ADVERTISEMENT

ಜೈನ ದೀಕ್ಷೆ; ಅದ್ಧೂರಿ ಮೆರವಣಿಗೆ

ಕಾರ್ಯಕ್ರಮಕ್ಕೆ ಕುಂಭಮೇಳ, ಕಲಾತಂಡಗಳ ಮೆರಗು: ನೂರಾರು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:14 IST
Last Updated 21 ನವೆಂಬರ್ 2022, 7:14 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಜೈನ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮೆರವಣಿಗೆ ಜರುಗಿತು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಜೈನ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮೆರವಣಿಗೆ ಜರುಗಿತು   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಜವಳಿ ಉದ್ಯಮಿ ಪಾರಸಮಲ ಹುಕುಮಿಚಂದ ಪುತ್ರ ದಿನೇಶಕುಮಾರ, ಸೊಸೆ ಕಂಚನದೇವಿ, ಮೊಮ್ಮಗ ರೋನಕಕುಮಾರ ಅವರ ಜೈನ ಭಗವತಿ ದೀಕ್ಷೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮೆರವಣಿಗೆ ಹಾಗೂ ವಿದಾಯ ಕಾರ್ಯಕ್ರಮ ಜರುಗಿತು.

ದೀಕ್ಷೆ ಮೆರವಣಿಗೆ ವಿಮಲನಾಥ ಜೈನ ಶ್ವೆತಾಂಬರ ಮಂದಿರದಿಂದ ಆರಂಭವಾಗಿ ಪೇಟೆ ಮುಖ್ಯರಸ್ತೆ, ಸಿಂಪಿಗಲ್ಲಿ, ಹಳೆನಾಡಕಚೇರಿ ರಸ್ತೆ, ಕೊಟ್ಟಿಗೇರಿ, ಅರಳೆಲೆಮಠದ ಓಣಿ, ರೇಣುಕಾ ಚಿತ್ರಮಂದಿರ ರಸ್ತೆ, ಮಾಗಿ ಕೆರೆ ರಸ್ತೆ, ಶಹಬಜಾರ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಭ್ರಮದಿಂದ ಸಂಚರಿಸಿತು.

ಮಹಿಳೆಯರ ಕುಂಭ ಮೇಳ, ಝಾಂಜ್ ಮೇಳಗಳು, ಬಣ್ಣ, ಬಣ್ಣದ ಬಾವುಟ ಮೆರವಣಿಗೆಗೆ ಮೆರಗು ನೀಡಿದವು.

ADVERTISEMENT

ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ದೇಸಾಯಿಮಠದ ಮಹಾಂತ ಸ್ವಾಮೀಜಿ, ಸದಾಶಿಪೇಟೆ ಶರಣ ಬಸವೇಶ್ವರ ದಾಸೋಹಮಠದ ಶಿವದೇವ ಶರಣರು, ಕೆಂಡದಮಠದ ಸಿದ್ದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಂತರ ಪಟ್ಟಣದ ಫಕ್ಕೀರೇಶ್ವರ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆದ ದೀಕ್ಷಾರ್ಥಿಗಳ ವಿದಾಯ ಕಾರ್ಯಕ್ರಮದಲ್ಲಿ ದಾವಣಗೆರೆ ನವಯುವಕ ಮಂಡಳಿ ಅಧ್ಯಕ್ಷ ಉತ್ತಮಬಾಯಿ ಮಾತನಾಡಿ, ಸಂಸಾರದ ಮೋಹ ತ್ಯಜಿಸಿ ಭಗವಾನ ಮಹಾವೀರರು ತೋರಿಸಿದ ಮೋಕ್ಷ ಮಾರ್ಗದ ಪಥದಲ್ಲಿ ಭಗವತಿ ದೀಕ್ಷೆಯನ್ನು ಸ್ವೀಕರಿಸಲಾಗುತ್ತಿದೆ. ಹೀಗಾಗಿ ದಿಕ್ಷಾ ಕಾರ್ಯಕ್ರಮ ವೈಭವದಿಂದ ಹಮ್ಮಿಕೊಳ್ಳಲಾಗಿದೆ. ಮೋಕ್ಷಕ್ಕಾಗಿ ದೇವರ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಮನುಕುಲದ ಬದುಕು ಕ್ಷಣಿಕವಾಗಿದ್ದು, ದೇವರ ಆರಾಧನೆಯಲ್ಲಿ ಬದುಕು ಕಳೆದಾಗ ಮಾತ್ರ ಜೀವನ ಸಾರ್ಥಕತೆ ಪಡೆಯಲು ಸಾಧ್ಯವಿದೆ. ದಿಕ್ಷೆ ಪಡೆಯುವ ಮೂಲಕ ಇತರರಿಗಾಗಿ ನಾನು, ನಾನು, ನನ್ನದು ಎಂಬ ಭಾವನೆ ಬಿಡುವುದು ಎಂದರು.‌

ಮುಖಂಡರಾದ ಸುರೇಶಪ್ಪ ಹಂಡೆ, ಡಾ.ಆರ್.ಎಸ್.ಅರಳೆಲೆಮಠ, ಸಾಹಿತಿ ಶಿವಾನಂದ ಮ್ಯಾಗೇರಿ, ದಿವಾಕರ ವರ್ಣೇಕರ, ಎ.ಕೆ.ಆದವಾನಿಮಠ, ಬಸವರಾಜ ನಾರಾಯಣಪುರ, ಮಂಜುನಾಥ ಮೇಲಗೇರಿ, ಚಂದ್ರು ಕೋರಿ, ರಮೇಶ ನರೆಗಲ್ಲ, ಸಂಜೀವ ಜೈನ, ಕಿರಣ ಜೈನ, ಪ್ರವೀಣ ಜೈನ, ಬಾಬುಲಾಲ್ ಜೈನ, ಅಮೃತಲಾಲ್ ಜೈನ, ರಾಜು ಜೈನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.