ಶಿಗ್ಗಾವಿ: ಭಜನೆ, ತತ್ವಪದ ಹಾಡುಗಾರಿಕೆಯ ಜತೆಗೆ ಪಕ್ಕವಾದ್ಯ ಹಾರ್ಮೊನಿಯಂ ನುಡಿಸುತ್ತಾ ಕಲಾಪ್ರೇಮಿಗಳ ಮನಗೆದ್ದಿದ್ದ ತಾಲ್ಲೂಕಿನ ಬಂಕಾಪುರದ ಅಪ್ಪಟ ಗ್ರಾಮೀಣ ಪ್ರತಿಭೆ, ಜಾನಪದ ಕಲಾವಿದ ಸಿದ್ಧಲಿಂಗಪ್ಪ ಚನ್ನಬಸಪ್ಪ ನರೇಗಲ್ಲ ಅವರಿಗೆ ‘ತತ್ವಪದ’ ವಿಭಾಗದಲ್ಲಿ 2021ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ‘ವಾರ್ಷಿಕ ಗೌರವ ಪ್ರಶಸ್ತಿ’ ದೊರೆತಿದೆ.
ತಾಲ್ಲೂಕಿನ ಬಂಕಾಪುರದ ಕೃಷಿ ಕುಟುಂಬದಲ್ಲಿ ಸಿದ್ದಲಿಂಗಪ್ಪ ನರೇಗಲ್ಲ ಅವರು 1957ರಲ್ಲಿ ಜನಿಸಿದರು. ಬಾಲ್ಯದಲ್ಲೇ ಇವರಿಗಿದ್ದ ಕಲಾಸಕ್ತಿಯನ್ನು ಗುರುತಿಸಿದ ತಂದೆ ಚನ್ನಬಸಪ್ಪ ಅವರು ಸಹಕಾರ ನೀಡಿ ಉತ್ತಮ ಕಲಾವಿದರನ್ನಾಗಿ ರೂಪಿಸಿ, ಜಾನಪದ ಪ್ರಪಂಚಕ್ಕೆ ಉಡುಗೊರೆಯನ್ನಾಗಿ ನೀಡಿದರು.
ತಮ್ಮ 16ನೇ ವಯಸ್ಸಿನಲ್ಲಿ ಹೊಲದಲ್ಲಿ ಉತ್ತಿ, ಬಿತ್ತುವ ಕಾಯಕ ಮುಗಿಸಿ, ನಿತ್ಯ ಸಂಜೆ ಹಾರ್ಮೋನಿಯಂ ನುಡಿಸುವುದನ್ನು ಕಲಿತರು. ಭಜನೆ, ತತ್ವಪದ ಹಾಡುಗಾರಿಕೆ ಕಲಿತು ಬಂಕಾಪುರದ ಬೂದಿಬಸವೇಶ್ವರ ದೇವಸ್ಥಾನ ಜಗದ್ಗುರು ಪಂಚಾಚಾರ್ಯ ಭಜನಾ ಸಂಘ ರಚಿಸಿಕೊಂಡು ಇಂದಿಗೂ ಸಹ ರಾತ್ರಿಯಿಡೀ ಹಾರ್ಮೋನಿಯಂ ನುಡಿಸುತ್ತಾ ಹಾಡುವುದನ್ನು ಮೈಗೂಡಿಸಿಕೊಂಡಿದ್ದಾರೆ.
1976ರಿಂದ 1996ರವರೆಗೆ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಭಜನಾ, ತತ್ವಪದ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಹಾನಗಲ್ ತಾಲ್ಲೂಕಿನ ಮಾರನಬೀಡ ಭಜನಾ ಸ್ಪರ್ಧೆ ಸೇರಿದಂತೆ, ಉಳವಿ, ಮಲೆಬೆನ್ನೂರ, ಶಿರಾಳಕೊಪ್ಪ, ಶಿರಹಟ್ಟಿ, ಬಾಳೇಹೊನ್ನೂರ, ಕಪ್ಪದಗಿರಿ, ಸವಣೂರ ಮುಂತಾದ ಕಡೆ ಜಾತ್ರೆ, ಹಬ್ಬ ಹರಿದಿನಗಳಲ್ಲಿ ತತ್ವಪದ ಹಾಡುಗಾರಿಕೆಯ ಪ್ರದರ್ಶನ ನೀಡಿದ್ದಾರೆ.
ಶರಣರ, ಸಂತರ ಕುರಿತಾದ 90ಕ್ಕೂ ಹೆಚ್ಚಿನ ಹಾಡುಗಳನ್ನು ಮತ್ತು 100ಕ್ಕೂ ಹೆಚ್ಚಿನ ತತ್ವಪದ, ಭಜನಾ ಪದಗಳನ್ನು ಸ್ವ-ರಚಿತ ಹಾಡುಗಳ ಸಂಗ್ರಹ ಇವರ ಬಳಿ ಇದೆ. ಅವುಗಳಿಗೆ ಭಿನ್ನ-ವಿಭಿನ್ನ ರಾಗ ಸಂಯೋಜನೆಯನ್ನು ಸ್ವತಃ ಹಾಡಿ ದಣಿವರಿಯದ ಕಲಾವಿದರಾಗಿದ್ದಾರೆ. ಅವರ ಪ್ರತಿಭೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿದ್ದಕ್ಕೆ ಇಲ್ಲಿನ ಕಲಾವಿದರ ಬಳಗ ಹರ್ಷ ವ್ಯಪಡಿಸಿದೆ.
*
ಸಿದ್ದಲಿಂಗಪ್ಪ ಅವರ ಪ್ರತಿಭೆ ಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಜಾನಪದ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲಿ
- ಶಂಕರ ಅರ್ಕಸಾಲಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ
*
ನನ್ನ ಕಲಾಸೇವೆಯನ್ನು ಜಾನಪದ ಅಕಾಡೆಮಿ ಗುರುತಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಇನ್ನೂ ಹೆಚ್ಚಿನ ಕಲಾಸೇವೆಗೆ ಅಕಾಡೆಮಿ ಪ್ರೋತ್ಸಾಹ ನೀಡಿದೆ
- ಸಿದ್ದಲಿಂಗಪ್ಪ ನರೇಗಲ್ಲ, ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.