ಹಿರೇಕೆರೂರು: ‘ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ತಾಲ್ಲೂಕಿನಲ್ಲಿ ಹಾಳಾದ ಮನೆಗಳ ಸರ್ವೆಯಲ್ಲಿ ಅಧಿಕಾರಿಗಳು ಖಾಳಜಿ ವಹಿಸದೇ ಬೇಜವಾಬ್ದಾರಿತನ ತೋರಿದ್ದಾರೆ‘ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.
ಪಟ್ಟಣದ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019-20 ರಿಂದ 2022-23 ರ ವರೆಗೆ ತಾಲ್ಲೂಕಿನಲ್ಲಿ ಒಟ್ಟು 1822 ಮನೆಗಳಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒಟ್ಟು ₹45.69 ಕೋಟಿ ನೀಡಲಾಗಿತ್ತು. ಆದರೆ 2024ರಲ್ಲಿ ಕೇವಲ 28 ಮನೆಗಳಿಗೆ ₹30.80ಲಕ್ಷ ನೀಡಲಾಗಿದೆ’ ಎಂದು ದೂರಿದರು.
‘ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆಯಾಗಿ ತಾಲ್ಲೂಕಿನಾದ್ಯಂತ ಹೆಚ್ಚು ಹಾನಿಯಾಗಿದ್ದರೂ ಅಧಿಕಾರಿಗಳು ಸರಿಯಾದ ರೀತಿ ಸಮೀಕ್ಷೆ ಮಾಡದೇ, ನಿರ್ಲಕ್ಷ ಧೋರಣೆಯಿಂದ ಬಡವರಿಗೆ ಅನ್ಯಾಯ ಮಾಡಲಾಗಿದೆ. ಸದ್ಯ ನೀಡಿರುವ ಹಣವೂ ಸಹ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಬಂದ ಹಣವಾಗಿದೆ. ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರ ವಸತಿ ಯೋಜನೆಗೆ ಹಣ ನೀಡಿಲ್ಲ, ಸದ್ಯ ತಾಲ್ಲೂಕಿನದ್ಯಾಂತ ನಿರಂತರ ಮಳೆ ಸುರಿಯುತ್ತಿದೆ. ಈಗಲಾದರೂ ಅಧಿಕಾರಿಗಳು ಸರಿಯಾದ ಸಮೀಕ್ಷೆ ನಡೆಸಿ ಮಳೆಯಿಂದಾಗುವ ಹಾನಿಗಳಿಗೆ ಪರಿಹಾರ ನೀಡಬೇಕು‘ ಎಂದು ಒತ್ತಾಯಿಸಿದರು.
‘ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಹಿರೇಕೆರೂರ ತಾಲ್ಲೂಕಿಗೆ 563 ಮನೆಗಳು ಮಂಜೂರಾಗಿದ್ದು,ಈ ಮನೆಗಳನ್ನು 2018ರ ಸಾಮಾಜಿಕ ಆರ್ಥಿಕ ಜಾತಿ ಗಣತಿಯ ಆಧಾರದ ಮೇಲೆ ಹಂಚಿಕೆಯಾಗಿವೆ. ಇಲ್ಲಿ ಹಂಚಿಕೆಯಾದ ಫಲಾನುಭವಿಗಳನ್ನು ಬದಲಾವಣೆ ಮಾಡಲು ಬರುವದಿಲ್ಲ. ಒಂದು ವೇಳೆ 2018ರ ನಂತರ ಅವರು ಬೇರೆ ಯೋಜನೆಯಲ್ಲಿ ವಸತಿ ಸೌಲಭ್ಯ ಪಡೆದಿದ್ದಲ್ಲಿ ಅವರಿಗೆ ಮನೆ ರದ್ದಾಗುತ್ತದೆ. ಅಂತಹ ಮನೆಗಳನ್ನು ಈ ಪಟ್ಟಿಯಲ್ಲಿ ಜೇಷ್ಠತೆ ಆಧಾರದ ಮೇಲೆ ಹಂಚಿಕೆಯಾಗಲಿವೆ‘ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ, ಶಿವಶಂಕರ ಕುಸಗೂರ, ಬಸನಗೌಡ ಕರೇಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.