ADVERTISEMENT

ಹಾವೇರಿ ಜಿಲ್ಲೆಯಲ್ಲಿ ಹಾದಿ ತಪ್ಪಿದ ‘ಜಲಜೀವನ್’: ಮನೆಗೆ ಬಾರದ ‘ಗಂಗೆ’

ಕುಡಿಯುವ ನೀರು ಒದಗಿಸಲು ಸಮನ್ವಯ ಕೊರತೆ

ಸಂತೋಷ ಜಿಗಳಿಕೊಪ್ಪ
Published 4 ನವೆಂಬರ್ 2024, 5:00 IST
Last Updated 4 ನವೆಂಬರ್ 2024, 5:00 IST
<div class="paragraphs"><p>ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ </p></div>

ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ

   

–ಪ್ರಜಾವಾಣಿ ಚಿತ್ರಗಳು/ ಮಾಲತೇಶ ಇಚ್ಚಂಗಿ

ಹಾವೇರಿ: ನೀರು ನೋಡದ ನಳಗಳು, ಕಿತ್ತುಹೋದ ಸಿಮೆಂಟ್, ಕಳಚಿ ಬೀಳುತ್ತಿರುವ ಪೈಪ್‌ಗಳು, ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳು, ಶಿಥಿಲಗೊಳ್ಳುತ್ತಿರುವ ಟ್ಯಾಂಕ್‌ಗಳು...

ADVERTISEMENT

ಜಿಲ್ಲೆಯಲ್ಲಿ ಜಾರಿಯಾಗಿರುವ ಜಲಜೀವನ್ ಮಿಷನ್ ಯೋಜನೆಯ ದುಸ್ಥಿತಿ ಇದು. ‘ಜಲೋತ್ಸವ– ಮನೆ ಮನೆಗೆ ಗಂಗೆ’ ಹೆಸರಿನಡಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಲಾಗಿದೆ. ಮೂರು ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಬಹುತೇಕ ನಳಗಳಲ್ಲಿ ಇದುವರೆಗೂ ನೀರು ಬಂದಿಲ್ಲ. ನೀರು ಬರಬಹುದೆಂದು ಕಾದು ಕಾದು ಜನರು ಸುಸ್ತಾಗಿದ್ದಾರೆ.

ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಲಾಗಿದೆ. ಗ್ರಾಮಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಅದೇ ಟ್ಯಾಂಕ್‌ ನೀರನ್ನು ನಳದ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಯೋಜನೆಯದ್ದಾಗಿದೆ.

ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಉದ್ದೇಶದಿಂದ ರೂಪಿಸಿರುವ ಜಲಜೀವನ್ ಮಿಷನ್ ಯೋಜನೆಗೆ ಜನರ ಮೆಚ್ಚಗೆಯೂ ಇದೆ. ಆದರೆ, ಯೋಜನೆಯ ಜಾರಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಆರೋಪಗಳು ಕೇಳಿಬಂದಿವೆ. ಇವರ ನಿರ್ಲಕ್ಷ್ಯದಿಂದಲೇ ಇಂದಿಗೂ ಮನೆಗಳ ಬಾಗಿಲಿಗೆ ನೀರು ತಲುಪುತ್ತಿಲ್ಲವೆಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಟ್ಯಾಂಕ್ ನಿರ್ಮಾಣ, ಪೈಪ್‌ ಅಳವಡಿಕೆ, ನಳಗಳ ನಿರ್ಮಾಣ ಹಾಗೂ ಜೋಡಣೆ ಕೆಲಸ ಮಾಡುವ ಗುತ್ತಿಗೆಯನ್ನು ವಿವಿಧ ಗುತ್ತಿಗೆದಾರರಿಗೆ ನೀಡಲಾಗಿದೆ. ಗುತ್ತಿಗೆ ಪಡೆದವರು, ಸಮನ್ವಯತೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗುತ್ತಿರುವ ದೂರುಗಳು ಕೇಳಿಬರುತ್ತಿವೆ.

‘ಜಲಜೀವನ್ ಮಿಷನ್ ಯೋಜನೆಯಡಿ ಮನೆ ಎದುರು ನಳ ಸಹ ಹಾಕಿದ್ದಾರೆ. ಆದರೆ, ಹಲವು ತಿಂಗಳಾದರೂ ನಳದಲ್ಲಿ ನೀರು ಬಂದಿಲ್ಲ. ಪೈಪ್ ಅಳವಡಿಕೆಯೇ ಇನ್ನೂ ಮುಗಿದಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನಳಗಳು, ಅವಶೇಷಗಳಾಗುತ್ತಿವೆ. ಕೆಲವು ಕಡೆಗಳಲ್ಲಿ ಪೈಪ್‌ ಮಾತ್ರ ಅಳವಡಿಸಿದ್ದು, ನಳ ಹಾಕಿಲ್ಲ’ ಎಂದು ಬಮ್ಮನಕಟ್ಟಿ ಗ್ರಾಮಸ್ಥರು ದೂರಿದರು.

‘ಯಾವಾಗ ನೀರು ಬರುತ್ತದೆ ? ಎಂಬುದಾಗಿ ಕಾಯುತ್ತ ನಿತ್ಯವೂ ನಳವನ್ನೇ ನೋಡುತ್ತ ಕುಳಿತಿದ್ದೇವೆ. ಆದರೆ, ನೀರು ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು, ಆದಷ್ಟು ಬೇಗ ನಳದಲ್ಲಿ ನೀರು ಬರುವಂತೆ ಮಾಡಬೇಕು’ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮಾತ್ರ ನಳದಲ್ಲಿ ನೀರು ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಈ ಯೋಜನೆ ಉಪಯೋಗವಾಗಿದೆ. ಆದರೆ, ಎಲ್ಲ ಗ್ರಾಮಗಳ ನಳದಲ್ಲಿಯೂ ನೀರು ಬರುವಂತೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಮೊದಲ ಹಂತದಲ್ಲಿ 351 ಕಾಮಗಾರಿಗೆ ಕಾರ್ಯಾದೇಶ: ‘ಜಲಜೀವನ್ ಮಿಷನ್ ಯೋಜನೆಯನ್ನು ಜಿಲ್ಲೆಯಲ್ಲಿ ಮೂರು ಹಂತಗಳಲ್ಲಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದಲ್ಲಿ 351 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿತ್ತು’ ಎಂದು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ₹ 227.60 ಕೋಟಿ ವೆಚ್ಚದಲ್ಲಿ 351 ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಇದರಲ್ಲಿ ಈಗಾಗಲೇ 324 ಕಾಮಗಾರಿಗಳು ಮುಕ್ತಾಯವಾಗಿವೆ’ ಎಂದು ಹೇಳಿದರು.

ಎರಡನೇ ಹಂತದಲ್ಲಿ 240 ಗ್ರಾಮಗಳಲ್ಲಿ ಯೋಜನೆ: ‘ಎರಡನೇ ಹಂತದಲ್ಲಿ ಜಿಲ್ಲೆಯ 240 ಗ್ರಾಮಗಳಲ್ಲಿ ಯೋಜನೆ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ನೀಡಲಾಗಿದೆ. ಈ ಪೈಕಿ 157 ಕಾಮಗಾರಿಗಳು ಮಾತ್ರ ಮುಗಿದಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಅಧಿಕಾರಿ ತಿಳಿಸಿದರು.

‘ಮೂರನೇ ಹಂತದಲ್ಲಿ ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲ್ಲೂಕಿನ 135 ಗ್ರಾಮಗಳಲ್ಲಿ ಯೋಜನೆ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ನೀಡಲಾಗಿದೆ. ಈ ಪೈಕಿ 45 ಕಾಮಗಾರಿಗಳು ಈಗಾಗಲೇ ಮುಗಿದಿವೆ. 82 ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಹೇಳಿದರು.

‘ಕಾಮಗಾರಿ ಮುಗಿದ ಸ್ಥಳಗಳಲ್ಲಿ ನೀರು ಬರುತ್ತಿದೆಯಾ’ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಕಡೆ ನೀರು ಬರುತ್ತಿಲ್ಲ. ಕೆಲ ಕೆಲಸಗಳೂ ಬಾಕಿ ಇವೆ. ಎಲ್ಲ ಕೆಲಸಗಳನ್ನು ಮುಗಿಸಲು ಗುತ್ತಿಗೆದಾರನಿಗೆ ಗಡುವು ನೀಡಲಾಗಿದೆ’ ಎಂದರು.

ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ
ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ
ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ
ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ
ಹಾವೇರಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳ ದುಸ್ಥಿತಿ

‘ದಾಖಲೆಯಲ್ಲಿ ಮಾತ್ರ ಮುಕ್ತಾಯ’

‘ಗ್ರಾಮಕ್ಕೆ ಬರುವ ಅಧಿಕಾರಿಗಳು ನೀರು ಬಾರದ ನಳದ ಎದುರು ನಿಂತುಕೊಂಡು ಫೋಟೊ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಕಾಮಗಾರಿ ಮುಕ್ತಾಯ ಆಗಿರುವುದಾಗಿ ಹೇಳಿ ಹಣ ಪಡೆಯುತ್ತಿದ್ದಾರೆ. ಆದರೆ ನಮ್ಮ ನಳದಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಬಮ್ಮನಕಟ್ಟಿ ಗ್ರಾಮಸ್ಥರು ಆರೋಪಿಸಿದರು. ‘ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಹೊಂದಾಣಿಕೆಯಿಂದ ಕಾಮಗಾರಿ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕಳಪೆ ಕಾಮಗಾರಿಯನ್ನೂ ಮಾಡಿದ್ದಾರೆ. ಕಾಮಗಾರಿ ಮುಕ್ತಾಯವಾದರೂ ನಳದಲ್ಲಿ ನೀರು ಬರುತ್ತಿಲ್ಲವೆಂದರೆ ಏನು ಅರ್ಥ? ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿಯವರು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ಕಾಮಗಾರಿ ಕಳಪೆ ಎಂದಿದ್ದ ಶಾಸಕ ಸವಣೂರು

ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೆ. 2ರಂದು ಸಾಮಾನ್ಯ ಸಭೆ ನಡೆಸಿದ್ದ ಶಾಸಕ ರುದ್ರಪ್ಪ ಲಮಾಣಿ ‘ಜಲ ಜೀವನ್ ಮಿಷನ್ ಕಾಮಗಾರಿ ತಾಲ್ಲೂಕಿನಲ್ಲಿ ಕಳಪೆಯಾಗಿದೆ. ಕಾಮಗಾರಿಗಳ ಪರಿಶೀಲನೆ ಕೈಗೊಂಡು ಕಳಪೆಯಾದ ಕಾಮಗಾರಿಯನ್ನು ಗುರುತಿಸಿ. ಹೊಸದಾಗಿ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ’ ಎಂದು ಅಧಿಕಾರಿಗಳಿಗೆ ಹೇಳಿದ್ದರು. ಆದರೆ ಪರಿಶೀಲನೆ ಏನಾಯಿತು? ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರು.

ಮನೆ ಬಾಗಿಲಿಗೆ ನೀರು ಕೊಡುವ ಜಲಜೀವನ್ ಮಿಷನ್ ಯೋಜನೆ ಒಳ್ಳೆಯದು. ಆದರೆ ಯೋಜನೆ ಜಾರಿ ಸಮರ್ಪಕವಾಗಿ ಆಗಬೇಕು. ನಳದಲ್ಲಿ ನೀರು ಬರಬೇಕು.
–ನವೀನ್‌ ದೇವಗಿರಿ, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.