ಶಿಗ್ಗಾವಿ: ಶಿಶುವಿನಹಾಳ ಶರೀಫ್ ಹಾಗೂ ಗುರು ಗೋವಿಂದ ಭಟ್ಟರ ಭಾವೈಕ್ಯತೆಯ ಗುರು–ಶಿಷ್ಯ ಪರಂಪರೆಯ ಇತಿಹಾಸವುಳ್ಳ ತಾಲ್ಲೂಕಿನ ಹೊಟ್ಟೂರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಇಲ್ಲದಿದ್ದರೂ ಹಿಂದೂಗಳೇ ಪ್ರತಿ ವರ್ಷವೂ ಮೊಹರಂ ಆಚರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮೊಹರಂ ಆಚರಣೆ ಆರಂಭವಾಗಿದ್ದು, ಇದೊಂದು ಹಿಂದೂ–ಮುಸ್ಲಿಂ ಭಾವ್ಯಕತೆಯ ಹಬ್ಬವೆಂಬುದು ವಿಶೇಷ. ಶಿಗ್ಗಾವಿ ತಾಲ್ಲೂಕಿನಲ್ಲಿ ಇಂದಿಗೂ ಹಿಂದು–ಮುಸ್ಲಿಂ ಸಮುದಾಯದವರು ಒಟ್ಟಿಗೆ ಸೌಹಾರ್ಧಯುತ ಬದುಕು ನಡೆಸುತ್ತಿದ್ದಾರೆ. ಹೀಗಾಗಿ, ಮೊಹರಂ ಹಬ್ಬವನ್ನು ಪ್ರತಿ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರ ಜೊತೆಯಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುತ್ತಿದ್ದಾರೆ.
ಹೊಟ್ಟೂರ ಗ್ರಾಮದಲ್ಲಿ ಮುಸ್ಲಿಂ ಸಮುದಾಯಗಳಿಲ್ಲ. ಗ್ರಾಮದಲ್ಲಿನ ಹಿಂದೂಗಳೇ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ಗ್ರಾಮದ ಬಸವಣ್ಣ ದೇವರ ಹತ್ತಿರದ ಖಾಲಿ ಜಾದಲ್ಲಿ ಪೆಂಡಾಲ ಹಾಕಿ ದೇವರ ಪಂಜ, ಆಲಂ ಮತ್ತು ತಾಜಿಯುತಗಳನ್ನು ಕೂರಿಸಿದ್ದಾರೆ.
ಜುಲೈ 16 ಮಂಗಳವಾರ ಕತ್ತಲ ರಾತ್ರಿ ಆಚರಿಸುವ ಪದ್ಧತಿ ಇದೆ. ಅಂದು ಪ್ರತಿ ಮನೆಯಿಂದ ನೈವೆದ್ಯ, ಸಕ್ಕರೆಯನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಲೊಬಾನು ಹಾಕಿ ಪೂಜೆ ಮಾಡಲಾಗುತ್ತದೆ.
ಮರುದಿನ ಹಬ್ಬದ ಕೊನೆಯ ದಿನ ಗ್ರಾಮದ ಪ್ರತಿಯೊಂದು ಓಣಿಗಳಲ್ಲಿ ಡೋಲಿಗಳ ಮೆರವಣಿಗೆ ನಡೆಯಲಿದೆ. ಅಂದು ಪ್ರತಿ ಮನೆಯ ಕುಟುಂಬ ಸದಸ್ಯರು ದೇವರಿಗೆ ಸಕ್ಕರೆ ನೀಡುತ್ತಾರೆ. ಸಂಜೆ ಹಳ್ಳ ಹಾಗೂ ಹೊಂಡಗಳಿಗೆ ಹೋಗಿ ಮೈ ತೊಳೆದುಕೊಂಡು ಬರುವ ಸಂಪ್ರದಾಯವಿದೆ ಎಂದು ಗ್ರಾಮ ಪರಶುರಾಮ ತಳವಾರ, ಮಂಜುನಾಥ ಮಲ್ಲಾಡದ, ಪರಶುರಾಮ ಕೋಟಿ, ಶಿವರಾಜ ಮಲ್ಲಾಡದ ಹೇಳಿದರು.
ಹೊಟ್ಟೂರಲ್ಲಿ ಮುಸ್ಲಿಂರಿಲ್ಲದ ಕಾರಣ ಅಜ್ಜ, ಮುತ್ತಜ್ಜನ ಕಾಲದಿಂದ ಮೊಹರಂ ಹಬ್ಬವನ್ನು ಹಿಂದೂಗಳೇ ಆಚರಿಸಿಕೊಂಡು ಬರುತ್ತಿದ್ದಾರೆ. ಅಲ್ಲಾಹ, ಈಶ್ವರ ಒಂದೇ ಎಂಬ ಮನೋಭಾವನೆಯನ್ನು ಪೂರ್ವಜರು ನಮ್ಮಲ್ಲಿ ಮೂಡಿಸಿದ್ದಾರೆ. ಮೊಹರಂ ಕೊನೆಯ ದಿನ ಹತ್ತಿರದ ನಾರಾಯಣಪುರ ಗ್ರಾಮದಲ್ಲಿನ ಮೌಲಾಲಿಗಳನ್ನು ಕರೆತಂದು ಪೂಜೆ ಸಲ್ಲಿಸಿ ಕಳುಹಿಸುವ ಪದ್ಧತಿಯೂ ಇದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.