ADVERTISEMENT

ಹಾವೇರಿ | ಹೆಣ್ಣು ಮಗು ಅಕ್ರಮ ಹಸ್ತಾಂತರ: ನಾಲ್ವರ ವಿರುದ್ಧ ಎಫ್‌ಐಆರ್

ನಕಲಿ ದೃಢೀಕರಣ ಬಳಸಿ ಜನನ ಪ್ರಮಾಣ ಪತ್ರ- ಬ್ಯಾಡಗಿ ಠಾಣೆ ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 13:31 IST
Last Updated 16 ಜೂನ್ 2024, 13:31 IST
ಅಂಶುಕುಮಾರ್‌, ಎಸ್ಪಿ 
ಅಂಶುಕುಮಾರ್‌, ಎಸ್ಪಿ    

ಹಾವೇರಿ: ಹೆಣ್ಣು ಮಗುವನ್ನು ಅಕ್ರಮವಾಗಿ ಬೇರೆಯವರಿಗೆ ಹಸ್ತಾಂತರ ಮಾಡಿದ್ದ ಆರೋಪದಡಿ ನಾಲ್ವರ ವಿರುದ್ಧ ಬ್ಯಾಡಗಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕೃತ್ಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ ಅವರು ಹೆಣ್ಣು ಮಗು ಹಸ್ತಾಂತರ ಸಂಬಂಧ ದೂರು ನೀಡಿದ್ದಾರೆ. ಬ್ಯಾಡಗಿಯ ಇಸ್ಲಾಂಪೂರ ಓಣಿಯ ಜೈತುನಬಿ ಎಂ. ಸೌದಾಗರ, ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೇಹೊಸೂರಿನ ಕುಸುಮಾ, ದಾವಣಗೆರೆ ತಾಲ್ಲೂಕಿನ ದೊಡ್ಡಭಾತಿಯ ಮಂಜುಳಾ ದಾಸಪ್ಪನವರ ಹಾಗೂ ಅವರ ಪತಿ ರಾಜಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಜೈತುನಬಿ, ಆರೋಗ್ಯ ಇಲಾಖೆಯಿಂದ ಹೆರಿಗೆ ತರಬೇತಿ ಪಡೆದಿದ್ದಾರೆ. ಸುಮಾರು 40 ವರ್ಷಗಳಿಂದ ಸರಳ ಹಾಗೂ ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಹೆಸರು, ಪ್ರಶಸ್ತಿ ಪಡೆದಿದ್ದು ಬ್ಯಾಡಗಿ ಪುರಸಭೆಯ ಮಾಜಿ ಸದಸ್ಯರೂ ಆಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಆರೋಪಿ ಕುಸುಮಾ ಅವರಿಗೆ ಜನಿಸಿದ್ದ ಹೆಣ್ಣು ಮಗುವನ್ನು ಜೈತುನಬಿ ಅವರು ಮಂಜುಳಾ–ರಾಜಪ್ಪ ದಂಪತಿಗೆ ಅಕ್ರಮವಾಗಿ ಹಸ್ತಾಂತರಿಸಿದ್ದರೆಂಬ ಆರೋಪವಿದೆ. ಇದಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿದರು.

ದಂಪತಿ ಮನೆಯಲ್ಲಿ ಮಗು ಪತ್ತೆ:

‘ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಮಂಜುಳಾ ಹಾಗೂ ರಾಜಪ್ಪ ದಂಪತಿ ಮನೆಯಲ್ಲಿ 4 ತಿಂಗಳ ಹೆಣ್ಣು ಮಗು ಇರುವ ಮಾಹಿತಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಗೊತ್ತಾಗಿತ್ತು. ಅವರ ನೇತೃತ್ವದ ತಂಡ ಮನೆಗೆ ಹೋಗಿ ತಪಾಸಣೆ ನಡೆಸಿದಾಗ, ಮಗು ಪತ್ತೆಯಾಗಿತ್ತು. ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ ಸರ್ಕಾರಿ ದತ್ತು ಸಂಸ್ಥೆಯ ಸುಪರ್ದಿಗೆ ನೀಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಗು ವಿಚಾರವಾಗಿ ದಂಪತಿಯನ್ನು ವಿಚಾರಣೆ ನಡೆಸಿದಾಗ, ಬ್ಯಾಡಗಿಯ ಜೈತುನಬಿ ಹೆಸರು ಗೊತ್ತಾಗಿದೆ. ನಂತರ, ಮಗುವಿನ ತಾಯಿ ಕುಸುಮಾ ಬಗ್ಗೆಯೂ ಮಾಹಿತಿ ಲಭ್ಯವಾಯಿತು. ತಮಗೆ ಮಗುವಾಗಿದೆಯೆಂದು ನಕಲಿ ದೃಢೀಕರಣ ಪತ್ರ, ಬ್ಯಾಡಗಿ ಪುರಸಭೆಯಿಂದ ಮಗುವಿನ ಜನನ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದ್ದರು. ಒಟ್ಟಾರೆ ಎಲ್ಲರೂ ಸೇರಿಕೊಂಡು ಕಾನೂನು ವಿರುದ್ಧವಾಗಿ ಮಗುವನ್ನು ಅಕ್ರಮವಾಗಿ ಹಸ್ತಾಂತರ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜೊತೆಗೆ, ಹಣದ ವ್ಯವಹಾರವೂ ನಡೆದಿರುವ ಶಂಕೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ’ ಎಂದು ಮೂಲಗಳು ಹೇಳಿವೆ.

ಜೈತುನಬಿ ಸೌದಾಗರ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇದೊಂದು ಜಾಮೀನು ಸಹಿತ ಪ್ರಕರಣ. ಮಾಹಿತಿ ಕಲೆಹಾಕುತ್ತಿದ್ದು ಪುರಾವೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು
–ಅಂಶುಕುಮಾರ್ ಹಾವೇರಿ ಜಿಲ್ಲಾ ಎಸ್ಪಿ
ಮನೆಯಲ್ಲಿ ಹೆರಿಗೆ ನಕಲಿ ದೃಢೀಕರಣ ಪತ್ರ
‘ಆರೋಪಿ ಕುಸುಮಾ ಅವರು ಜನವರಿ 4ರಂದು ಜೈತುನಬಿ ಮನೆಯಲ್ಲಿ ಹೆರಿಗೆ ಮಾಡಿಸಿದ್ದರು. ಹೆಣ್ಣು ಮಗು ಜನಿಸಿತ್ತು. ಮಗು ಬೇಡವೆಂದು ಹೇಳಿದ್ದ ಕುಸುಮಾ ಯಾರಾದರೂ ಸಾಕುವವರಿಗೆ ನೀಡುವಂತೆ ತಿಳಿಸಿದ್ದರು. ಮಂಜುಳಾಗೆ ಕರೆ ಮಾಡಿದ್ದ ಜೈತುನಬಿ ‘ಹೆಣ್ಣು ಮಗು ಜನನವಾಗಿದೆ. ಅವರಿಗೆ ಬೇಡವಂತೆ. ನೀವು ಬೇಕಾದರೆ ಬಂದು ಮಗುವನ್ನು ತೆಗೆದುಕೊಂಡು ಹೋಗಿ’ ಎಂದೂ ಹೇಳಿದ್ದರು. ಆವಾಗಲೇ ಮಂಜುಳಾ–ರಾಜಪ್ಪ ಜೈತುನಬಿ ಮನೆಗೆ ತೆರಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಮಗು ತೆಗೆದುಕೊಂಡು ಹೋದರೆ ಸಮಸ್ಯೆ ಇಲ್ಲವೆ’ ಎಂಬು ಮಂಜುಳಾ ಕೇಳಿದ್ದರು. ‘ಯಾವುದೇ ಸಮಸ್ಯೆ ಇಲ್ಲ. ನಿಮಗೆ ಮಗು ಹುಟ್ಟಿದೆ ಎಂದು ದೃಢೀಕರಣ ಪತ್ರ ನೀಡುತ್ತೇನೆ. ಅದನ್ನು ತೆಗೆದುಕೊಂಡು ಹೋಗಿ’ ಎಂದು ಜೈತುನಬಿ ಹೇಳಿದ್ದರು. ಬಳಿಕವೇ ಮಂಜುಳಾ–ರಾಜಪ್ಪ ಮಗುವನ್ನು ತೆಗೆದುಕೊಂಡು ಮನೆಯಲ್ಲಿ ಸಾಕುತ್ತಿದ್ದರು. ಜೊತೆಗೆ ಬ್ಯಾಡಗಿ ಪುರಸಭೆಯಿಂದ ಮಗುವಿನ ಜನನ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.