಚ್ಚಿದೆ. ಇರುವ ವೈದ್ಯರು ಹಾಗೂ ಸಿಬ್ಬಂದಿ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಸದ್ಯ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹೆಚ್ಚಿನ ಬೆಡ್‌ಗಳ ಅಗತ್ಯವಿದೆ. ಇದಕ್ಕೆ ವ್ಯವಸ್ಥೆ ಮಾಡಿಕಕೊಳ್ಳಲಾಗಿದೆಡಾ.ಎಚ್.ಆರ್.ಬಸವರಾಜ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಆಸ್ಪತ್ರೆಗೆ ಎರಡು ಹೊಸ ಆಂಬುಲೆನ್ಸ್ ಬೇಕು. ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳ ಬಳಕೆಗೆ ಒಂದೇ ಕೊಳವೆಬಾವಿ ಇದ್ದು ಇನ್ನೊಂದು ಬಾವಿ ಕೊರೆಸಬೇಕುಅಣ್ಣಪ್ಪ ಚಾಕಾಪೂರ ಹಾನಗಲ್
‘ರಾತ್ರಿ ಹೊತ್ತಿನಲ್ಲಿ ಸಿಗದ ನೆರವು’ ಹಾನಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹೆಚ್ಚಿದೆ. ರಾತ್ರಿ ಹೊತ್ತಿನಲ್ಲಂತೂ ಸೂಕ್ತ ಸಮಯಕ್ಕೆ ವೈದ್ಯರು ಕೈಗೆ ಸಿಗುವುದಿಲ್ಲ. ತುರ್ತು ಆರೋಗ್ಯ ಸೇವೆಯೂ ಲಭ್ಯವಾಗುವುದಿಲ್ಲ’ ಎಂದು ಹಿರೇಹುಲ್ಲಾಳ ಗ್ರಾಮದ ಪುಟ್ಟಣಗೌಡ ಮಾಳಗಿ ಅಳಲು ತೋಡಿಕೊಂಡರು. ‘ಆಸ್ಪತ್ರೆಯಲ್ಲಿ ಸೌಕರ್ಯಗಳು ತಕ್ಕಮಟ್ಟಿಗೆ ಇವೆ.ಆದರೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ರೋಗಿಗಳು ನರಳುತ್ತಿದ್ದಾರೆ. ಸಿಬ್ಬಂದಿ ಕೊರತೆ ನೆಪದಲ್ಲಿ ಲಭ್ಯವಿರುವ ವೈದ್ಯರು ಸಹ ಹೆಚ್ಚು ಆಸಕ್ತಿಯಿಂದ ಚಿಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಒತ್ತಡ ಹೆಚ್ಚಿರುವುದಾಗಿ ಹೇಳಿ ಸುಮ್ಮನಾಗುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.