ADVERTISEMENT

ಕುನ್ನೂರು: ಜೆಜೆಎಂ ಕಾಮಗಾರಿ ಕಳಪೆ

ಕಾಮಗಾರಿಗೆ ಕಳಪೆ ಮಟ್ಟದ ಸಾಮಗ್ರಿಗಳ ಬಳಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:19 IST
Last Updated 22 ಮೇ 2024, 5:19 IST
ಕುನ್ನೂರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಕಾಲುವೆ ತೆಗದು ಅರ್ಧಕ್ಕೆ ನಿಂತ ಕಾಮಗಾರಿ
ಕುನ್ನೂರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಕಾಲುವೆ ತೆಗದು ಅರ್ಧಕ್ಕೆ ನಿಂತ ಕಾಮಗಾರಿ   

ತಡಸ: ಸಮೀಪದ ಕುನ್ನೂರು ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಇಲ್ಲಿನ ಅನೇಕ ಮನೆಯ ನಳಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ನೀರಿನ ಅಭಾವ ಹೆಚ್ಚಿದೆ.

ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಪೂರೈಸಲು 2021–22ನೇ ಸಾಲಿನಲ್ಲಿ ₹86 ಲಕ್ಷ ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಪೈಪ್‌ಲೈನ್ ಬಳಸಿಲ್ಲ. ಚರಂಡಿಯಲ್ಲೇ ಪೈಪ್‌ಲೈನ್ ಎಳೆಯಲಾಗಿದೆ. ಪೈಪ್‌ಲೈನ್ ಒಡೆದರೆ ಚರಂಡಿ ನೀರು ಪೈಪ್‌ಲೈನ್‌ಗೆ ಬಂದು ಅದೇ ನೀರನ್ನು ಕುಡಿಯುವ ಸ್ಥಿತಿ ಬರುತ್ತದೆ.

ಕಾಮಗಾರಿಯಲ್ಲಿ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಿದ್ದು, ಈಗಾಗಲೇ ಅಲ್ಲಲ್ಲಿ ಶಿಥಿಲಗೊಂಡಿವೆ. ಅಸಮರ್ಪಕ ನಿರ್ವಹಣೆಯಿಂದ ಬೀದಿ ಬೀದಿಗಳಲ್ಲಿ ಶುದ್ಧ ಕುಡಿಯುವ ನೀರು ಪೋಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಪೈಪ್‌ಲೈನ್‌ನಿಂದ ನಳಗಳಿಗೆ ಹೆಚ್ಚಿನ ಕುಡಿಯುವ ನೀರು ಹೋಗದಂತೆ ಸ್ಪೀಡ್ ಬ್ರೇಕ್‌ರ್ ಹಾಕಿದ್ದಾರೆ. ಅದನ್ನು ಸರಿಯಾಗಿ ಹಾಕದ ಕಾರಣ ಕೆಲವರಿಗೆ ಕುಡಿಯುವ ನೀರು ಕಡಿಮೆ ಬಂದರೆ, ಇನ್ನು ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನೂರು, ಮಮದಾಪುರ, ಹಳವ ತರ್ಲಘಟ್ಟ, ಹೊನ್ನಾಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹಾಗೂ ಕಾಮಗಾರಿ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಆಯಾ ಗ್ರಾಮಗಳ, ಯುವಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

6–7 ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ 100 ಮೀಟರ್ ನೀರು ಇಂಗು ಕಾಲುವೆಯನ್ನು ನಿರ್ಮಿಸಲು ಮುಂದಾದರು. ಆದರೆ ಚರಂಡಿ ನಿರ್ಮಿಸಲು ಇನ್ನೂವರೆಗೂ ಮುಂದಾಗಿಲ್ಲಾ. ಇದು ವಾಹನಗಳ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಶೀಘ್ರವೇ ಚರಂಡಿ ನಿರ್ಮಿಸಿ ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಪೈಪ್‌ಲೈನ್ ಅಳವಡಿಕೆ ಹಾಗೂ ಕಾಮಗಾರಿ ತಕ್ಷಣ ಮುಗಿಸುವ ಕುರಿತು ಚರ್ಚಿಸಲು ಗುತ್ತಿದಾರರಿಗೆಕರೆ ಸ್ವೀಕರಿಸುತ್ತಿಲ್ಲ. ಕಾಲುವೆಯ ಕಾಮಗಾರಿಯನ್ನು ಶೀಘ್ರ ಮುಗಿಸಲಾಗುದು.
–ಎಸ್.ಎಸ್.ಪಾವೀನ, ಪಿಡಿಒ ಕುನ್ನೂರ ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.