ರಟ್ಟೀಹಳ್ಳಿ: ಪಟ್ಟಣದ ಪ್ರಿಯದರ್ಶಿನಿ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ಗುರುವಾರ ಹಾವೇರಿ ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಹಾಗೂ ತಂಡದ ಆಯ್ಕೆ ನಡೆಯಿತು.
ಗುಡ್ಡಗಾಡು ಓಟವನ್ನು ಹಾವೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪ್ರಕಾಶ ಬಾರ್ಕಿ ಉದ್ಘಾಟಿಸಿದರು.
ಪಟ್ಟಣದ ಮಹಾಲಕ್ಷ್ಮಿ ವೃತ್ತದಿಂದ ಭಗತಸಿಂಗ್ ಸರ್ಕಲ್, ಹಳೇ ಬಸಸ್ಟ್ಯಾಂಡ್, ಮಾಗರ್ವಾಗಿ ಸಣ್ಣಗುಬ್ಬಿ, ಮಾದಾಪುರ, ದೊಡ್ಡಗುಬ್ಬಿ, ಗ್ರಾಮಗಳ ಮೂಲಕ ಪ್ರಿಯದರ್ಶಿನಿ ಕಾಲೇಜುವರೆಗೆ ಕ್ರೀಡಾಪಟುಗಳು ಓಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾವೇರಿ ಜಿಲ್ಲಾ ವಿಶ್ವವಿದ್ಯಾಲಯದ ಕುಲಪತಿಗಳಾದ ಸುರೇಶ ಜಂಗಮಶೆಟ್ಟಿ ಮಾತನಾಡಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಸ್ಪೂರ್ತಿ ಮೆರೆಯುವುದು ದೊಡ್ಡ ಸಾಧನೆ . ಕ್ರೀಡಾಪಟುಗಳು ಮುಖ್ಯವಾಗಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಗುರಿ ಸಾಧನೆಗೆ ಪಣ ತೊಡಬೇಕು ಎಂದರು.
ಕುಲಸಚಿವ ಎಸ್.ಜಿ.ಬಾಗಲಕೋಟಿ ಅವರು, ‘ಹಾವೇರಿ ವಿಶ್ವವಿದ್ಯಾಲಯದ ಅಡಿಯಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದು, ಮುಂದೆ ವಿಶ್ವವಿದ್ಯಾಲಯಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಹಾವೇರಿ ಜಿಲ್ಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಸುಮಾರು 14 ಕಾಲೇಜುಗಳಿಂದ 69 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಪ್ರಾಚಾರ್ಯ ರಾಘವೇಂದ್ರ ಎ.ಜಿ. ಅಧ್ಯಕ್ಷತೆ ವಹಿಸಿದ್ದರು. ಸಿ.ಎನ್. ಸೊರಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಯು.ಎಂ.ಸಾಲಿ, ಡಾ.ಲೋಕೇಶಕುಮಾರ, ತೀರ್ಪುಗಾರರಾಗಿ ಸುರೇಶ ಮುದಿಯಾಲ, ಇ.ಎನ್. ಪೂಜಾರ, ರಾಧಿಕಾ ಮೆಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.