ADVERTISEMENT

ಹಾವೇರಿ | ದುಂಡಶಿ ಆಸ್ಪತ್ರೆಗೆ ಕಾಡುತ್ತಿವೆ ಹಲವು ಸಮಸ್ಯೆ

ಆಂಬುಲೆನ್ಸ್‌, ಹಾಸಿಗೆ, ಕುಳಿತುಕೊಳ್ಳಲು ಆಸನಗಳು ಇಲ್ಲದೇ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 4:53 IST
Last Updated 22 ಸೆಪ್ಟೆಂಬರ್ 2023, 4:53 IST
ದುಂಡಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರ ನೋಟ
ದುಂಡಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರ ನೋಟ   

–ಪುಟ್ಟಪ್ಪ ಲಮಾಣಿ

ತಡಸ (ದುಂಡಶಿ): ದುಂಡಶಿ ಹೋಬಳಿ ಕೇಂದ್ರವಾಗಿದ್ದು ಗ್ರಾಮೀಣ ಪ್ರದೇಶದ ಬಡ ಜನರು ಆರೋಗ್ಯ ತಪಾಸಣೆ ಮಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೊರೆ ಹೋಗುತ್ತಿದ್ದಾರೆ. ಆದರೆ ಇಲ್ಲಿಯ ಹಲವು ಸಮಸ್ಯೆಗಳಿಂದಾಗಿ ಜನ ಸಾಮಾನ್ಯರಿಗೆ ಸೂಕ್ತ ಸೇವೆ ದೊರೆಯದಂತೆ ಆಗಿದೆ.

ಸರಿಯಾದ ಸಮಯಕ್ಕೆ ಬಾರದ ಸಿಬ್ಬಂದಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಸಿಬ್ಬಂದಿ ಬಾರದೇ ರೋಗಿಗಳು ನರಳುವ ಸ್ಥಿತಿ ಇದೆ. ರಾತ್ರಿ ಸಮಯದಲ್ಲಿ ವೈದ್ಯರು ಇಲ್ಲದೇ ಕೇವಲ ನರ್ಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಂಭೀರ ಆರೋಗ್ಯದ ಏರು ಪೇರಾಗಿ ಶಿಗ್ಗಾವಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹಲವು ಮರಣಗಳು ಸಂಭವಿಸಿವೆ ಎಂದು ಇಲ್ಲಿಯ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಆಂಬುಲೆನ್ಸ್ ಇಲ್ಲ: ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇರುತ್ತದೆ. ಆದರೆ ಇಲ್ಲಿ ತುರ್ತು ಸೇವೆಗಾಗಿ ಖಾಸಗಿ ವಾಹನದ ಮೊರೆ ಹೋಗಬೇಕಾಗಿದೆ ಎಂದು ವಿನಾಯಕ ದೂರಿದ್ದಾರೆ.

ಆಸನಗಳೂ ಇಲ್ಲ: ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗೆ ಆರೈಕೆ ಮಾಡಲು ಸೂಕ್ತ ಹಾಸಿಗೆ ವ್ಯವಸ್ಥೆ ಇಲ್ಲಿಲ್ಲ. ಕೆಲವು ರೋಗಿಗಳು ನಿಂತುಕೊಂಡೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಬರುವ ಹೋರ ರೋಗಿಗಳು ಕೂರಲು ಆಸನಗಳು ಇಲ್ಲದೇ ಪರದಾಡುವಂತಾಗಿದೆ.

ಒಂದೇ ಶೌಚಾಲಯ: ಒಂದೇ ಶೌಚಾಲಯ ಇದ್ದು, ಅದರಲ್ಲಿ ಕೇವಲ ಹೆಂಗಸರಿಗೆ ಮಾತ್ರ ಅವಕಾಶವಿದೆ. ಪುರುಷರಿಗೆ ಬಯಲು ಬಹಿರ್ದೆಸೆಯೇ ಗತಿ ಎಂದು ಸಂತೋಷ ರಾಠೋಡ ದೂರಿದ್ದಾರೆ.

‘ಸರ್ಕಾರವು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ನಿರ್ಮಿಸಿದೆ. ಆದರೆ ಅದರಲ್ಲಿ ಕಾರ್ಯ ನಿರ್ವಹಿಸಲು ವಿಳಂಬ ಮಾಡುತ್ತಿದೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಚಿಕಿತ್ಸೆಗೆ ಬಂದ ಬಡ ಜನರು ಇಡೀ ದಿನ ಆಸ್ಪತ್ರೆಯಲ್ಲೇ ಕಳೆಯಬೇಕಾಗುತ್ತದೆ’ ಎಂದು ಭ್ರಷ್ಟಾಚಾರ ನಿರ್ಮೂಲನ ಸಮಿತಿಯ ಅಧ್ಯಕ್ಷ ಈರಣ್ಣ ಸಾಮಾಗೊಂಡ ಆರೋಪಿಸಿದ್ದಾರೆ.

ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಯಲು ಸರ್ಕಾರ ಹಲವು ಯೋಜನೆ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಅವುಗಳ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿಷ್ಕಾಳಜಿ ತೋರುತ್ತಿರುವುದು ಕಂಡು ಬರುತ್ತಿದೆ ಎಂದು ವಿನಾಯಕ ಕಿಡಿಕಾರಿದರು.

ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಒಂದು ತಿಂಗಳಲ್ಲಿ ಕಾರ್ಯಾರಂಭ ಆಗುತ್ತದೆ. ಆಂಬುಲೆನ್ಸ್ ನೀಡಲು ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ.
–ಡಾಸತೀಶ ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.